Murasoli | ಸಿಎಂ ವಿಜಯ್‌ಗೆ ಮುಳುವಾದ್ವು ಹಳೆಯ ಹೇಳಿಕೆಗಳು!  
ದೇಶ

ಹರಿದ ಬಟ್ಟೆ, ಒಡೆದ ಗ್ಲಾಸ್‌ಗೆ ಹೋಲಿಕೆ!...ಸಿಎಂ ವಿಜಯ್‌ಗೆ ಮುಳುವಾದ್ವು ಹಳೆಯ ಹೇಳಿಕೆಗಳು! | Murasoli

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿರುವ ಡಿಎಂಕೆ, ಟಿವಿಕೆ ನೇತೃತ್ವದ ಒಕ್ಕೂಟವನ್ನು ಅವಕಾಶವಾದಿ ಕ್ಯಾಶ್​ ಬಾಕ್ಸ್ ಮೈತ್ರಿಕೂಟ ಎಂದು ಟೀಕಿಸಿದೆ. ತನ್ನ ಮುರಸೋಲಿಯ ( Murasoli) ಇಂದಿನ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಡಿಎಂಕೆ, ಈ ಹಿಂದೆ ವಿಜಯ್ ಯಾವ ಪಕ್ಷಗಳನ್ನು ಕಟುವಾಗಿ ಟೀಕಿಸಿದ್ದರೋ, ಇಂದು ಅದೇ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಕುಟುಕಿದೆ.
ವಿಜಯ್ ಈ ಹಿಂದೆ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಡಿಎಂಕೆ ಮೈತ್ರಿಕೂಟದ ಪಕ್ಷಗಳನ್ನು ಇತರರು ಎಂದು ಕರೆದಿದ್ದರು, ಇದಷ್ಟೆ ಅಲ್ಲದೆ ಆ ಪಕ್ಷಗಳನ್ನು ಕ್ಯಾಶ್​ ಬಾಕ್ಸ್ ಮೈತ್ರಿಕೂಟ ಎಂದು ಕರೆದಿದ್ದರು. ಆದರೆ ಈಗ ವಿಜಯ್ ಸ್ವತಃ ಅದೇ ಇತರರ ಪೈಕಿ ಒಬ್ಬರಾಗಿದ್ದಾರೆ ಎಂದು ಮುರಸೋಲಿ ಪತ್ರಿಕೆ ಉಲ್ಲೇಖಿಸಿದ್ದು, ಈಗ ಆಡಳಿತಾರೂಢ ಕೂಟದಲ್ಲಿರುವ ನಾಯಕರ ಮುಖಗಳನ್ನು ಒಮ್ಮೆ ನೋಡಿ ಎಂದು ಪತ್ರಿಕೆ ಚಾಟಿ ಬೀಸಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ವಿಜಯ್ ಯಾವ ಪಕ್ಷಗಳನ್ನು ಕ್ಯಾಶ್-ಬಾಕ್ಸ್ ಮೈತ್ರಿ ಪಕ್ಷಗಳು ಎಂದು ಕರೆದಿದ್ದರೊ, ಈಗ ಅದೇ ಪಕ್ಷಗಳನ್ನು ಒಂದೆಡೆ ಸೇರಿಸಿದ್ದಾರೆ. ವಿಜಯ್ ಅವರ ಸ್ವಂತ ಮಾತುಗಳಲ್ಲೇ ಹೇಳುವುದಾದರೆ, ಈಗ ಅವರ ಕೂಟವನ್ನು ಕ್ಯಾಶ್ ಬಾಕ್ಸ್ ಮೈತ್ರಿಕೂಟ ಎಂದು ಕರೆಯಬಾರದೇ..? ಎಂದು ಡಿಎಂಕೆ ಪ್ರಶ್ನಿಸಿದೆ. ಈ ಹಿಂದೆ ಯಾವ ನಾಯಕರ ಹೆಸರು ಹೇಳಲೂ ಯೋಗ್ಯರಲ್ಲ ಎಂಬಂತೆ ಮತ್ತು ಇತರರು ಎಂದು ಕೇವಲವಾಗಿ ನೋಡಿದ್ದ ವಿಜಯ್, ಇಂದು ಅದೇ ನಾಯಕರನ್ನು ಪನೈಯೂರ್‌ನಲ್ಲಿರುವ ಟಿವಿಕೆ ಪ್ರಧಾನ ಕಛೇರಿಯ ಗೇಟ್‌ ಹೊರಗೆ ನಿಲ್ಲಿಸಿಕೊಂಡು ಪೋಸ್ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಅರಿವಾಲಯಂ ಗೇಟ್ ಹಾಗೂ ಕಾಂಗ್ರೇಸ್ ಜೊತೆಗಿನ ಒಪ್ಪಂದದ ಪ್ರಶ್ನೆ!
ಅರಿವಾಲಯಂ (ಡಿಎಂಕೆ ಪ್ರಧಾನ ಕಚೇರಿ) ಗೇಟ್ ದಾಟಿ ನಡೆದರೆ ಸಾಕು, ಆ ಪಕ್ಷಗಳನ್ನು ಒಳಗೆ ಕರೆದು ಸೀಟು ಹಂಚುತ್ತಾರೆ ಎಂದು ವಿಜಯ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ನೆನಪಿಸಿಕೊಂಡಿರುವ ಮುರಸೋಲಿ, ಇಂದು ವಿಜಯ್ ಅದೇ ಪಕ್ಷಗಳ ಬೆಂಬಲದಿಂದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷವು ಡಿಎಂಕೆ ಬಳಿ ಮಾರಾಟವಾಗಿದೆ ಎಂದು ಈ ಹಿಂದೆ ಆರೋಪಿಸಿದ್ದ ವಿಜಯ್, ಈಗ ಕಾಂಗ್ರೆಸ್ ಬೆಂಬಲ ಪಡೆಯಲು ಪ್ರತಿಯಾಗಿ ಏನು ಕೊಟ್ಟು ಖರೀದಿಸಿದ್ದಾರೆ...? ಎಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.

