ಪ್ಲಾಸ್ಟಿಕ್​ ಮೊಟ್ಟೆ ಕಂಡು ಶಾಕ್​ ಆದ ಗ್ರಾಹಕಿ ಶಾಲಿನಿ ಶರ್ಮಾ 
ದೇಶ

ಜಾಗ್ರತೆ: ನೀವು ತಿನ್ನುತ್ತಿರೋದು ಮೊಟ್ಟೆಯೋ ಅಥವಾ ಪ್ಲಾಸ್ಟಿಕ್ ನೂಡಲ್ಸೋ? ನಕಲಿ ಮೊಟ್ಟೆ ನೋಡಿ ಗ್ರಾಹಕಿ ಶಾಕ್​; ವಿಡಿಯೋ ವೈರಲ್​ | Plastic Eggs

ಪ್ರಮುಖ ಮುಖ್ಯಾಂಶಗಳು

  • ಬ್ರಾಂಡೆಡ್​ ಮೊಟ್ಟೆ ಹೆಸರಿನಲ್ಲಿ ಪ್ಲಾಸ್ಟಿಕ್​ ಮೊಟ್ಟೆ ಮಾರಾಟ
  • ನೀರಿನಲ್ಲಿ ಕುದಿಸಿದ ನಂತರ ಮೊಟ್ಟೆ ನಕಲಿ ಎಂದು ಪತ್ತೆ
  • ವೈರಲ್​ ವಿಡಿಯೋಗೆ ನೆಟ್ಟಿಗರಿಂದ ತೀವ್ರ ಆಕ್ರೋಶ
ನವದೆಹಲಿ: ಆರೋಗ್ಯಕ್ಕಾಗಿ ದಿನಕ್ಕೊಂದು ಮೊಟ್ಟೆ ತಿನ್ನಿ ಎಂದು ವೈದ್ಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರಗಳ ಹಾವಳಿ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ನಾವು ಹಣ ಕೊಟ್ಟು ಖರೀದಿಸುವ ಬ್ರ್ಯಾಂಡೆಡ್ ಮೊಟ್ಟೆಗಳೂ ಈಗ ಸಂಶಯದ ಸುಳಿಯಲ್ಲಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಇದೀಗ ಇಡೀ ದೇಶದ ಆಹಾರ ಸುರಕ್ಷತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಏನಿದು ಪ್ಲಾಸ್ಟಿಕ್ ಮೊಟ್ಟೆ ಕತೆ?

ದೆಹಲಿ ಮೂಲದ ಶಾಲಿನಿ ಶರ್ಮಾ ಎಂಬುವವರು ಆನ್‌ಲೈನ್ ಡೆಲಿವರಿ ಆ್ಯಪ್ ಮೂಲಕ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದರು. ಅವು ಹೆಸರಾಂತ ಎಗೋಸ್ ಎವರಿಡೇ (Eggos Everyday) ಬ್ರ್ಯಾಂಡ್‌ನ ಮೊಟ್ಟೆಗಳಾಗಿದ್ದವು. ಆದರೆ ಈ ಮೊಟ್ಟೆಗಳನ್ನು ಬೇಯಿಸಲು ಹೋದಾಗ ಕಂಡ ದೃಶ್ಯ ಶಾಲಿನಿ ಅವರನ್ನು ಬೆಚ್ಚಿಬೀಳಿಸಿದೆ.
ವೈರಲ್ ವಿಡಿಯೋದಲ್ಲಿ ಶಾಲಿನಿ ಅವರು ಬೇಯಿಸಿದ ಮೊಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸುತ್ತಿದ್ದಾರೆ. ಆ ಮೊಟ್ಟೆಗಳ ಒಳಗಿನಿಂದ ಹಳದಿ ಬಣ್ಣದ, ಪ್ಲಾಸ್ಟಿಕ್ ನಾರಿನಂತಹ ಎಳೆಗಳು ಹೊರಬರುತ್ತಿವೆ. ನೋಡಲು ನೂಡಲ್ಸ್‌ನಂತೆ ಕಾಣುವ ಈ ಎಳೆಗಳು ವಾಸ್ತವವಾಗಿ ಪ್ಲಾಸ್ಟಿಕ್‌ನಂತೆಯೇ ಭಾಸವಾಗುತ್ತಿವೆ.

ಗ್ರಾಹಕಿ ಶಾಲಿನಿ ಶರ್ಮಾ ಹೇಳಿದ್ದೇನು?

