ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಇರುವಾಗಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 1.31 ಕೋಟಿ ಮಹಿಳೆಯರ ಖಾತೆಗೆ ತಲಾ 5 ಸಾವಿರ ರೂ. ವರ್ಗಾಯಿಸಿರುವುದು ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಆದರೆ, ತಮಿಳುನಾಡು ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳು ಇಂಥ ಯೋಜನೆಗೆ ಭಾರಿ ಮೊತ್ತವನ್ನು ವೆಚ್ಚ ಮಾಡುತ್ತಿದ್ದು, ಆ ಕುರಿತಾದ ವಿವರ ಇಲ್ಲಿದೆ.
ತಮಿಳುನಾಡಿನಲ್ಲಿ ಏಪ್ರಿಲ್-ಮೇನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕೃತ ವೇಳಾಪಟ್ಟಿ ಪ್ರಕಟವಾಗಬೇಕಿದೆ. ಅದಕ್ಕೂ ಮುನ್ನವೇ, ಮಹಿಳಾ ಮತದಾರರನ್ನು ಓಲೈಸಲು ಡಿಎಂಕೆ ಸರ್ಕಾರ ಪ್ರಯೋಗಿಸಿರುವ ಸಹಾಯಧನದ ರಾಜಕೀಯ ಅಸ್ತ್ರ, ವಿರೋಧಿಗಳನ್ನು ಬೆಚ್ಚಿಬೀಳಿಸಿದೆ. ಮಹಿಳೆಯರಿಗೆ ಸಹಾಯಧನ ಬಿಡುಗಡೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂಬ ಮುಂದಾಲೋಚನೆಯಿಂದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. ಒಟ್ಟು 5 ಸಾವಿರ ರೂ. ಮೊತ್ತವು ಮುಂಬರುವ ಮೂರು ತಿಂಗಳ ಮುಂಗಡ ಹಣವನ್ನೂ ಒಳಗೊಂಡಿದೆ. ಅಲ್ಲದೆ, ಬೇಸಿಗೆಯ ಖರ್ಚುಗಳಿಗಾಗಿ ಎರಡು ಸಾವಿರ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ನಟ ವಿಜಯ್, ‘ದುಡ್ಡು ಅವರಿಂದ (ಡಿಎಂಕೆ) ತೆಗೆದುಕೊಳ್ಳಿ, ಮತ ಮಾತ್ರ ನಮ್ಮ ಪಕ್ಷಕ್ಕೆ ಹಾಕಿ’ ಎಂದಿದ್ದಾರೆ. ಡಿಎಂಕೆ ಅಧಿಕಾರಕ್ಕೆ ಮರಳಿದರೆ ಈ ನೆರವಿನ ಮೊತ್ತವನ್ನು 1 ಸಾವಿರದಿಂದ 2 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಸ್ಟಾಲಿನ್ ಭರವಸೆ ನೀಡಿದ್ದಾರೆ. ‘ಸೋಲಿನ ಭಯದಿಂದ ಸ್ಟಾಲಿನ್ ಹೀಗೆ ಮಾಡಿದ್ದಾರೆ’ ಎಂಬುದು ಪ್ರತಿಪಕ್ಷಗಳ ಆರೋಪ. ಆದರೆ, ಮತದಾರರ ಸಂಖ್ಯೆಯಲ್ಲಿ ಬಹುತೇಕ ಶೇಕಡ 50ರಷ್ಟು ಮಹಿಳೆಯರು ಇರುವುದರಿಂದ ಬಹುತೇಕ ರಾಜ್ಯಗಳು ಮಹಿಳಾ ಮತಗಳನ್ನು ಸೆಳೆಯಲು ಇದೇ ತಂತ್ರಕ್ಕೆ ಮೊರೆ ಹೋಗಿರುವುದು ಸ್ಪಷ್ಟ. ‘ನಗದು ವರ್ಗಾವಣೆ’ ಕಳೆದ ಕೆಲ ವರ್ಷಗಳಿಂದ ಚುನಾವಣೆ ಗೆಲುವಿನ ಅಸ್ತ್ರವಾಗಿ ಬದಲಾಗಿರುವುದಂತೂ ಹೌದು.
ದೇಶದ 12 ರಾಜ್ಯಗಳಿಂದ 12.8 ಕೋಟಿ ಮಹಿಳೆಯರ ಖಾತೆಗೆ ಪ್ರತಿ ವರ್ಷ 1.9 ಲಕ್ಷ ಕೋಟಿ ರೂ. ಜಮೆ ಆಗುತ್ತಿದೆ. ಇದು, ರಾಜ್ಯಗಳ ಬೊಕ್ಕಸವನ್ನು ಬರಿದು ಮಾಡುವ ಆತಂಕ ಸೃಷ್ಟಿಸಿದ್ದು, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಇದಕ್ಕೆ ಸಾಕ್ಷಿ. ಮತ್ತೊಂದು ಆಯಾಮದಲ್ಲಿ ವಿಶ್ಲೇಷಿಸುವುದಾದರೆ, ಈ ನೆರವಿನಿಂದ ಮಹಿಳೆಯರ ಉಳಿತಾಯ ಅಥವಾ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು ಹೆಚ್ಚಿವೆ.