ಹರಿದ ಬಟ್ಟೆ, ಒಡೆದ ಗ್ಲಾಸ್‌ಗೆ ಹೋಲಿಕೆ!

ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಮೈತ್ರಿಕೂಟವನ್ನು ಒಡೆದು ಜೋಡಿಸಿದ ಗ್ಲಾಸ್ ಮತ್ತು ಹರಿದು ಹೊಲಿದ ಬಟ್ಟೆ ಎಂದು ವಿಜಯ್ ಟೀಕಿಸಿದ್ದರು. ಇದನ್ನು ಉಲ್ಲೇಖಿಸಿರುವ ಮುರಸೋಲಿ, ಇಂದು ಅವರು ರಚಿಸಿರುವ ಮೈತ್ರಿಕೂಟವನ್ನು ನೋಡಿ, ಅದು ತೇಪೆ ಹಾಕಿದ ಹರಿದ ಬಟ್ಟೆಯಂತೆ ಕಾಣುತ್ತಿದೆ. ಅಲ್ಲಿ ನಿಂತಿರುವ ಐವರ ಮುಖಗಳು ಒಡೆದ ಗ್ಲಾಸ್‌ನಂತೆ ಕಾಣುತ್ತಿವೆ ಎಂದು ವ್ಯಂಗ್ಯವಾಡಿದೆ. ಈ ಐದು ಮುಖಗಳು ಎಂದರೆ ವಿಜಯ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಬಿ. ಮಾಣಿಕ್ಕಂ ಠಾಗೋರ್, ವಿಸಿಕೆ ಅಧ್ಯಕ್ಷ ತೋಲ್ ತಿರುಮಾವಲವನ್, ಐಯುಎಂಎಲ್ ನಾಯಕ ಕೆ.ಎಂ. ಖಾದರ್ ಮೊಹಿದ್ದೀನ್ ಮತ್ತು ಎಂಡಿಎಂಕೆ ನಾಯಕ ವೈಕೋ.

ಸಚಿವ ಸ್ಥಾನಗಳ ಆಮಿಷ!

ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳನ್ನು ವಿಜಯ್ ಗೆದ್ದಿರಲಿಲ್ಲ. ಹೀಗಾಗಿ ತಾವು ಈ ಹಿಂದೆ ಕೀಳಾಗಿ ಕಂಡಿದ್ದ ಡಿಎಂಕೆ ಮೈತ್ರಿಕೂಟದ ಪಕ್ಷಗಳ ಮುಂದೆ ಅಂಗಲಾಚಬೇಕಾಯಿತು. ಡಿಎಂಕೆ ಮೈತ್ರಿಕೂಟದಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ 5, ವಿಸಿಕೆಯ 2, ಐಯುಎಂಎಲ್‌ನ 2 ಅಭ್ಯರ್ಥಿಗಳು ಗೆದ್ದಿದ್ದರು. ಅಲ್ಲದೆ ಎಂಡಿಎಂಕೆಯ ಇಬ್ಬರು ಅಭ್ಯರ್ಥಿಗಳು ಡಿಎಂಕೆಯ ಉದಯಸೂರ್ಯ ಚಿಹ್ನೆಯಡಿಯಲ್ಲಿ ಗೆದ್ದಿದ್ದರು. ಕಾಂಗ್ರೆಸ್‌ಗೆ 2 ಸಚಿವ ಸ್ಥಾನ, ವಿಸಿಕೆಗೆ 1 ಮತ್ತು ಐಯುಎಂಎಲ್‌ಗೆ 1 ಸಚಿವ ಸ್ಥಾನದ ಆಮಿಷವೊಡ್ಡಿ ಬಲೆ ಬೀಸುವ ಮೂಲಕ ವಿಜಯ್ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನುಳಿಸಿಕೊಂಡಿದ್ದಾರೆ ಎಂದು ಮುರಸೋಲಿ ಆರೋಪಿಸಿದೆ.
ವಿಶ್ವಾಸಮತ ಸಾಬೀತುಪಡಿಸಲು 25 ಎಐಎಡಿಎಂಕೆ ಶಾಸಕರಿಗೆ ಸಚಿವ ಹಾಗೂ ಮಂಡಳಿ ಹುದ್ದೆಗಳ ಭರವಸೆ ನೀಡಿ ಬೆಂಬಲ ಪಡೆದಿದ್ದ ವಿಜಯ್, ಬಳಿಕ ಬಹುಮತ ಸಾಬೀತಾಗುತ್ತಿದ್ದಂತೆ ಅವರಿಗೆ ಹುದ್ದೆ ನೀಡುವುದಿಲ್ಲ ಎಂದರು. ನಂತರ ಎಐಎಡಿಎಂಕೆ ಶಾಸಕರಿಂದ ರಾಜೀನಾಮೆ ಕೊಡಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಉಪಚುನಾವಣೆ ಎದುರಿಸುವ ಯೋಜನೆ ರೂಪಿಸಿದರು.
ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಹೊಸ ಹೆಸರಿಟ್ಟು, ನಾಯಕರುಗಳು ಫೋಟೋಗೆ ಪೋಸ್​ ನೀಡಿರುವುದನ್ನು ಉಲ್ಲೇಖಿಸಿ, ಪ್ರತಿಯೊಬ್ಬರ ಮುಖದಲ್ಲೂ ಅವಕಾಶವಾದ ಎದ್ದು ಕಾಣುತ್ತಿದೆ. ಈ ಮೈತ್ರಿಗೆ ಯಾವುದೇ ಮನಸ್ಸಾಕ್ಷಿಯಿಲ್ಲ, ಹಾಗಾಗಿ ಇದನ್ನು ಅವಕಾಶವಾದಿ ಕ್ಯಾಶ್​ ಬಾಕ್ಸ್ ಮೈತ್ರಿಕೂಟ ಎಂದು ಕರೆಯುವುದೇ ಸೂಕ್ತ ಎಂದು ಮುರಸೋಲಿ ಬರೆದಿದೆ. ಕೊನೆಯಲ್ಲಿ, ನಾವು ಕೇವಲ ವಿಜಯ್ ಅವರ ಸ್ವಂತ ಮಾತುಗಳನ್ನೇ ಅವರಿಗೆ ಮರಳಿಸುತ್ತಿದ್ದೇವೆ, ಇದರ ಬಗ್ಗೆ ಅವರ ಕೋಪಗೊಳ್ಳುವುದು ಬೇಡ ಎಂದು ಮುರಸೋಲಿ ವ್ಯಂಗ್ಯವಾಡಿದೆ(ಏಜೆನ್ಸೀಸ್​).