ಯುಪಿಯ ಮುಜಾಫರ್‌ನಗರದಲ್ಲಿ ಸಿಬಿಐ ಶಿಕಾರಿ! ಸಿಎಂ ಸುವೇಂದು ಪಿಎ ಕೊಂದ ಮುಖ್ಯ ಶೂಟರ್ ರಾಜ್‌ಕುಮಾರ್ ಅರೆಸ್ಟ್! 
ದೇಶ

ಯುಪಿಯ ಮುಜಾಫರ್‌ನಗರದಲ್ಲಿ ಸಿಬಿಐ ಶಿಕಾರಿ! ಸಿಎಂ ಸುವೇಂದು ಪಿಎ ಕೊಂದ ಮುಖ್ಯ ಶೂಟರ್ ರಾಜ್‌ಕುಮಾರ್ ಅರೆಸ್ಟ್! Chandranath Rath Murder case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಅತ್ಯಂತ ನಂಬಿಕಸ್ಥ ಮತ್ತು ಆಪ್ತ ಸಹಾಯಕ ಚಂದ್ರನಾಥ್ ರಥ್(Chandranath Rath Murder case) ಅವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಸೋಮವಾರ ಮಹತ್ವದ ಯಶಸ್ಸು ಸಾಧಿಸಿದೆ. ಉತ್ತರ ಪ್ರದೇಶ ಪೊಲೀಸರ ಜಂಟಿ ಸಹಯೋಗದೊಂದಿಗೆ ಮುಜಾಫರ್‌ನಗರದಲ್ಲಿ ಅಡಗಿದ್ದ ಮುಖ್ಯ ಶೂಟರ್ ರಾಜ್‌ಕುಮಾರ್‌ನನ್ನು ಕೇಂದ್ರ ತನಿಖಾ ಸಂಸ್ಥೆ ಹೆಡೆಮುರಿ ಕಟ್ಟಿದೆ. ಹಂತಕನ ಟ್ರಾನ್ಸಿಟ್ ರಿಮಾಂಡ್ ಪಡೆದಿರುವ ಸಿಬಿಐ, ಆತನನ್ನು ಮಂಗಳವಾರ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಭರ್ಜರಿ ಜಯ ಸಾಧಿಸಿ, 200ಕ್ಕೂ ಅಧಿಕ ಸೀಟುಗಳನ್ನು ಗೆದ್ದು ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಇಳಿಸಿದ ಕೇವಲ ಎರಡೇ ದಿನಗಳಲ್ಲಿ, ಅಂದರೆ ಮೇ 6 ರ ರಾತ್ರಿ ಈ ಹತ್ಯೆ ನಡೆದಿತ್ತು.

ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿದ್ದ ಹಂತಕರು!

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಕಲ ರಹಸ್ಯ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಚಂದ್ರನಾಥ್ ರಥ್ ಅವರು ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ಈ ಭೀಕರ ದಾಳಿ ನಡೆದಿತ್ತು. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಲತಲಾ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಚಂದ್ರನಾಥ್ ರಥ್ ಅವರನ್ನು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಭೀಕರವಾಗಿ ಕೊಂದಿದ್ದರು.
ಈ ಹತ್ಯೆಯ ಬೆನ್ನಲ್ಲೇ ಬಂಗಾಳದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಚಂದ್ರನಾಥ್ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿ ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಪ್ರಕರಣದ ಗಾಂಭೀರ್ಯತೆಯನ್ನು ಅರಿತು ನಂತರ ಇದನ್ನು ಸಿಬಿಐಗೆ ವಹಿಸಲಾಗಿತ್ತು.

ಹತ್ಯೆಯ ಹಿಂದೆ ಅಡಗಿದೆ ದೊಡ್ಡ ಅಂತಾರಾಜ್ಯ ಗ್ಯಾಂಗ್: ನಾಲ್ಕನೇ ವಿಕೆಟ್ ಪತನ!

