ಮೈಸೂರು ಶ್ರೀರಾಮಕೃಷ್ಣ ಆಶ್ರಮ 
ದೇಶ

ಮೈಸೂರು ಶ್ರೀರಾಮಕೃಷ್ಣ ಆಶ್ರಮಕ್ಕೆ ಶತಮಾನ ಸಂಭ್ರಮ; ಇಂದಿನಿಂದ ನಾಲ್ಕು ದಿನ ವಿವಿಧ ಕಾರ್ಯಕ್ರಮಗಳು

ಮಹಾನ್​ ಸಂತ ಶ್ರೀರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಮೌಲ್ಯಗಳು, ಶ್ರೀ ಶಾರದಾಮಾತೆಯವರ ಮಹೋನ್ನತ ಸಂದೇಶಗಳು ಮತ್ತು ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ರಾಷ್ಟ್ರನಿರ್ಮಾಣದ ಕಾರ್ಯಕ್ಕೆ ಪ್ರೇರಣೆ ನೀಡುವ ಸ್ವಾಮಿ ವಿವೇಕಾನಂದರ ಆದರ್ಶವೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಮುಕ್ತ ಶಿಕ್ಷಣ, ವಯಸ್ಕರ ಶಿಕ್ಷಣ, ಜೈಲು ಕೈದಿಗಳಿಗೆ ಮೌಲ್ಯ ಶಿಕ್ಷಣ, ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ.
ಅವಿನಾಶ್​ ಜೈನಹಳ್ಳಿ ಮೈಸೂರು
ಎಲ್ಲರಲ್ಲೂ ಅಧ್ಯಾತ್ಮ, ಸನಾತನ ಸಂಸತಿ ಮತ್ತು ಉನ್ನತ ಮೌಲ್ಯಗಳನ್ನು ಬಿತ್ತುವ ಜತೆಗೆ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವಂತಹ ಮಹತ್ಕಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ಈಗ ಶತಮಾನೋತ್ಸವ ಸಂಭ್ರಮ! ಸ್ವಾಮಿ ಸಿದ್ದೇಶ್ವರಾನಂದಜೀ ಅವರ ಪ್ರಯತ್ನ ಹಾಗೂ ಅವಿರತ ಶ್ರಮದಿಂದ 1925ರಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಸ್ಥಾಪನೆಯಾಯಿತು. ಈ ಹಿನ್ನೆಲೆಯಲ್ಲಿ ನವೆಂಬರ್​ 21ರಿಂದ ನಾಲ್ಕು ದಿನ ಶತಮಾನೋತ್ಸವ ಆಚರಿಸಲಾಗುತ್ತಿದೆ. 300 ಸ್ವಾಮೀಜಿಗಳು, 30 ಮಾತೆಯರು, 1000 ಪ್ರತಿನಿಧಿಗಳು, 80 ಗಣ್ಯರು, ಆಶ್ರಮದ ಹಳೇ ವಿದ್ಯಾರ್ಥಿಗಳು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ನಾಲ್ವಡಿ ಅವರ ನೆರವು: ಸ್ವಾಮಿ ವಿವೇಕಾನಂದರು ಭಾರತ ಪರ್ಯಟನ ಸಂದರ್ಭದಲ್ಲಿ 1892ರಲ್ಲಿ ಮೈಸೂರು ನಗರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅಂದಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್​ ಅವರ ಬಂಗಲೆಯ ಹಿಂಭಾಗದಲ್ಲಿದ್ದ ಶಿವನ ದೇವಾಲಯವನ್ನು ತಮ್ಮ ತಂಗುದಾಣವನ್ನಾಗಿ ಮಾಡಿಕೊಂಡಿದ್ದ ಐತಿಹಾಸಿಕ ಟನೆ ಶ್ರೀರಾಮಕೃಷ್ಣ&ವಿವೇಕಾನಂದ ಭಾವಾಂದೋಲನಕ್ಕೆ ಬೀಜಾಂಕುರವಾಯಿತು.
