ಕ್ಯಾಪ್ಟನ್ ಸುಮಿತ್ ಕಪೂರ್, ದುರಂತಕ್ಕೀಡಾದ ವಿಮಾನ
- ಜ.28ರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಐವರು ಮಂದಿ ದುರ್ಮರಣ
- ಅಂದು ಕ್ಯಾಪ್ಟನ್ ಸುಮಿತ್ ಬದಲಿಗೆ ವಿಮಾನ ಹಾರಿಸಬೇಕಿದ್ದು ಬೇರೆ ಪೈಲಟ್
- ಮೃತ ಸುಮಿತ್ ಸ್ನೇಹಿತರಿಂದ ಹೊರಬಿತ್ತು ಅಚ್ಚರಿ ಮಾಹಿತಿ
ಪುಣೆ: ಜ.28ರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಸೇರಿ ಐವರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮುಂಬೈನಿಂದ ನಿಗದಿತ ರಾಜಕೀಯ ರ್ಯಾಲಿಗಳಿಗಾಗಿ ವಿಮಾನ ಹೊರಟಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಪವಾರ್ ಅವರು ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ವಿಧಿಯ ಘೋರ ಆಟಕ್ಕೆ ಅಜಿತ್ ಅವರೊಂದಿಗೆ ಐವರೂ ಸುಟ್ಟು ಕರಕಲಾಗಿದ್ದು ಘೋರ ದುರಂತ.
ಡಿಸಿಎಂ ಹಾಗೂ ಎನ್‌ಸಿಪಿ ನಾಯಕರಾಗಿದ್ದ ಅಜಿತ್ ಪವಾರ್ ಲಘು ವಿಮಾನ ದುರಂತದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿದ್ದು, ಅಪಘಾತದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ಸುಮಿತ್ ಕಪೂರ್ ಅವರ ಸ್ನೇಹಿತರು ಅಚ್ಚರಿ ಸಂಗತಿಯನ್ನೇ ಬಹಿರಂಗಪಡಿಸಿದ್ದಾರೆ. ಈ ವಿಮಾನವನ್ನು ವಿಎಸ್‌ಆರ್ ಏವಿಯೇಷನ್ ಪೈಲಟ್‌ಗಳಾದ ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಹಾರಿಸಿದ್ದೇ ಆದರೂ ಅವರ ಬದಲಿಗೆ ಮತ್ತೊಬ್ಬ ಕ್ಯಾಪ್ಟನ್ ಹಾರಿಸಬೇಕಿತ್ತು. ಆದ್ರೆ, ವಿಧಿಯಾಟದ ಲೆಕ್ಕಾಚಾರವೇ ಬೇರೆ ಇತ್ತು ಎಂಬುದು ಇದರಿಂದ ಇನ್ನಷ್ಟು ಸ್ಪಷ್ಟವಾಗಿದೆ.
ಟ್ರಾಫಿಕ್ ಜಾಮ್
ಕಂಪನಿಯು ಪವಾರ್ ಪ್ರಯಾಣಿಸಬೇಕಿದ್ದ ಲಘು ವಿಮಾನವನ್ನು ಹಾರಿಸಲು ಇನ್ನೊಬ್ಬ ಪೈಲಟ್ಗೆ ಮೊದಲೇ ತಿಳಿಸಿದ್ದರು. ಆದರೆ, ಆತ ಕೊನೆಯ ಕ್ಷಣದಲ್ಲಿ ಬಾರದ ಹಿನ್ನೆಲೆ ಅವರ ಬದಲಿಗೆ ಕ್ಯಾಪ್ಟನ್ ಸುಮಿತ್ ತಕ್ಷಣವೇ ಬರುವಂತಾಯಿತು ಎಂದು 'ಎನ್ಡಿಟಿವಿ' ವರದಿ ಮಾಡಿದೆ. ಆ ದಿನ ನಗರದಲ್ಲಿ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಪೈಲಟ್, ತಾವು ಬರುವುದು ಇನ್ನೂ ತಡವಾಗುತ್ತೆ ಎಂದ ಕಾರಣ, ವಿಮಾನವನ್ನು ಹಾರಿಸಬೇಕಿದ್ದ ಪೈಲಟ್ ಜಾಗಕ್ಕೆ ಸುಮಿತ್ರನ್ನು ಕಳುಹಿಸಲಾಯಿತು ಎಂದು ಮೃತನ ಸ್ನೇಹಿತರು ತಿಳಿಸಿದ್ದಾರೆ.
16,000 ಗಂಟೆಗಳ...
ಕಪೂರ್ ಮೂಲತಃ ದೆಹಲಿಯವರು. ಅವರಿಗೆ 16,000 ಗಂಟೆಗಳ ವಿಮಾನ ಹಾರಾಟದ ಅನುಭವವಿದೆ. ಅವರು ಸಹಾರಾ ಮತ್ತು ಜೆಟ್ ಏರ್‌ವೇಸ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಕಪೂರ್ ಅವರ ಮಗ ಮತ್ತು ಅಳಿಯ ಇಬ್ಬರೂ ಪೈಲಟ್‌ಗಳೇ. ಅವರು ದುರಂತಕ್ಕೂ ಕೆಲವು ದಿನಗಳ ಹಿಂದೆಯಷ್ಟೇ ಹಾಂಗ್ ಕಾಂಗ್‌ನಿಂದ ವಾಪಾಸ್ ಆಗಿದ್ದರು ಎಂದು ಹೇಳಿದ್ದಾರೆ.
ಅಜಿತ್ ಪವಾರ್ರನ್ನು ಹೊತ್ತೊಯ್ದ ವಿಮಾನದ ಮುಖ್ಯ ಪೈಲಟ್ ಅಥವಾ ಮೊದಲ ಅಧಿಕಾರಿ ಕ್ಯಾಪ್ಟನ್ ಶಾಂಭವಿ ಅವರಿಗೆ 1500 ಗಂಟೆಗಳ ಹಾರಾಟದ ಅನುಭವವಿದೆ. ದೆಹಲಿ ಮೂಲದ ಶಾಂಭವಿ ಸೇನಾ ಅಧಿಕಾರಿಯ ಪುತ್ರಿ. ಅವರು 2018ರಲ್ಲಿ ದೆಹಲಿಯ ಏರ್ ಫೋರ್ಸ್ ಬಾಲ್ ಭಾರತಿ ಶಾಲೆಯಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.
ನಂತರ ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ತಮ್ಮ ವಾಣಿಜ್ಯ ಪೈಲಟ್ ಮತ್ತು ಫ್ಲೈಟ್ ಸಿಬ್ಬಂದಿ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್, ವಾಯುಯಾನ ಮತ್ತು ಏರೋಸ್ಪೇಸ್ ಸೈನ್ಸ್ ಮತ್ತು ತಂತ್ರಜ್ಞಾನದಲ್ಲಿ ಪದವಿಯನ್ನು ಪಡೆದಿದ್ದಾರೆ. ಇಂದು ಅವರ ಅಗಲಿಕೆ ಕುಟುಂಬಸ್ಥರಿಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ಅತೀವ ದುಃಖವನ್ನು ತಂದೊಡ್ಡಿದೆ,(ಏಜೆನ್ಸೀಸ್).