ಸಿಜೆಪಿ ಕಾರ್ಯಕರ್ತರಿಗೆ ಸೋನಮ್ ವಾಂಗ್ಚುಕ್ ಕಿವಿಮಾತು
- NEET ಅಕ್ರಮ ವಿರೋಧಿ ಹೋರಾಟಕ್ಕೆ ಜಯ
- ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಕಾಕ್ರೋಚ್ ಜನತಾ ಪಾರ್ಟಿಯಿಂದ ಸಂಭ್ರಮಾಚರಣೆ
- ವಿಜಯವನ್ನು ಆನಂದಿಸಿ ಆದರೆ ನಮ್ರತೆಯನ್ನು ಮರೆಯಬೇಡಿ ಎಂದ ಸೋನಮ್ ವಾಂಗ್ಚುಕ್
ನವದೆಹಲಿ: ಕಳೆದೊಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೀಟ್ ಪರೀಕ್ಷೆಯಲ್ಲಿ ಉಂಟಾದ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇದಕ್ಕೆ ಖ್ಯಾತ ಪರಿಸರವಾದಿ ಸೋನಮ್ ವಾಂಗ್ಚುಕ್ ಕೂಡ ಬೆಂಬಲವನ್ನು ಸೂಚಿಸಿ, ಸರ್ಕಾರದ ಗಮನ ಸೆಳೆಯಲು 26 ದಿನಗಳ ಉಪವಾಸವನ್ನು ಕೈಗೊಂಡಿದ್ದರು.
ಈ ಹೋರಾಟದ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವ ಜೊತೆಗೆ ಇನ್ಮುಂದೆ ಪರೀಕ್ಷಾ ಅಕ್ರಮದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ಮಸೂದೆಯನ್ನು ಜಾರಿಗೆ ತಂದಿದೆ.
ಈಗ, ತಮ್ಮ ಹೋರಾಟ ಸಫಲವಾದ ಹಿನ್ನಲೆ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಹೋಟೆಲ್ವೊಂದರಲ್ಲಿ ಮಾಡಿರುವ ಸಂಭ್ರಮಾಚರಣೆಗೆ ಕೆಲ ದಿಕ್ಕುಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸೋನಮ್ ವಾಂಗ್ಚುಕ್ (Sonam Wangchuk on CJP Party) ಕೂಡ ಸಿಜೆಪಿಗೆ ಕಿವಿಮಾತನ್ನು ಹೇಳಿದ್ದಾರೆ.
ವಿಜಯದ ಜೊತೆಗೆ ನಮ್ರತೆಯನ್ನು ಬೆಳೆಸಿಕೊಳ್ಳಿ!
ಈ ಹೋರಾಟದಲ್ಲಿ ಸತತ 26 ದಿನಗಳ ವರೆಗೆ ಉಪವಾಸವಿದ್ದು, ಕೇಂದ್ರ ಸರ್ಕಾರ ಈ ಪ್ರತಿಭಟನೆಯತ್ತ ತಿರುಗಿ ನೋಡುವಂತೆ ಮಾಡಿದ ಸೋನಮ್ ವಾಂಗ್ಚುಕ್, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕಾರಣ ದೆಹಲಿಯಲ್ಲಿ ಹೋಟೆಲ್ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ.
ಈ ಸಂಭ್ರಮಾಚರಣೆ ಕುರಿತು, ಸೋನಮ್ ವಾಂಗ್ಚಕ್ರಲ್ಲಿ ಕೇಳಿದಾಗ, ಯಾವುದೇ ಸಂಭ್ರಮಾಚರಣೆ ಆಗಲಿ ಅದರಲ್ಲಿ ನಮ್ರತೆ ಇರಬೇಕು ಹಾಗೆಯೇ ಎಲ್ಲರನ್ನು ಪ್ರೀತಿಯಿಂದ ಕಾಣುವ ಗುಣವಿರಬೇಕೆಂದು ಸೋನಮ್ ವಾಂಗ್ಚುಕ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಾವು ಅತಿಥಿ ಸತ್ಕಾರ ಮಾಡಿದ್ದೇವೆ!
ತಮ್ಮ ಪಾರ್ಟಿ ಬಗ್ಗೆ ಸಾಮಾಜಿಕ ಜಾಲತಾಣರಗಳಲ್ಲಿ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್, ನಾವು ಪಾರ್ಟಿಯನ್ನು ಯಾವುದೇ ಪಂಚತಾರಾ ಹೋಟೆಲ್ನಲ್ಲಿ ನಡೆಸಿಲ್ಲ. ಇಲ್ಲಿರುವ ಬಹುತೇಕರು ಭಾರತದ ಇತರೆ ಭಾಗದಿಂದ ಬಂದವರಾಗಿದ್ದರು. 37 ದಿನಗಳ ಹೋರಾಟದ ನಂತರ ಅವರು ತಮ್ಮ ಊರಿಗೆ ಮರಳಲು ಮುಂದಾದಾಗ ನಾವು ಅವರಿಗೆ ಸತ್ಕರಿಸಿದ್ದೆವೆ ಅಷ್ಟೇ ಎಂದು ದಾಸ್ ತಿಳಿಸಿದ್ದಾರೆ, (ಏಜನ್ಸೀಸ್).