ಸ್ವಾಮಿ ವಿವೇಕಾನಂದರು ತಮ್ಮ ಅಂರ್ತದೃಷ್ಟಿಯಿಂದ ಮೈಸೂರು ಮುಂಬರುವ ದಿನಗಳಲ್ಲಿ ತಮ್ಮ ಪ್ರಬಲ ಕಾರ್ಯೇತ್ರವಾಗುವುದು ಎಂಬುದನ್ನು ತಿಳಿದಿದ್ದರು. ಬಳಿಕ ಸ್ವಾಮಿ ಸಿದ್ದೇಶ್ವರಾನಂದಜೀ ಶ್ರಮದಿಂದ ಒಂದು ಬಾಡಿಗೆ ಮನೆಯಲ್ಲಿ ಆಶ್ರಮ ಆರಂಭಗೊಂಡಿತು. ಮುಂದೆ 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರ ನೆರವಿನಿಂದ ಮೈಸೂರಿನ ಯಾದವಗಿರಿಯ ಇಂದಿನ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿತು. ಆರಂಭದ ದಿನಗಳಿಂದಲೂ ಸಮಾಜದ ಪ್ರಜ್ಞಾವಂತರನ್ನು ತನ್ನ ಉದಾತ್ತ ಧ್ಯೇಯಗಳಿಂದ ಸೆಳೆಯುತ್ತಿರುವುದು ಆಶ್ರಮದ ವೈಶಿಷ್ಟ್ಯವಾಗಿದೆ.
ಶ್ರೀರಾಮಕೃಷ್ಣ ಆಶ್ರಮದ ಮೂಲ ಪ್ರೇರಣೆ ಭಗವಾನ್​ ಶ್ರೀರಾಮಕೃಷ್ಣರು, ಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರು. ಆಶ್ರಮವು ತನ್ನ ಆಧ್ಯಾತ್ಮಿಕ ಬೆಳವಣಿಗೆಯನ್ನು ಕಳೆದ ನೂರು ವರ್ಷಗಳಿಂದಲೂ ತನ್ನ ಸೇವಾಕಾರ್ಯಗಳಲ್ಲಿ ಪ್ರಕಟಪಡಿಸುತ್ತ ಬಂದಿರುವುದು ದಿವ್ಯತ್ರಯರ ಕೃಪಾಶೀರ್ವಾದಿಂದಲೇ. ಶ್ರೀರಾಮಕೃಷ್ಣ ಆಶ್ರಮ ಮೈಸೂರು ಇಂತಹ ಸಾಧನೆಯನ್ನು ಈ ನೂರು ವರ್ಷಗಳಲ್ಲಿ ಮಾಡಿದ್ದರೂ ಇದರ ಮುಂದಿರುವ ಧೈಯ ಸಾಧನೆಗೆ ಇದೊಂದು ಪ್ರಾರಂಭಿಕ ಹೆಜ್ಜೆಯಷ್ಟೇ. ಸ್ವಾಮಿ ವಿವೇಕಾನಂದರು ಇಡೀ ಭಾರತವನ್ನೇ ಆಧ್ಯಾತ್ಮಿಕ ತಪೋಭೂಮಿ ಎಂದು ಕರೆದಿದ್ದರು. ಪ್ರತಿಯೊಂದು ಜೀವಿಯೂ ದೇವರೊಡನೆ ಇರುವ ತನ್ನ ಅವಿನಾಭಾವ ಸಂಬಂಧವನ್ನು ಅನುಭೂತಿಗೆ ತರುವ ಆದರ್ಶವನ್ನು ಹೊಂದಿ, ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಈ ಶತಮಾನೋತ್ಸವದ ಆಚರಣೆ ಮೈಸೂರಿನ ಇತಿಹಾಸದಲ್ಲಿ ಬಹಳ ಮಹತ್ವದ್ದಾಗಿದೆ.
