ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವ ಮಾಧ್ಯಮಗಳ ವರದಿ ಹೀಗಿವೆ!  
ದೇಶ

ಆಕಾಶದಲ್ಲೇ ಜೀವನ್ಮರಣದ ಹೋರಾಟ: ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವ ಮಾಧ್ಯಮಗಳ ವರದಿ ಹೀಗಿವೆ! | Smit Machchhar

Smit Machchhar: ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್‌ನೊಂದಿಗೆ ನಡೆದ ನಾಟಕೀಯ ಮತ್ತು ಜೀವನ್ಮರಣದ ಹೋರಾಟದಿಂದಾಗಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಜಗತ್ತಿನಾದ್ಯಂತದ ಮಾಧ್ಯಮಗಳ ಗಮನ ಸೆಳೆದಿದ್ದಾರೆ.

Smit Machchhar: ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್‌ನೊಂದಿಗೆ ನಡೆದ ನಾಟಕೀಯ ಮತ್ತು ಜೀವನ್ಮರಣದ ಹೋರಾಟದಿಂದಾಗಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಜಗತ್ತಿನಾದ್ಯಂತದ ಮಾಧ್ಯಮಗಳ ಗಮನ ಸೆಳೆದಿದ್ದಾರೆ. 174 ಜನಪ್ರಯಾಣಿಕರಿದ್ದ ವಿಮಾನದಲ್ಲಿ ಸಹ-ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಸಹ, ಮಚ್ಚರ್ ದೊಡ್ಡ ಮಟ್ಟದ ವಿಮಾನ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಗಾಯಗಳನ್ನು ಲೆಕ್ಕಿಸದೆ ಮಚ್ಚರ್ ಧೈರ್ಯದಿಂದ ಹೋರಾಡಿದರು ಮತ್ತು ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು. ತದನಂತರ ವಿಮಾನದ ದಿಕ್ಕನ್ನು ಬದಲಿಸಿ ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಿಮಾನದಲ್ಲಿದ್ದ 174 ಜನರ ಪ್ರಾಣ ಉಳಿಸಿದ ಮಚ್ಚರ್ ಅವರನ್ನು ಕೊಂಡಾಡಿದ್ದು, ಅವರನ್ನು ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ. ಈ ಘಟನೆಯು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಬಿತ್ತರಗೊಂಡಿದೆ.

ಇದನ್ನೂ ಓದಿ:'ನಿಮ್ಗೆ ಸಮಸ್ಯೆಯಾದ್ರೇ ಕಾಪಾಡೋದ್ಯಾರು?'; ಕ್ಯಾಬಿನ್ ಸಿಬ್ಬಂದಿ ದುಸ್ಥಿತಿ ಬಗ್ಗೆ FlyDubai ಪೈಲಟ್​ ಹೇಳಿದ್ದ ಹಳೇ ಮಾತು ವೈರಲ್

ವಿಶ್ವ ಮಾಧ್ಯಮಗಳು ಸ್ಮಿತ್ ಮಚ್ಚರ್ ಸಾಹಸವನ್ನು ವರದಿ ಮಾಡಿದ್ದು ಹೀಗೆ!

ಸಿಎನ್ಎನ್ (CNN): ದುಬೈನಿಂದ ಟೆಲ್ ಅವಿವ್‌ಗೆ ಹಾರುತ್ತಿದ್ದ ವಿಮಾನದ ಅಪಹರಣದ ಯತ್ನವನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಕ್‌ಪಿಟ್ ಹೋರಾಟದ ವೇಳೆ ಮಧ್ಯಪ್ರವೇಶಿಸಿದ ಮಚ್ಚರ್ ಮತ್ತು ಪ್ರಯಾಣಿಕರನ್ನು ಹೀರೋಗಳು ಎಂದು ಬಣ್ಣಿಸಿದೆ.

ಸಿಎನ್ಎನ್ ವರದಿ

ದಿ ಗಾರ್ಡಿಯನ್ (The Guardian): ವಿಮಾನವನ್ನು ಪತನಗೊಳಿಸಲು ಯತ್ನಿಸಿದ ದಾಳಿಕೋರನಿಂದ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ ಮಚ್ಚರ್ ಅವರನ್ನು ಹೀರೋ ಎಂದು ಶ್ಲಾಘಿಸಿದೆ.