ಸಿಬಿಐ ಮೂಲಗಳ ಪ್ರಕಾರ, ಈ ಹತ್ಯೆಯ ಹಿಂದೆ ದೊಡ್ಡ ಸುಪಾರಿ ಗ್ಯಾಂಗ್ ಅಡಗಿದ್ದು, ರಾಜಕುಮಾರ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 4ಕ್ಕೆ ಏರಿದೆ. ಇದಕ್ಕೂ ಮುನ್ನ ಬಿಹಾರದ ಬಕ್ಸರ್‌ನಿಂದ ಮಯಾಂಕ್ ರಾಜ್ ಮಿಶ್ರಾ ಮತ್ತು ವಿಕಿ ಮೌರ್ಯ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ರಾಜ್ ಸಿಂಗ್‌ನನ್ನು ಯುಪಿಯ ಬಲ್ಲಿಯಾದಲ್ಲಿ ವಶಕ್ಕೆ ಪಡೆಯಲಾಗಿತ್ತು.
ಈ ಕೊಲೆಯಲ್ಲಿ ಒಟ್ಟು ಎಂಟು ಜನ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಬಂಧನಕ್ಕೊಳಗಾಗಿರುವ ಆರೋಪಿಗಳು ವಿಚಾರಣೆ ವೇಳೆ ಪದೇಪದೆ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಾ ತನಿಖೆ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಚಂದ್ರನಾಥ್ ರಥ್ ಅವರ ನಿಖರವಾದ ಸಂಚಾರ ಕುರಿತು ಈ ಹಂತಕರಿಗೆ ಮಾಹಿತಿ ನೀಡಿದ ಒಳಗಿನ ಸಮಾಜದ್ರೋಹಿ ಯಾರು ಮತ್ತು ಘಟನಾ ಸ್ಥಳದಲ್ಲಿ ಬೇರೆ ಯಾರ್ಯಾರು ಉಪಸ್ಥಿತರಿದ್ದರು ಎಂಬ ಬಗ್ಗೆ ಸಿಬಿಐ ಈಗ ತೀವ್ರ ವಿಚಾರಣೆ ನಡೆಸುತ್ತಿದೆ.

ರಥ್ ಹತ್ಯೆ ಸುತ್ತ ಹೆಣೆದುಕೊಂಡಿದೆ ಭೀಕರ ರಾಜಕೀಯ ದ್ವೇಷದ ಜಾಲ!

ಚಂದ್ರನಾಥ್ ರಥ್ ಹತ್ಯೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಭೀಕರ ರಾಜಕೀಯ ಯುದ್ಧವೇ ಆರಂಭವಾಗಿದೆ. ಬಂಗಾಳ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಸಾರಥ್ಯದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಡಳಿತವನ್ನು ಅಂತ್ಯಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಟಿಎಂಸಿ ಈ ಕೃತ್ಯ ಎಸಗಿದೆ ಎಂದು ಬಿಜೆಪಿ ಬಹಿರಂಗವಾಗಿ ಆರೋಪಿಸಿದೆ.
ಅನೇಕ ಬಿಜೆಪಿ ಮುಖಂಡರು ಈ ಹತ್ಯೆಯ ನೇರ ಲಿಂಕ್ ಅನ್ನು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜೋಡಿಸಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ಟಿಎಂಸಿ, ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದೆ. ಈ ಹತ್ಯೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮವಾಗಬೇಕು. ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆದು ನಿಜವಾದ ಅಪರಾಧಿಗಳಿಗೆ ತಡವಿಲ್ಲದೆ ಶಿಕ್ಷೆಯಾಗಬೇಕು ಎಂದು ಟಿಎಂಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ. ಸದ್ಯ ಮುಖ್ಯ ಶೂಟರ್ ಸಿಕ್ಕಿಬಿದ್ದಿರುವುದರಿಂದ ಈ ರಾಜಕೀಯ ಹತ್ಯೆಯ ಅಸಲಿ ಸೂತ್ರಧಾರಿ ಯಾರು ಎಂಬುದು ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆಯಿದೆ,(ಏಜೆನ್ಸೀಸ್​).