ಸ್ವಾಮಿ ಮುಕ್ತಿದಾನಂದಜೀ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರು

ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ

ಪ್ರತಿಭಾವಂತ ಶಿಕ್ಷಕರರ ಮಾರ್ಗದರ್ಶನದಲ್ಲಿ ರಾಷ್ಟ್ರವನ್ನು ಕಟ್ಟುವ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂಬುದನ್ನು ಮನಗಂಡು ಆಶ್ರಮವು 1974ರಲ್ಲಿ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (ಆರ್​ಐಎಂಎಸ್​ಇ) ಪ್ರಾರಂಭಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯನ್ನು ಗಮನಿಸಿ ಸ್ವಾಮಿ ಶಾಂಭವಾನಂದಜಿ ಶಿಕ್ಷಕರಿಗಾಗಿ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಲು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ವರ್ಷ ಈ ಸಂಸ್ಥೆಯು ಸುವರ್ಣ ಮಹೋತ್ಸವಕ್ಕೆ ಸಜ್ಜಾಗಿದೆ. ಸುಮಾರು 4000ಕ್ಕೂ ಹೆಚ್ಚು ಅಧ್ಯಾಪಕರಿಗೆ ಬಿ.ಇಡಿ ತರಬೇತಿ ನೀಡಿದ ಹೆಗ್ಗಳಿಕೆ ಇದರದು.

ವಿವೇಕಾನಂದರ ವಿಚಾರ ತಲುಪಿಸುವ ಕಾರ್ಯ

ಜಾತಿ, ಕುಲ, ಪಂಗಡಗಳ ಎಲ್ಲೆ ಮೀರಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾಮಿ ವಿವೇಕಾನಂದರ ಶಕ್ತಿದಾಯಕ ವಿಚಾರಗಳನ್ನು ತಲುಪಿಸಲಾಗುತ್ತಿದೆ. ಆಧ್ಯಾತ್ಮಿಕತೆಯಲ್ಲಿ ಕೇಂದ್ರೀಕೃತವಾದ ಸಾಮಾಜಿಕ ಬದ್ಧತೆ ಆಶ್ರಮದಲ್ಲಿ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯದ ಇಂಟರ್​ಮೀಡಿಯಟ್​ ತರಗತಿಗಳಲ್ಲಿ ಅನುತ್ತೀರ್ಣರಾದವರಿಗೆ ಮುಕ್ತ ಶಿಕ್ಷಣ, ಗ್ರಾಮೀಣ ಪ್ರದೇಶಗಳ ಸ್ವಚ್ಛತೆ, ವಯಸ್ಕರ ಶಿಕ್ಷಣ, ಲಾಟೀನು ಬೆಳಕಿನಲ್ಲಿ ತರಗತಿಗಳು, ಜೈಲು ಕೈದಿಗಳಿಗೆ ಮೌಲ್ಯಶಿಕ್ಷಣ ಮುಂತಾದ ಸೇವಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಮೈಸೂರಿನ ಆಶ್ರಮದ ಸನಿಹದಲ್ಲಿರುವ ಪಡುವಾರಹಳ್ಳಿ ಮತ್ತು ಕುಂಬಾರಕೊಪ್ಪಲಿನ ಹಿಂದುಳಿದ ವರ್ಗದವರಿಗೆ ವಿವಿಧ ರೀತಿಯ ಸೇವಾಕಾರ್ಯಗಳನ್ನು ನಡೆಸುತ್ತಿದೆ.
ಶ್ರೀರಾಮಕೃಷ್ಣ ಸೇವಾಮಂದಿರದ ಮೂಲಕ ಸೇವೆ
ಆಶ್ರಮವು ಹಿಂದುಳಿದ ಗ್ರಾಮಗಳಲ್ಲಿ "ಶ್ರೀ ರಾಮಕೃಷ್ಣ ಸೇವಾಮಂದಿರ'ವೆಂಬ ಗುಡಿಸಲು ದೇಗುಲಗಳನ್ನು ನಿರ್ಮಿಸಿ ಅವುಗಳ ಮೂಲಕ ಹಳ್ಳಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದೆ ಮತ್ತು ಸನಾತನ ಧಾರ್ಮಿಕ ಪರಂಪರೆಯಲ್ಲಿನ ಜೀವನಕ್ರಮವನ್ನು ಹೇಳಿಕೊಡುತ್ತಿದೆ.ಹೀಗೆ ಗ್ರಾಮೀಣ ಭಾಗದ ಸರ್ವತೋಮುಖ ಬೆಳವಣಿಗೆಗೆ ಅನುಕೂಲ ಕಲ್ಪಿಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಇಂತಹ 11 ಸೇವಾಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ಅರಿವು ಮೂಡಿಸಲು "ಫ್ರೆಂಡ್ಸ್​ ಆಫ್​ ದಿ ಪೂರ್​' ಎಂಬ ಯೋಜನೆ ಎರಡು ದಶಕದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.