ಗಾರ್ಡಿಯನ್ ವರದಿ

ಬಿಬಿಸಿ (BBC): ಇಸ್ರೇಲ್ ಕಡೆಗೆ ಸಾಗುತ್ತಿದ್ದ ವಿಮಾನದಲ್ಲಿ ಇರಿಯಲ್ಪಟ್ಟ ಆ ಹೀರೋ ಭಾರತೀಯ ಪೈಲಟ್ ಯಾರು? ಎಂದು ಪ್ರಶ್ನಿಸುವ ಮೂಲಕ ಮಚ್ಚರ್ ಅವರ ಗುರುತು ಮತ್ತು ಅವರ ಸಾಹಸದ ಬಗ್ಗೆ ಗಮನಹರಿಸಿದೆ.

ಬಿಬಿಸಿ ವರದಿ

ರಾಯ್ಟರ್ಸ್ (Reuters): ಜವಳಿ ಇಂಜಿನಿಯರಿಂಗ್‌ನಿಂದ ಕಾಕ್‌ಪಿಟ್ ಹೀರೋವರೆಗೆ: ಫ್ಲೈದುಬೈ ಘಟನೆ ಬಳಿಕ ಭಾರತೀಯ ಪೈಲಟ್‌ಗೆ ಮೆಚ್ಚುಗೆ0 ಎಂಬ ಶೀರ್ಷಿಕೆಯೊಂದಿಗೆ ಅವರ ಜೀವನದ ಹಾದಿಯನ್ನು ಹೈಲೈಟ್ ಮಾಡಿದೆ.

ರಾಯ್ಟರ್ಸ್ ವರದಿ

ಅಸೋಸಿಯೇಟೆಡ್ ಪ್ರೆಸ್ (AP): ಇಸ್ರೇಲ್ ಕಡೆಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್‌‌ಪಿಟ್ ಇರಿತದ ವರದಿಯಲ್ಲಿ ಮಚ್ಚರ್ ಅವರನ್ನು ಹೀರೋ ಎಂದು ಬಣ್ಣಿಸಿದೆ.

ಅಸೋಸಿಯೇಟೆಡ್ ಪ್ರೆಸ್ ವರದಿ

ದಿ ನ್ಯೂಯಾರ್ಕ್ ಟೈಮ್ಸ್ (The New York Times): ಹೀರೋ ಎಂದು ಕರೆಯಲ್ಪಡುತ್ತಿರುವ ಫ್ಲೈದುಬೈ ಪೈಲಟ್ ಯಾರು? ಎಂಬ ಶೀರ್ಷಿಕೆಯೊಂದಿಗೆ ಪ್ರೊಫೈಲ್ ಮಾದರಿಯ ವರದಿಯನ್ನು ಪ್ರಕಟಿಸಿದೆ.

ದಿ ನ್ಯೂಯಾರ್ಕ್ ಟೈಮ್ಸ್ ವರದಿ

ದಿ ನ್ಯೂಯಾರ್ಕ್ ಪೋಸ್ಟ್ (The New York Post): ಪೈಲಟ್ ಅನ್ನು ಭಾರತೀಯ ಪ್ರಜೆ ಎಂದು ಗುರುತಿಸಿ, ಸಹ-ಪೈಲಟ್‌ನೊಂದಿಗೆ ನಡೆದ ಅವರ ಮುಖಾಮುಖಿಯ ಮೇಲೆ ಗಮನ ಕೇಂದ್ರೀಕರಿಸಿದೆ.

ದಿ ನ್ಯೂಯಾರ್ಕ್ ಪೋಸ್ಟ್ ವರದಿ

ದಿ ವಾಷಿಂಗ್ಟನ್ ಪೋಸ್ಟ್ (The Washington Post): ಕಾಕ್‌ಪಿಟ್‌ನಲ್ಲಿ ನಡೆದ ಇರಿತದ ನಂತರ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಜಾಗತಿಕ ನಾಯಕರು ಮತ್ತು ಮಾಧ್ಯಮಗಳು ಹೀರೋ ಎಂದು ಕೊಂಡಾಡಿರುವುದನ್ನು ತನ್ನ ವರದಿಯಲ್ಲಿ ಪ್ರಮುಖವಾಗಿ ವಿವರಿಸಿದೆ.

