ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಹೊಸ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ನಟ ದಳಪತಿ ವಿಜಯ್ ಮತ್ತು ಅವರ ಪಕ್ಷದ ಟಿವಿಕೆ ಕಾರ್ಯಕರ್ತರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮಂಗಳವಾರ(ಮಾ. 31) ಪ್ರಕರಣ ದಾಖಲಾಗಿದೆ ಎಂದು ಪಿಟಿಐ ವರದಿಯಾಗಿದೆ.
ಪೆರವಲ್ಲೂರು ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ನ ಹಲವಾರು ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸಾರ್ವಜನಿಕ ಕಲಾಪಗಳಿಗೆ ಅಡ್ಡಿಪಡಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 126(2), ಸೆಕ್ಷನ್ 189(2) ಮತ್ತು ಇತರ ಸಂಬಂಧಿತ ಷರತ್ತುಗಳು ಸೇರಿವೆ.
ಈ ಕುರಿತು ಮಾಹಿತಿ ನೀಡಿರುವ ಠಾಣೆಯ ಪೊಲೀಸರು, ನಗರದಲ್ಲಿ ವಿಜಯ್ ಅವರ ಚುನಾವಣಾ ಪ್ರಚಾರದ ಸಮಯದಲ್ಲಿ ನಡೆದ ನೀತಿ ಸಂಹಿತೆಯ ಉಲ್ಲಂಘನೆಗಳನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಅನುಮತಿಸಿದ ಸಮಯಕ್ಕಿಂತ ಮೊದಲೇ ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದ್ದು, ಮತ್ತು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.
ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕಿರುವ ದಳಪತಿ ವಿಜಯ್, ತಮಿಳಿಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಕಟ್ಟಿದ್ದಾರೆ. 2026 ಏಪ್ರಿಲ್ 23ರಂದು ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಪಾದರ್ಪಣೆ ಮಾಡಿದ್ದು, ವಿಜಯ್ ಚೊಚ್ಚಲ ಬಾರಿಗೆ ತಿರುಚಿರಾಪಳ್ಳಿ ಪೂರ್ವ ಮತ್ತು ಚೆನ್ನೈನ ಪೆರಂಬೂರು ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಿನ್ನೆ ಪೆರಂಬೂರಿನಿಂದ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ (ಏಜೆನ್ಸೀಸ್).