ಕಾವೇರಿ ವಿವಾದ: ತಮಿಳುನಾಡು ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸೆ.15ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್! Cauvery Water dispute
- ಕಾವೇರಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್
- ತಮಿಳುನಾಡು ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಪೀಠ
- ಬರಪೀಡಿತ ಪ್ರದೇಶಗಳ ಕುರಿತು ಮಾಹಿತಿ ನೀಡಿದ ಕರ್ನಾಟಕದ ವಕೀಲರು
- ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಿ ಮಾಹಿತಿ ನೀಡಲು ಸಿಡಬ್ಲ್ಯುಆರ್ಸಿಗೆ ಸೂಚನೆ
ನವದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ( Cauvery Water dispute ) ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡು ಸುಪ್ರೀಂ ಕೊರ್ಟ್, 15 ದಿನಕ್ಕೊಮ್ಮೆ ಸಭೆ ನಡೆಸಿ ಪರಿಷ್ಕೃತ ಮಾಹಿತಿ ನೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಸೂಚನೆ ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ತಮಿಳುನಾಡು ಸರ್ಕಾರದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಾಯಿತು.
ಸಿಡಬ್ಲ್ಯುಎಂಎ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಈಗಾಗಲೇ ಹರಿಸಲಾಗಿದೆ ಎಂದು ಕರ್ನಾಟಕದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ನಮ್ಮ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಹಲವು ಭಾಗಗಳು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಿವೆ ಎಂಬ ಅಂಶವನ್ನೂ ಪ್ರಸ್ತಾಪಿಸಿದರು.
ಮತ್ತೊಂದೆಡೆ, ತಮಿಳುನಾಡು ಕಡೆಯಿಂದ ವಾದ ಮಂಡಿಸಿದ ವಕೀಲರು, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದ್ದರೂ ತಮಗೆ ಬೇಕಾದಷ್ಟು ನೀರು ಹರಿದುಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಒಟ್ಟು 35 ಟಿಎಂಸಿ ನೀರು ಬರಬೇಕಿತ್ತಾದರೂ ಪೂರ್ಣ ಪ್ರಮಾಣದಲ್ಲಿ ನೀರು ಬಿಟ್ಟಿಲ್ಲವಾದ್ದರಿಂದ ಬಾಕಿ ಉಳಿದಿರುವ ನೀರನ್ನೂ ಕೂಡಲೇ ಬಿಡಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಆದರೆ, ತಮಿಳುನಾಡಿನ ಈ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಈಗಾಗಲೇ ನಿಗದಿತ ಪ್ರಮಾಣದ ನೀರನ್ನು ಹರಿಸುತ್ತಿದೆಯಲ್ಲವೇ ಎಂದು ಪ್ರಶ್ನಿಸಿತು. ಅಲ್ಲದೆ, ಬಾಕಿ ನೀರನ್ನು ಬಿಡುವಂತೆ ಕೋರಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರುವ ಬದಲು ಸಿಡಬ್ಲ್ಯುಆರ್‌ಸಿ (CWRC) ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಿತು.
ಇದರ ಜೊತೆಗೆ, ಸಿಡಬ್ಲ್ಯುಆರ್‌ಸಿ ಪ್ರತಿ ಹದಿನೈದು ದಿನಗಳಿಗೊಮ್ಮೆ ತಪ್ಪದೆ ಸಭೆ ನಡೆಸಿ, ವಾಸ್ತವ ಪರಿಸ್ಥಿತಿಯ ಪರಿಷ್ಕೃತ ಮಾಹಿತಿಯನ್ನು ಆಧರಿಸಿ ನೀರು ಹರಿಸುವ ಕುರಿತು ಸೂಕ್ತ ನಿರ್ದೇಶನ ನೀಡಬೇಕೆಂದು ತಿಳಿಸಿ ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿತು.