ಜಾರಿಯಾದ ಕೆಲವೇ ಗಂಟೆಗಳಲ್ಲಿ ಮುರಿದುಬಿದ್ದ ಕದನ ವಿರಾಮ: ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ, ಐವರ ಸಾವು!
ಬೈರೂತ್: ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯ ನಡುವೆ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಒಪ್ಪಂದ ಮುರಿದುಬಿದ್ದಿದೆ. ಶನಿವಾರ ಮುಂಜಾನೆ ಇಸ್ರೇಲ್(Israel Air strikes Lebanon) ಪಡೆಗಳು ದಕ್ಷಿಣ ಲೆಬನಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ಸಂಜೆಯಷ್ಟೇ ಅಮೆರಿಕ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮ ಒಪ್ಪಂದವು ಈ ರಕ್ತಪಾತದಿಂದಾಗಿ ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ.
ನಬತಿಯಾ ವಲಯ ಧೂಳೀಪಟ: ಮುಂಜಾನೆ ಮುಂದುವರಿದ ಶೆಲ್ ದಾಳಿ
ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಇಸ್ರೇಲ್‌ನ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ದಕ್ಷಿಣ ಲೆಬನಾನ್‌ನ ನಬತಿಯಾ ಪ್ರಾಂತ್ಯದಾದ್ಯಂತ ರಾತ್ರೋರಾತ್ರಿ ಭೀಕರ ದಾಳಿ ನಡೆಸಿವೆ. ಈ ದಾಳಿಯ ತೀವ್ರತೆಗೆ ಹಲವು ವಸತಿ ಸಮುಚ್ಚಯಗಳು ಮತ್ತು ನಾಗರಿಕರ ಮನೆಗಳು ನೆಲಸಮಗೊಂಡಿವೆ.
ಕದನ ವಿರಾಮ ಜಾರಿಯಲ್ಲಿದ್ದರೂ ಸಹ, ಶನಿವಾರ ಮುಂಜಾನೆ ಸೂರ್ಯ ಮೂಡುವ ಮುನ್ನವೇ ನಬತಿಯಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಇಸ್ರೇಲ್ ಪಡೆಗಳು ನಿರಂತರವಾಗಿ ಫಿರಂಗಿ ಶೆಲ್ ದಾಳಿ ನಡೆಸಿ ಭೀತಿ ಸೃಷ್ಟಿಸಿವೆ. ಕದನ ವಿರಾಮ ಜಾರಿಗೆ ಬಂದ ಮೊದಲ ಒಂದು ಗಂಟೆಯಲ್ಲೇ ಇಸ್ರೇಲ್ ಈ ದಾಳಿಗಳನ್ನು ಆರಂಭಿಸಿತ್ತು ಎಂದು ಲೆಬನಾನ್ ಭದ್ರತಾ ಮೂಲಗಳು ಖಚಿತಪಡಿಸಿವೆ.
ಹೆಜ್ಬೊಲ್ಲಾ ವಿರುದ್ಧ ಒಪ್ಪಂದ ಉಲ್ಲಂಘನೆಯ ಆರೋಪ ಹೊರಿಸಿದ ಇಸ್ರೇಲ್
ಈ ದಾಳಿಗಳ ಬೆನ್ನಲ್ಲೇ ಇಸ್ರೇಲ್ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ಪ್ರತಿಕ್ರಿಯಿಸಿದ್ದು, ತಮ್ಮ ದೇಶದ ರಕ್ಷಣೆಗಾಗಿ ಇಸ್ರೇಲ್ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯೂಫೋರ್ಟ್ ಕೋಟೆ ಮತ್ತು ಅಲಿ ತಾಹರ್ ಪರ್ವತ ಶ್ರೇಣಿಯ ವಲಯಗಳಲ್ಲಿ ತಮ್ಮ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ತಿಳಿಸಿದ್ದಾರೆ.
ಹೆಜ್ಬೊಲ್ಲಾ ಸಂಘಟನೆಯು ಕದನ ವಿರಾಮದ ಒಪ್ಪಂದಗಳನ್ನು ಗಾಳಿಗೆ ತೂರಿ, ಗಡಿ ಭಾಗದಲ್ಲಿ ತನ್ನ ಮಿಲಿಟರಿ ಬಲವನ್ನು ಮರುಸ್ಥಾಪಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ ನಮಗೆ ಎದುರಾಗುವ ಯಾವುದೇ ಭದ್ರತಾ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಪಡೆಗಳು ಸನ್ನದ್ಧವಾಗಿವೆ ಎಂದು ಹೆಜ್ಬೊಲ್ಲಾ ಮೇಲೆಯೇ ಒಪ್ಪಂದ ಉಲ್ಲಂಘನೆಯ ಗೂಬೆ ಕೂರಿಸಿದ್ದಾರೆ. ಈ ಕದನ ವಿರಾಮಕ್ಕೂ ಮುನ್ನ ನಡೆದ ಭೀಕರ ಸಂಘರ್ಷದಲ್ಲಿ ಇಸ್ರೇಲ್ ದಾಳಿಗೆ ಲೆಬನಾನ್‌ನ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರೆ, ಹೆಜ್ಬೊಲ್ಲಾ ದಾಳಿಗೆ ನಾಲ್ಕು ಇಸ್ರೇಲಿ ಸೈನಿಕರು ಬಲಿಯಾಗಿದ್ದರು.
ಸ್ವಿಟ್ಜರ್ಲೆಂಡ್‌ನಲ್ಲಿ ಪುನರಾರಂಭಗೊಳ್ಳಲಿರುವ ಅಮೆರಿಕ-ಇರಾನ್ ಮಾತುಕತೆ
ಲೆಬನಾನ್ ಗಡಿಯಲ್ಲಿ ಉಂಟಾಗಿರುವ ಈ ದಿಢೀರ್ ಉದ್ವಿಗ್ನತೆಯು ಮಧ್ಯಪ್ರಾಚ್ಯದ ಶಾಂತಿ ಮಾತುಕತೆಯ ಮೇಲೆ ಮತ್ತೊಮ್ಮೆ ಕರಿನೆರಳು ಚಾಚಿದೆ. ಲೆಬನಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಪ್ರಮುಖ ರಾಜತಾಂತ್ರಿಕ ಮಾತುಕತೆಗಳನ್ನು ತಾತ್ಕಾಲಯಿಕವಾಗಿ ಮುಂದೂಡಲಾಗಿತ್ತು.
ಆದರೆ, ಕದನ ವಿರಾಮದ ಉಪ್ಷಂದದ ಹಿನ್ನೆಲೆಯಲ್ಲಿ ಈ ಮಾತುಕತೆಗಳನ್ನು ಪುನರಾರಂಭಿಸಲು ಉಭಯ ದೇಶಗಳು ಸಜ್ಜಾಗಿವೆ. ಪ್ರಾದೇಶಿಕ ಭದ್ರತೆ ಹಾಗೂ ಜಾಗತಿಕ ಇಂಧನ ಸಾಗಣೆಯ ಜೀವನಾಡಿಯಾದ ಹೊರ್ಮುಜ್ ಜಲಸಂಧಿಯ ರಕ್ಷಣೆಯ ದೃಷ್ಟಿಯಿಂದ ಈ ಅಮೆರಿಕ-ಇರಾನ್ ಮಾತುಕತೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ, ಇಸ್ರೇಲ್‌ನ ಈ ತಾಜಾ ದಾಳಿಗಳು ಈ ರಾಜತಾಂತ್ರಿಕ ಪ್ರಯತ್ನಗಳಿಗೆ ಎಷ್ಟು ಪೂರಕವಾಗಲಿವೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).