ಜ್ಞಾನೇಶ್ ಕುಮಾರ್ ಜೊತೆ ಮಾಜಿ ಸಿಎಂ ಪುತ್ರನ ಆತ್ಮೀಯತೆ!  
ದೇಶ

ಜ್ಞಾನೇಶ್ ಕುಮಾರ್ ಜೊತೆ ಮಾಜಿ ಸಿಎಂ ಪುತ್ರನ ಆತ್ಮೀಯತೆ! ಪೋಟೋ ಶೇರ್​ ಮಾಡುವ ಮೂಲಕ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ತಾ ಕಾಂಗ್ರೆಸ್? | Ajay Singh

ಭೋಪಾಲ್: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗೆ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಸಿಂಗ್ (ರಾಹುಲ್ ಭಯ್ಯಾ) ತೆಗೆಸಿಕೊಂಡಿರುವ ಫೋಟೋವೊಂದು ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಿರಂತರವಾಗಿ ಆರೋಪಗಳ ಸುರಿಮಳೆ ಸುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಅವರದ್ದೇ ಪಕ್ಷದ ಶಾಸಕ ಜ್ಞಾನೇಶ್ ಕುಮಾರ್ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿರುವುದು ಬಿಜೆಪಿಗೆ ದೊಡ್ಡ ಅಸ್ತ್ರವನ್ನೇ ನೀಡಿದೆ.

ವಿವಾದ ಭುಗಿಲೇಳಲು ಕಾರಣವೇನು?

ನವೆಂಬರ್ 23ರಂದು ನಡೆದ ಖಾಸಗಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭೋಪಾಲ್​ಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯದ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಿ ಉಭಯಕುಶಲೋಪರಿ ವಿಚಾರಿಸಿದ್ದರು. ಬಳಿಕ, ಈ ಭೇಟಿಯ ಫೋಟೋಗಳನ್ನು ಅಜಯ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ನಡೆದ ಸೌಜನ್ಯಯುತ ಭೇಟಿ ಇದಾಗಿದ್ದರೂ, ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ!

ಅಜಯ್ ಸಿಂಗ್ ಹಂಚಿಕೊಂಡ ಫೋಟೋಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಕ್ತಾರ ದುರ್ಗೇಶ್ ಕೇಸ್ವಾನಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ನ ಕೇಂದ್ರ ನಾಯಕತ್ವ ಮತ್ತು ರಾಜ್ಯ ನಾಯಕರ ನಿಲುವಿನಲ್ಲಿರುವ ವಿರೋಧಾಭಾಸವನ್ನು ಈ ಫೋಟೋ ಬಯಲು ಮಾಡಿದೆ ಎಂದು ಅವರು ಟೀಕಿಸಿದ್ದಾರೆ. ಈ ಬೆಳವಣಿಗೆಯಿಂದ ಎಲ್ಲವೂ ಸ್ಪಷ್ಟವಾಗಿದೆ ಎಂದು ಹೇಳಿರುವ ಕೇಸ್ವಾನಿ, ಹಿಂದಿಯ ದೂಧ್ ಕಾ ದೂಧ್ ಔರ್ ಪಾನಿ ಕಾ ಪಾನಿ (ಹಾಲು ಹಾಲಾಯಿತು, ನೀರು ನೀರಾಯಿತು - ಸತ್ಯ ಬಯಲಾಗಿದೆ) ಎಂಬ ಗಾದೆಯನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.

ಒಂದೆಡೆ ರಾಹುಲ್ ಗಾಂಧಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡುತ್ತಾ ಟೀಕಿಸುತ್ತಿದ್ದಾರೆ. ಮತ್ತೊಂದೆಡೆ ಅವರದ್ದೇ ಪಕ್ಷದ ಹಿರಿಯ ನಾಯಕರು ಆಯುಕ್ತರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್‌ನ ದ್ವಂದ್ವ ನಿಲುವಿಗೆ ಸಾಕ್ಷಿಯಲ್ಲವೇ? ಎಂದು ಕೇಸ್ವಾನಿ ಪ್ರಶ್ನಿಸಿದ್ದಾರೆ.

ಯಾರು ಈ ರಾಹುಲ್ ಭಯ್ಯಾ?

ಅಜಯ್ ಸಿಂಗ್ ಅವರು ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಶಾಸಕರಾಗಿದ್ದಾರೆ. ಇವರು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಅರ್ಜುನ್ ಸಿಂಗ್ ಅವರ ಪುತ್ರ. ರಾಜ್ಯ ರಾಜಕಾರಣದಲ್ಲಿ ರಾಹುಲ್ ಭಯ್ಯಾ ಎಂದೇ ಚಿರಪರಿಚಿತರಾಗಿರುವ ಅಜಯ್ ಸಿಂಗ್, ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

ವಿವಾಹ ಸಮಾರಂಭದಲ್ಲಿ ನಡೆದ ಈ ಭೇಟಿಯ ವೇಳೆ ಚುನಾವಣೆ ಅಥವಾ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾಹಿತಿಯಿಲ್ಲ. ಇದು ಕೇವಲ ಸೌಜನ್ಯಯುತ ಭೇಟಿಯಾಗಿತ್ತು ಎನ್ನಲಾಗಿದೆ. ಆದಾಗ್ಯೂ, ರಾಹುಲ್ ಗಾಂಧಿ ಅವರು ಚುನಾವಣಾ ಆಯುಕ್ತರ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ಎತ್ತುತ್ತಿರುವ ಸಂದರ್ಭದಲ್ಲೇ ಈ ಫೋಟೋಗಳು ಹೊರಬಂದಿರುವುದರಿಂದ, ಕಾಂಗ್ರೆಸ್‌ನೊಳಗಿನ ವಿರೋಧಾಭಾಸದ ನಿಲುವುಗಳಿಗೆ ಪಕ್ಷವು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಪಟ್ಟುಹಿಡಿದಿದೆ. ಒಟ್ಟಾರೆಯಾಗಿ, ಒಂದು ಸೌಜನ್ಯಯುತ ಭೇಟಿಯ ಫೋಟೋ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಹೊಸ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ(ಏಜೆನ್ಸೀಸ್​).