CBSE Revaluation 2026 ಸಾಂದರ್ಭಿಕ ಚಿತ್ರ
CBSE Revaluation 2026: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹತ್ತನೇ ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳ ನಂತರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖವಾದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ದೋಷ ಮುಕ್ತ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು, ಮಂಡಳಿಯು ಜೂನ್ 1, 2026 ರಂದು ಅಧಿಕೃತ ಮರುಮೌಲ್ಯಮಾಪನ ಪೋರ್ಟಲ್ ಅನ್ನು ಸಕ್ರಿಯಗೊಳಿಸಲು ನಿರ್ಧರಿಸಿದೆ.
ಪೋಸ್ಟ್ನಲ್ಲಿ ಏನಿದೆ?
ಸಿಬಿಎಸ್‌ಇ ತನ್ನ ಸಾಮಾಜಿಕ ಮಾಧ್ಯಮ ಜಾಲತಾಣವಾದ 'X' (ಎಕ್ಸ್) ನಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮೌಲ್ಯಮಾಪನದ ಅತ್ಯುನ್ನತ ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳನ್ನು ಖಚಿತಪಡಿಸಿಕೊಳ್ಳಲು ಫಲಿತಾಂಶದ ನಂತರದ ಚಟುವಟಿಕೆಗಳ ಪೋರ್ಟಲ್ ಜೂನ್ 1 ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದೆ.
ಆದಾಗ್ಯೂ, ಮಂಡಳಿಯು cbse.gov.in ನಲ್ಲಿ ಫಲಿತಾಂಶದ ನಂತರದ ಸೌಲಭ್ಯ ಲಿಂಕ್ ಅನ್ನು ಸಕ್ರಿಯಗೊಳಿಸುವುದರ ಜೊತೆಗೆ ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು ಮಂಡಳಿಯು ಮೇ 25 ರವರೆಗೆ ಗಡುವನ್ನು ವಿಸ್ತರಿಸಿತ್ತು.
ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶವೆಂದರೆ, ಮಂಡಳಿಯು ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸುತ್ತಿದೆ. ಮೊದಲ ಹಂತದಲ್ಲಿ (ಮೇ 19 ರಿಂದ 25 ರವರೆಗೆ), ವಿದ್ಯಾರ್ಥಿಗಳು ಬಯಸಿದ ವಿಷಯಗಳ ಸ್ಕ್ಯಾನ್ ಮಾಡಿದ ಉತ್ತರ ಪುಸ್ತಕವನ್ನು ವಿನಂತಿಸಬಹುದು. ಎರಡನೇ ಹಂತದಲ್ಲಿ (ಜೂನ್ 1 ರಿಂದ ಪ್ರಾರಂಭ) ವಿದ್ಯಾರ್ಥಿಗಳು ಗಮನಿಸಿದ ಸಮಸ್ಯೆಗಳ ಪರಿಶೀಲನೆ ಮಾಡುವುದು ಮತ್ತು ತಮ್ಮ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಹುದು.
12 ನೇ ತರಗತಿಯ ವಿದ್ಯಾರ್ಥಿಗಳು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ತರಾತುರಿಯಲ್ಲಿ ಅರ್ಜಿ ಸಲ್ಲಿಸುವ ಬದಲು, ತಮ್ಮ ಉತ್ತರ ಪತ್ರಿಕೆಯಲ್ಲಿನ ಪ್ರತಿಯೊಂದು ಪ್ರಶ್ನೆ ಹಾಗೂ ಅದಕ್ಕೆ ನೀಡಿರುವ ಅಂಕಗಳನ್ನು ಸರಿಯಾಗಿ ಗುರುತಿಸಿ, ಅಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಅಥವಾ ತಪ್ಪುಗಳನ್ನು ಸ್ಪಷ್ಟವಾಗಿ ಬರೆದಿಟ್ಟುಕೊಳ್ಳಲು ತಿಳಿಸಲಾಗಿದೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ, ವಿದ್ಯಾರ್ಥಿಗಳು ತಮ್ಮ ಇಷ್ಟದಂತೆ ಅಂಕಗಳನ್ನು ನಿರೀಕ್ಷಿಸುವಂತಿಲ್ಲ. ಬದಲಿಗೆ, ಮಂಡಳಿಯು ಬಿಡುಗಡೆ ಮಾಡಿರುವ 'ಸಿಬಿಎಸ್‌ಇ ಅಂಕ ಯೋಜನೆ 2026' ರ ಅಧಿಕೃತ ನಿಯಮಾವಳಿಗಳ ಆಧಾರದ ಮೇಲೆಯೇ ಮೌಲ್ಯಮಾಪನ ಮಾಡಿದ ಉತ್ತರಗಳನ್ನು ಪರಿಶೀಲಿಸಬೇಕು ಎಂದು ಹೇಳಿದೆ.
12 ನೇ ತರಗತಿಯ ಫಲಿತಾಂಶಗಳು ಮತ್ತು ಆನ್ ಸ್ಕ್ರೀನ್ ಮಾರ್ಕಿಂಗ್ ಸಿಸ್ಟಮ್ (OSM) ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚುತ್ತಿರುವುದರಿಂದ ಮಂಡಳಿಯು ಸ್ಕ್ಯಾನ್ ಮಾಡಿದ ಉತ್ತರ ಪುಸ್ತಕದ ಪ್ರತಿಗಳನ್ನು ಪ್ರವೇಶಿಸಲು, ಅಂಕಗಳ ಪರಿಶೀಲನೆ ಮತ್ತು ಉತ್ತರಗಳ ಮರುಮೌಲ್ಯಮಾಪನಕ್ಕೆ ನಿಗದಿಪಡಿಸಲಾಗಿದ್ದ ಶುಲ್ಕವನ್ನು ಮಂಡಳಿಯು ಈ ಹಿಂದೆ ಗಣನೀಯವಾಗಿ ಕಡಿಮೆ ಮಾಡಿತ್ತು.
ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಉತ್ತರ ಪುಸ್ತಕಗಳ ಛಾಯಾಚಿತ್ರ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮಾತ್ರ ಗಮನಿಸಿದ ಸಮಸ್ಯೆಗಳ ಪರಿಶೀಲನೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸಮಸ್ಯೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮಂಡಳಿಯು ಸಹಾಯವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸಹ ಹಂಚಿಕೊಂಡಿದ್ದು, ಪ್ರಶ್ನೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಟೆಲಿ-ಕೌನ್ಸೆಲಿಂಗ್ ಸಹಾಯವಾಣಿ 1800 11 8004 ಮತ್ತು ಇಮೇಲ್ - resultcbse2026@cbseshiksha.in ಬಳಸಿಕೊಂಡು CBSE ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ (ಏಜೆನ್ಸೀಸ್).