ಇಲ್ಲಿಯವರೆಗೆ ನಾವು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಥವಾ ನಕಲಿ ಮೊಟ್ಟೆಗಳು ಮಾರಾಟವಾಗುತ್ತಿವೆ ಎಂದು ಕೇಳಿದ್ದೆವು ಅಷ್ಟೇ. ಆದರೆ ಇಂದು ನನಗೆ ಈ ಅನುಭವವಾಗಿದೆ. ಆನ್​ಲೈನ್​ ಮೂಲಕ ತರಿಸಿದ ಎಗೋಸ್ ಎವರಿಡೇ ಬ್ರ್ಯಾಂಡ್‌ನ ಮೊಟ್ಟೆಗಳನ್ನು ಬೇಯಿಸಿದ ತಕ್ಷಣ, ಹಳದಿ ಲೋಳೆಯ ಬದಲಿಗೆ ಪ್ಲಾಸ್ಟಿಕ್ ಪದಾರ್ಥಗಳು ಹೊರಬರತೊಡಗಿದವು, ಎಂದು ಅವರು ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಒಂದು ವೇಳೆ ನಾನು ಈ ಮೊಟ್ಟೆಗಳನ್ನು ಬೇಯಿಸುವ ಬದಲು ಆಮ್ಲೆಟ್ ಅಥವಾ ಬುರ್ಜಿ ರೂಪದಲ್ಲಿ ಬಳಸಿದ್ದರೆ, ನಾನು ಖಂಡಿತವಾಗಿ ಪ್ಲಾಸ್ಟಿಕ್ ತಿನ್ನುತ್ತಿದ್ದೆ. ಬೇಯಿಸಿದಾಗ ಮೊಟ್ಟೆಗಳು ಒಡೆದು ಈ ಪ್ಲಾಸ್ಟಿಕ್ ಎಳೆಗಳು ಹೊರಬಂದಿದ್ದರಿಂದ ಸತ್ಯ ಗೊತ್ತಾಯಿತು. ಇಷ್ಟು ದೊಡ್ಡ ಬ್ರ್ಯಾಂಡ್‌ಗಳ ಸ್ಥಿತಿಯೇ ಹೀಗಾದರೆ, ಸಾಮಾನ್ಯ ಜನರು ಏನನ್ನು ತಿನ್ನಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

ಬ್ರ್ಯಾಂಡ್‌ನಿಂದ ಬಂದ ಪ್ರತಿಕ್ರಿಯೆ ಏನು?

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಿದ್ದಂತೆಯೇ ಎಚ್ಚೆತ್ತ ಎಗೋಸ್ ಎವರಿಡೇ ಸಂಸ್ಥೆಯು ಕಮೆಂಟ್ ಸೆಕ್ಷನ್‌ನಲ್ಲಿ ಕ್ಷಮೆಯಾಚಿಸಿದೆ. ನಿಮ್ಮ ಅನುಭವಕ್ಕೆ ನಮಗೆ ವಿಷಾದವಿದೆ. ನಾವು ನಮ್ಮ ಗ್ರಾಹಕರಿಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ಬಯಸುತ್ತೇವೆ. ದಯವಿಟ್ಟು ನಿಮ್ಮ ಸಂಪರ್ಕ ವಿವರಗಳನ್ನು ಇಮೇಲ್ ಮಾಡಿ, ನಮ್ಮ ಗ್ರಾಹಕ ಸೇವಾ ತಂಡವು ಶೀಘ್ರವೇ ನಿಮ್ಮನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಲಿದೆ, ಎಂದು ಪ್ರತಿಕ್ರಿಯೆ ನೀಡಿದೆ.

ನೆಟ್ಟಿಗರ ಆಕ್ರೋಶ

ಬ್ರ್ಯಾಂಡ್ ಕ್ಷಮೆಯಾಚಿಸಿದರೂ ನೆಟ್ಟಿಗರು ಮಾತ್ರ ಸುಮ್ಮನಾಗಿಲ್ಲ. ಇದು ಕೇವಲ ಕ್ಷಮೆಯಿಂದ ಮುಗಿಯುವ ವಿಚಾರವಲ್ಲ, ಜನರ ಪ್ರಾಣದ ಜೊತೆಗಿನ ಆಟ, ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು (FSSAI) ಟ್ಯಾಗ್ ಮಾಡಿ, ಈ ಬ್ರ್ಯಾಂಡ್​ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ,(ಏಜನ್ಸೀಸ್​).