ಗದಾಧರ ಅಭ್ಯುದಯ ಪ್ರಕಲ್ಪ
ಈ ಯೋಜನೆಯಡಿ ಆಶ್ರಮದ ಹತ್ತಿರದ ಸರ್ಕಾರಿ ಶಾಲೆಯ ವಿದ್ಯಾರ್ಥಿ&ವಿದ್ಯಾರ್ಥಿನಿಯರಿಗೆ ಶಾಲೆಯ ನಂತರದ ವೇಳೆಯಲ್ಲಿ ಪೂರಕ ಶಿಕ್ಷಣ, ಸಮವಸ್ತ್ರ, ಲೇಖನ ಸಾಮಗ್ರಿಗಳು, ಪೌಷ್ಟಿಕ ಆಹಾರ ಹಾಗೂ ಸಾಂಸತಿಕ ಶಿಕ್ಷಣವನ್ನು ಉಚಿತವಾಗಿ ಒದಗಿಸುತ್ತಿದೆ. ಆಶ್ರಮದ ವತಿಯಿಂದ "ವಿವೇಕಶಿಕ್ಷಣ' ಎಂಬ ಶೈಕ್ಷಣಿಕ ಕಾರ್ಯಕ್ರಮದ ಮೂಲಕ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಾರಕ್ಕೊಮ್ಮೆ ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಾರ್ಥನಾಮಂದಿರಗಳು ವಿಶಿಷ್ಟವಾಗಿವೆ. ಇದರಲ್ಲಿ ದಿನನಿತ್ಯದ ಪೂಜೆ, ಭಜನೆ ನಡೆಯುತ್ತದೆ.
ಜ್ಞಾನತೃಷೆಯನ್ನು ತಣಿಸುವ ಪ್ರಕಾಶನ
ಆಶ್ರಮದ ಪ್ರಕಾಶನ ವಿಭಾಗವು ಸುಮಾರು 500ಕ್ಕೂ ಹೆಚ್ಚು ಅಮೂಲ್ಯ ಕನ್ನಡ ಗ್ರಂಥಗಳನ್ನು ಪ್ರಕಟಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜ್ಞಾನಪಿಪಾಸುಗಳು ಹಾಗೂ ಸಾರ್ವಜನಿಕರ ಜ್ಞಾನತೃಷೆಯನ್ನು ತಣಿಸುತ್ತಿದೆ. ಆಶ್ರಮದಿಂದ ಪ್ರಕಟಗೊಳ್ಳುತ್ತಿರುವ "ವಿವೇಕಪ್ರಭ' ಮಾಸಪತ್ರಿಕೆ ಈ ಶತಮಾನೋತ್ಸವದ ಸಂದರ್ಭದಲ್ಲಿ ತನ್ನ ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ.
ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಲಿತ ಶಿಕ್ಷಣದಿಂದಲೇ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಶಿಕ್ಷಣದ ಜತೆಗೆ ಶಿಸ್ತು, ಜೀವನಮೌಲ್ಯ ಎಲ್ಲವನ್ನೂ ಕಲಿತಿದ್ದೇನೆ. ಆಶ್ರಮದಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಂಡಿದ್ದಾರೆ.