ದಿ ವಾಷಿಂಗ್ಟನ್ ಪೋಸ್ಟ್ ವರದಿ

ದಿ ಟೈಮ್ಸ್ ಆಫ್ ಇಸ್ರೇಲ್ (The Times of Israel): ಪೈಲಟ್ ಮತ್ತು ಪ್ರಯಾಣಿಕರ ಪಾತ್ರವನ್ನು ಎತ್ತಿಹಿಡಿದಿದ್ದು, ವಿಮಾನವನ್ನು ಪತನಗೊಳಿಸುವ ಪ್ರಯತ್ನವನ್ನು ವಿಫಲಗೊಳಿಸಿದ ಆ ಘಟನೆಯನ್ನು ಆಕಾಶದಲ್ಲಿ ನಡೆದ ಸರಣಿ ಅದ್ಭುತಗಳು ಎಂದು ವರ್ಣಿಸಿದೆ.

ದಿ ಟೈಮ್ಸ್ ಆಫ್ ಇಸ್ರೇಲ್ ವರದಿ

ಯಾರೀ ಸ್ಮಿತ್ ಮಚ್ಚರ್..?

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಅನುಭವಿ ವಾಣಿಜ್ಯ ಪೈಲಟ್ ಆಗಿದ್ದು, ಪ್ರಸ್ತುತ ದುಬೈ ಮೂಲದ ಫ್ಲೈದುಬೈ ಸಂಸ್ಥೆಯಲ್ಲಿ ನೇರ-ನೇಮಕಾತಿ (Direct-entry) ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಮಾಧ್ಯಮಗಳು ಉಲ್ಲೇಖಿಸಿರುವ ಅವರ ವೃತ್ತಿಪರ ಪ್ರೊಫೈಲ್ ಪ್ರಕಾರ, ಅವರು 13 ವರ್ಷಗಳಿಗೂ ಅಧಿಕ ವಾಣಿಜ್ಯ ವಿಮಾನಯಾನ ಅನುಭವವನ್ನು ಹೊಂದಿದ್ದು, ಹೆಚ್ಚಾಗಿ ಬೋಯಿಂಗ್ 737 ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.

ಫ್ಲೈದುಬೈ ಸೇರುವ ಮೊದಲು ಮಚ್ಚರ್ ಭಾರತೀಯ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ನಲ್ಲಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿ ತಮ್ಮ ಸೇವೆಯ ಅವಧಿಯಲ್ಲಿ ಅವರು ಹಿರಿಯ ಕಮಾಂಡರ್ ಆಗಿ ಮತ್ತು ನಂತರ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ (ಪೈಲಟ್‌ಗಳಿಗೆ ತರಬೇತಿ ಮತ್ತು ಮೌಲ್ಯಮಾಪನ ನೀಡುವ ಪಾತ್ರ) ಸೇವೆ ಸಲ್ಲಿಸಿದ್ದರು. ಅವರು ಜೂನ್ 2022 ರಲ್ಲಿ ಫ್ಲೈದುಬೈ ಸೇರಿದ್ದರು. ತಮ್ಮ ಮಗ ಗಾಯಗೊಂಡಿರುವ ಸುದ್ದಿ ತಿಳಿದು ಅವರ ಪೋಷಕರು ತಬುಕ್ ತೆರಳಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಮಚ್ಚರ್ ಅವರ ಸಹೋದರ ಕೂಡ ಇತ್ತೀಚೆಗೆ ಫ್ಲೈದುಬೈಗೆ ಪೈಲಟ್ ಆಗಿ ಸೇರಿದ್ದಾರೆ ಎಂದು ವರದಿಯಾಗಿದೆ, ಆದರೂ ಅವರು ಇನ್ನೂ ಹಾರಾಟ ಆರಂಭಿಸಿಲ್ಲ.

ಘಟನೆಯ ಹಿನ್ನಲೆ!

ದುಬೈನಿಂದ ಟೆಲ್ ಅವಿವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನ FZ1073 ಬುಧವಾರ ತುರ್ತು ಸಂಕೇತಗಳನ್ನು (Emergency signals) ರವಾನಿಸಿತು. ಸೌದಿ ಅರೇಬಿಯಾದ ತಬುಕ್ ನಗರದ ರಾಜಾ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣಕ್ಕೆ ತಿರುಗಿಸಲ್ಪಡುವ ಮುನ್ನ, ಈ ವಿಮಾನವು 34,000 ಅಡಿಯಿಂದ 17,000 ಅಡಿಗಳಿಗೂ ಹೆಚ್ಚು ಎತ್ತರಕ್ಕೆ ತೀವ್ರವಾಗಿ ಇಳಿದಿತ್ತು (sharp descent). ಈ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದರು.

ವಿಮಾನವು ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು,ಯಾವೊಬ್ಬ ಪ್ರಯಾಣಿಕರಿಗೂ ಅಪಾಯವಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).