ರಾಜಕೀಯದ ಸಮೀಕರಣಗಳನ್ನೇ ಬದಲಿಸುತ್ತಿದೆ ಸ್ತ್ರೀಶಕ್ತಿ. ಹೌದು, ರಾಜಕೀಯ ತಂತ್ರಗಾರಿಕೆ ಬದಲಾಗಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಮತದಾನ ಪ್ರಮಾಣದಲ್ಲೂ ಏರಿಕೆಯಾಗಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ. ಅಲ್ಲದೆ, ಮಹಿಳೆಯರು ರಾಜಕೀಯ ಭರವಸೆಗಳನ್ನು ನಂಬಿ ಮತ ಹಾಕುವುದಿಲ್ಲ ಎಂಬ ಸಂಗತಿ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿಯೇ, ಮಹಿಳಾ ಮತದಾರರ ಮನ ಗೆಲ್ಲಲು ‘ಸಹಾಯಧನ’ದ ಅಸ್ತ್ರ ಪ್ರಯೋಗಿಸಲಾಗಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಆದ್ದರಿಂದಲೇ ಯಾವುದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಅಲ್ಲಿ ಮೊದಲು ಗಮನ ಸೆಳೆಯುವುದು ಮಹಿಳೆಯರ ಕುರಿತಾದ ಭರವಸೆಗಳು/ಘೋಷಣೆಗಳು.
2023ರ ಮೇ ತಿಂಗಳಿಂದ 2025ರ ಡಿಸೆಂಬರ್ವರೆಗೆ ದೇಶದ 15 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿವೆ. ಈ ಪೈಕಿ 11 ರಾಜ್ಯಗಳಲ್ಲಿ ಮಹಿಳೆಯರಿಗೆ ನಗದು ವರ್ಗಾವಣೆಯ ಭರವಸೆ ನೀಡಿ, ಚುನಾವಣೆಯ ಬಳಿಕ ಅದನ್ನು ಜಾರಿಗೆ ತರಲಾಗಿದೆ. 11 ರಾಜ್ಯಗಳ ಪೈಕಿ ಆರು ರಾಜ್ಯಗಳಲ್ಲಿ ಸರ್ಕಾರವೇ ಬದಲಾಗಿದ್ದರೆ, ‘ಮಹಿಳೆಯರಿಗೆ ನೇರ ನಗದು ಯೋಜನೆ ಜಾರಿಗೆ ತರಲಾಗುವುದು’ ಎಂದು ಘೋಷಿಸಿ ಐದು ರಾಜ್ಯಗಳಲ್ಲಿನ ಪಕ್ಷಗಳು ಅಧಿಕಾರ ಉಳಿಸಿಕೊಂಡು, ಮತ್ತೆ ಸರ್ಕಾರ ರಚಿಸಿವೆ.
ಮತದಾರರ ಸಂಖ್ಯೆಯಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಅಂದರೆ ಶೇಕಡ 50ರಷ್ಟು ಮಹಿಳೆಯರೇ. ಹಾಗಾಗಿಯೇ, ಮಹಿಳಾ ಮತದಾರರನ್ನು ಸೆಳೆಯಲು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ನೆರವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿವೆ. ಮಹಿಳೆಯರಿಗೂ ಈ ಯೋಜನೆ ಆಕರ್ಷಕವಾಗಿ ಕಂಡಿದೆ. ಮತಗಳನ್ನು ಸೆಳೆಯುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಿದೆ. ಹಲವು ರಾಜ್ಯಗಳಲ್ಲಿ ಈ ಸೂತ್ರ ಸಫಲವಾಗಿರುವುದರಿಂದ, ಮುಂಬರುವ ಹಲವು ವರ್ಷಗಳ ಕಾಲ ಇದೇ ಟ್ರೆಂಡ್ ಮುಂದುವರಿಯಲಿದೆ. ಆದರೆ, ಹೀಗೆ ನೆರವನ್ನು ಘೋಷಿಸುವಾಗ ರಾಜ್ಯದ ಬೊಕ್ಕಸದ ಸ್ಥಿತಿಯನ್ನು ಗಮನಿಸಬೇಕು. ಆಯಾ ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿ ಇಂಥ ನೆರವು ನೀಡುವುದು, ಮುಂಬರುವ ವರ್ಷಗಳಲ್ಲಿ ದುಬಾರಿಯಾಗಿ ಪರಿಣಮಿಸಬಹುದು.