ಜಿ.ಕುಮಾರನಾಯಕ್​ ಸಂಸದ, ರಾಮಕೃಷ್ಣ ಆಶ್ರಮದ ಹಿರಿಯ ವಿದ್ಯಾರ್ಥಿ
ರಾಷ್ಟ್ರಕವಿ ಕುವೆಂಪು ಕಲಿತ ತಾಣ
ರಾಷ್ಟ್ರಕವಿ ಕುವೆಂಪು ವಿದ್ಯಾರ್ಥಿ ದೆಸೆಯಲ್ಲಿ 14 ವರ್ಷಗಳ ಕಾಲ ರಾಮಕೃಷ್ಣ ಆಶ್ರಮದಲ್ಲಿ ನೆಲೆಸಿದ್ದರು. ಕುವೆಂಪು ಪ್ರತಿಭೆ ಗುರುತಿಸಲ್ಪಟ್ಟು ವಿಕಾಸಗೊಂಡಿದ್ದು ಶ್ರೀರಾಮಕೃಷ್ಣ ಆಶ್ರಮದಲ್ಲಿಯೇ. ಅಂತೆಯೇ ಶ್ರೀರಾಮಕೃಷ್ಣ&ವಿವೇಕಾನಂದರ ವಿಚಾರಧಾರೆಗಳಿಗೆ ಸ್ಪಂದಿಸುತ್ತ ಬಂದಿರುವ ರಾಷ್ಟ್ರಕವಿ ಜಿ.ಎಸ್​.ಶಿವರುದ್ರಪ್ಪ, ಎಸ್​.ಎಲ್​.ಭೈರಪ್ಪ, ಪ್ರಭುಶಂಕರ, ಪ್ರೊ.ಪ್ರಭುಪ್ರಸಾದ್​, ದೇಜಗೌ, ಡಾ.ಸಿ.ಪಿ. ಕೃಷ್ಣಕುಮಾರ್​ ಮುಂತಾದವರೆಲ್ಲರೂ ಶ್ರೀರಾಮಕೃಷ್ಣ ಆಶ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದವರೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಎಸ್​.ಎಂ.ಕೃಷ್ಣ ಕೂಡ ಆಶ್ರಮದ ವಿದ್ಯಾರ್ಥಿಯಾಗಿದ್ದರು. ಇಲ್ಲಿ ಕಲಿತ ಅನೇಕರು ಐಎಎಸ್​, ಐಪಿಎಸ್​, ಕೆಎಎಸ್​ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಉನ್ನತ ಹುದ್ದೆಯಲ್ಲಿದ್ದಾರೆ. ಕೆಲವರು ಸಾರ್ವಜನಿಕ ಜೀವನದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಮೌಲ್ಯಾಧಾರಿತ ಶಿಕ್ಷಣ ಪ್ರಸಾರ

ಶ್ರೀರಾಮಕೃಷ್ಣ ವಿದ್ಯಾಶಾಲೆ 1953ರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. 1949ರಲ್ಲಿ ಆರಂಭಗೊಂಡ "ಶ್ರೀರಾಮಕೃಷ್ಣ ಸ್ಟೂಡೆಂಟ್ಸ್​ ಹೋಮ್​' ವಿದ್ಯಾರ್ಥಿನಿಲಯವೇ 1953ರಲ್ಲಿ ಶ್ರೀರಾಮಕೃಷ್ಣ ವಿದ್ಯಾಶಾಲೆಯಾಗಿದೆ. ಸ್ವಾಮಿ ಶಾಂಭವಾನಂದಜೀ ಅವರ ದೂರದರ್ಶಿತ್ವದಿಂದ ಆರಂಭಗೊಂಡ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಪಠ್ಯಕ್ರಮದ ಶಿಕ್ಷಣವಷ್ಟೇ ಅಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ಬೋಧಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶಿಸ್ತುಗಳನ್ನು ಕಲಿಸಲಾಗುತ್ತದೆ. ಹೀಗೆ, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು, ಈಜುಕೊಳದಲ್ಲಿ ಈಜುವುದನ್ನು ಕಲಿಯುವುದು, ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು, ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆಯನ್ನು ಸೂಕ್ತ ಹವ್ಯಾಸಗಳಿಂದ ವಿಕಾಸಗೊಳಿಸುವುದು, ಇವೆಲ್ಲವೂ ಶಾಲೆಯ ದಿನಚರಿಗಳಲ್ಲಿ ಒಳಗೊಂಡಿದೆ. 