ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕ
- ಮೇ.03ರಂದು ದೇಶಾದ್ಯಂತ ನಡೆದಿದ್ದ ನೀಟ್ ಪರೀಕ್ಷೆ 2026
- ರಾಜಸ್ಥಾನದ ಸಿಕಾರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ
- ಪ್ರಕರಣ ಕೈಗೆತ್ತಿಕೊಂಡ ಸಿಬಿಐನಿಂದ ತನಿಖೆ ಚುರುಕು
- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸಂಚಲನ ಮೂಡಿಸುವ ವಿಷಯಗಳು ಬೆಳಕಿಗೆ
NEET Leak Case: ದೇಶಾದ್ಯಂತ ಭಾರೀ ಸಂಚಲನ ಹುಟ್ಟುಹಾಕಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸದ್ಯ ಎಕ್ಸಾಂ ರದ್ದತಿಗೆ ಕಾರಣವಾಗಿದ್ದಲ್ಲದೇ, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುವಂತೆ ಸಿಬಿಐಗೆ ಆದೇಶಿಸಿದ್ದೇ ತಡ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
ಈಗಾಗಲೇ ಪರೀಕ್ಷೆಯನ್ನು ರದ್ದು ಮಾಡಿರುವ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುವ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ ನೂರಾರು ಕನಸು ಕಟ್ಟಿಕೊಂಡು ಎಕ್ಸಾಂ ಬರೆದಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಮೋಸವಾಗಲು ಬಿಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಪ್ರಸ್ತುತ, ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ, ಸೋರಿಕೆಯಾದ ರಾಜಸ್ಥಾನದಿಂದ ಪ್ರಕರಣವನ್ನು ಭೇದಿಸಲು ಆರಂಭಿಸಿದೆ.
'ಖಾಸಗಿ ಮಾಫಿಯಾ'
ಕೇರಳ ಮತ್ತು ರಾಜಸ್ಥಾನದ ಸಿಕರ್ನಲ್ಲಿ ನೀಟ್ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿದೆ. ವರದಿಗಳ ಪ್ರಕಾರ, ಮಾದರಿ ಪ್ರಶ್ನಾ ಪತ್ರಿಕೆಯು ಪಿಡಿಎಫ್ ಫಾರ್ಮೆಟ್ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಿಂದ ಹಂಚಿಕೆಯಾಗಿರುವುದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಮೇ.03ರಂದು ನಡೆದ ನೀಟ್-ಯುಜಿ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ಜೀವಶಾಸ್ತ್ರದ 90, ರಸಾಯನಶಾಸ್ತ್ರದ 45 ಪ್ರಶ್ನೆಗಳನ್ನು ಆಯ್ದ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅದು ಇಲ್ಲಿ ಮ್ಯಾಚ್ ಆಗಿರುವುದು ಗಮನಾರ್ಹ.
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ಗ್ರೂಪ್ ಪ್ರಕಾರ, ಕೇರಳದಲ್ಲಿ ಓದುತ್ತಿರುವ ಸಿಕಾರ್‌ನ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ, ತನ್ನ ಸ್ನೇಹಿತನಿಂದ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪಡೆದಿದ್ದಾನೆ. ಅದನ್ನು ನಂತರ ಸಿಕಾರ್‌ನಲ್ಲಿರುವ ಸ್ನೇಹಿತರು ಮತ್ತು ಹಾಸ್ಟೆಲ್ ಓನರ್ ಸೇರಿದಂತೆ ಇತರರಿಗೆ ಹಂಚಲಾಗಿದೆ. ಅಲ್ಲಿಂದ, ಇದು "ಖಾಸಗಿ ಮಾಫಿಯಾ" ಎಂಬ ಹೆಸರಿನ ಒಂದು ಗುಂಪು ಸೇರಿದಂತೆ ಕೋಚಿಂಗ್ ಸೆಂಟರ್ಗಳು, ಹಾಸ್ಟೆಲ್ ಗ್ರೂಪ್ಗಳು ಮತ್ತು ಪಾಸ್‌ವರ್ಡ್ ಸುರಕ್ಷಿತ ಡಿಜಿಟಲ್ ನೆಟ್‌ವರ್ಕ್‌ಗಳ ಮೂಲಕ ಕ್ಷಣಮಾತ್ರದಲ್ಲಿ ಹಂಚಿಕೆಯಾಗಿದೆ. ಇದನ್ನು ಸೋರಿಕೆ ಮಾಡಿದ ಹಾಸ್ಟೆಲ್ ಮಾಲೀಕ, ಬಳಿಕ ತಾವೇ ಘಟನೆ ಕುರಿತು ಸ್ಥಳೀಯ ಪೊಲೀಸರಿಗೆ ಸುಳಿವು ನೀಡಿ ಪ್ರಕರಣ ಭೇದಿಸಿದಂತೆ ಹೇಳಿದ್ದಾರೆ ಎನ್ನಲಾಗಿದೆ.
150ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿಚಾರಣೆ
ತನಿಖಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿ, ಪರೀಕ್ಷೆ ಬರೆದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಸಂಬಂಧಪಟ್ಟವರನ್ನು ಪ್ರಶ್ನಿಸಿದ್ದಾರೆ. ಇದು ಕೇವಲ ಸ್ಥಳೀಯ ಸೋರಿಕೆಗಿಂತ ದೊಡ್ಡ ಜಾಲವಿರಬಹುದು ಮತ್ತು ಸಂಘಟಿತ ಅಂತರರಾಜ್ಯ ಸಿಂಡಿಕೇಟ್ ಆಗಿರಬಹುದು ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಸಿಬಿಐ ಮೂಲಗಳನ್ನು ಉಲ್ಲೇಖಿಸಿ, ANI ಸುದ್ದಿ ಸಂಸ್ಥೆ ಮಾಡಿದ ವರದಿ ಪ್ರಕಾರ, ವಿದ್ಯಾರ್ಥಿಗಳು ನೀಟ್ ಪತ್ರಿಕೆಯ ಪ್ರಶ್ನೆಗಳನ್ನು ಪಡೆಯಲು ಬರೋಬ್ಬರಿ 2 ಲಕ್ಷದಿಂದ 5 ಲಕ್ಷ ರೂ.ವರೆಗೆ ಹಣ ನೀಡಿದ್ದಾರೆ ಎನ್ನಲಾಗಿದೆ.
ಓರ್ವ ಆರೋಪಿ ಯಶ್ ಯಾದವ್ ಎಂಬಾತ ಪ್ರಶ್ನೆ ಪತ್ರಿಕೆಯನ್ನು ರಾಜಸ್ಥಾನಕ್ಕೆ ರವಾನಿಸಲು ಸಹಾಯ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಮತ್ತೊಬ್ಬ ಶಂಕಿತನ ತಂದೆ ಹಾರ್ಡ್ ಕಾಪಿಯನ್ನು ಹಂಚಿಕೊಳ್ಳಬಹುದಾದ ಪಿಡಿಎಫ್ಗಳನ್ನು ಸ್ಕ್ಯಾನ್ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಅನೇಕ ಮೆಡಿಕಲ್ ವಿದ್ಯಾರ್ಥಿಗಳು ಹಣ ಕೊಟ್ಟು ಡೀಲ್ ಮಾಡಿಕೊಳ್ಳಲು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಚಾಟಿಂಗ್ಗಳ ಸ್ಕ್ರೀನ್ಶಾಟ್ಗಳು ನಮಗೆ ಲಭಿಸಿವೆ ಎಂದು ಖಾಕಿ ಪಡೆ ತಿಳಿಸಿವೆ.
ಮೊಬೈಲ್, ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದ್ದು, ನಮಗೆ ಫೋನ್‌ಗಳಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಅಥವಾ ಊಹೆ ಪತ್ರಿಕೆ ಸಿಕ್ಕಿಲ್ಲ ಎಂದು ರಾಜಗೀರ್ ಡಿಎಸ್‌ಪಿ ಸುನಿಲ್ ಕುಮಾರ್ ಸಿಂಗ್ ಎಎನ್‌ಐಗೆ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).