72 ವರ್ಷಗಳಲ್ಲಿ ಸುಮಾರು 7,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶದಾದ್ಯಂತ ಹಾಗೂ ವಿದೇಶಗಳಲ್ಲಿ ಪ್ರತಿಷ್ಠಿತ ಹುದ್ದೆಗಳಲ್ಲಿದ್ದು ಸಮಾಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ನಾಲ್ಕು ದಿನಗಳ ಸಮಾರಂಭ

ನವೆಂಬರ್​ 21ರಂದು ಬೆಳಗ್ಗೆ 10.15ಕ್ಕೆ 300 ಪೌರಕಾರ್ಮಿಕರಿಗೆ ನಾರಾಯಣಪೂಜೆ ಸಲ್ಲಿಸುವ ಮೂಲಕ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಗುತ್ತದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 11.50ಕ್ಕೆ ಶತಮಾನೋತ್ಸವ ಸ್ಮರಣ ಸಂಚಿಕೆ, "ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದರು' ಗ್ರಂಥ, ಆಶ್ರಮದ ಇತಿಹಾಸ, ಪರಿಷತ ಗ್ರಂಥದ ಬಿಡುಗಡೆ ಮಾಡಲಾಗುತ್ತದೆ. ಮಧ್ಯಾಹ್ನ 3.30ಕ್ಕೆ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಕವರ್​, ಪಿಕ್ಚರ್​ ಪೋಸ್ಟ್​ ಕಾರ್ಡ್​, "ಶ್ರೀರಾಮಕೃಷ್ಣ ಆಶ್ರಮ&100 ವರ್ಷಗಳು' ವಿಡಿಯೋ ಬಿಡುಗಡೆಗೊಳಿಸಲಾಗುತ್ತದೆ. ರಾಮಕೃಷ್ಣಮಠ, ರಾಮಕೃಷ್ಣ ಮಿಷನ್​, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್​ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಊಟಿ ರಾಮಕೃಷ್ಣಮಠದ ಸ್ವಾಮಿ ರಾವೇಶಾನಂದಜಿ, ಪ್ರವಾಸೋದ್ಯಮ ಸಚಿವ ಎಚ್​.ಕೆ.ಪಾಟೀಲ ಇನ್ನಿತರರು ಪಾಲ್ಗೊಳ್ಳುವರು.
ನ.22ರಂದು ಬೆಳಗ್ಗೆ 10ಕ್ಕೆ ವಿವೇಕ ಯಾತ್ರೆ ನಡೆಯಲಿದೆ. ರಾತ್ರಿ 8ಕ್ಕೆ ರಾಮಕೃಷ್ಣ ವಿದ್ಯಾಶಾಲೆಯ ಶೈಕ್ಷಣಿಕ ಸೇವೆಯ ಅವಲೋಕನ ಮತ್ತು ರಾಮಕೃಷ್ಣ&ವಿವೇಕಾನಂದ ಭಾವಧಾರೆಗೆ ಮೈಸೂರು ರಾಜಮನೆತನದ ಕೊಡುಗೆ ಕುರಿತು ಅಧಿವೇಶನ ನಡೆಯಲಿದ್ದು, "ಶ್ರೀರಾಮಕೃಷ್ಣ ಆಶ್ರಮದ& 100 ವರ್ಷಗಳ ಸಾಕ್ಷ ಚಿತ್ರ ಪ್ರಸ್ತುತಪಡಿಸಲಾಗುತ್ತದೆ. ನ.24ರಂದು ಬೆಳಗ್ಗೆ 9ಕ್ಕೆ ಸಮರ್ಪಣ ಸಮಾವೇಶ ಏರ್ಪಡಿಸಿದ್ದು, ಶ್ರೀರಾಮಕೃಷ್ಣರಿಗೆ ನೂರು ವರ್ಷಗಳ ಸತತ ಸೇವೆಯ ಸಾಂಕೇತಿಕ ಸಮರ್ಪಣೆ ಇದಾಗಿದೆ.