- ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಚ್
- ಲಾಠಿಚಾರ್ಚ್ ಮಾಡಿದ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಚ್ ಮಾಡಿದ ದೆಹಲಿ ಪೊಲೀಸರನ್ನು ಇದೀಗ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪೊಲೀಸರ ದೌರ್ಜನ್ಯ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ, ಅತ್ಯಂತ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಕೇವಲ ಪ್ರತಿಭಟನೆ ಅಥವಾ ಆಂದೋಲನ ನಡೆಯುತ್ತಿದೆ ಎಂಬ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡುವುದು ಸಲ್ಲದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ತಿಳಿಸಿತು.
ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಹೊಸ ಅರ್ಜಿಗಳ ಗುಂಪನ್ನು ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಪ್ರಸ್ತಾಪಿಸಲಾಯಿತು. ಇದೇ ವೇಳೆ ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದ ಪೊಲೀಸರ ಪರವಾಗಿಯೂ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ಪರಿಶೀಲಿಸಿತು.
ಪ್ರಜಾಪ್ರಭುತ್ವದಲ್ಲಿ ಆತ್ಮಶಿಸ್ತು ಅಗತ್ಯ
ವಿಚಾರಣೆ ವೇಳೆ ಮೌಖಿಕವಾಗಿ ಮಾತು ಮುಂದುವರಿಸಿದ ಸಿಜೆಐ ಸೂರ್ಯ ಕಾಂತ್, ಪ್ರತಿಯೊಬ್ಬ ಪ್ರಜೆಯನ್ನೂ ರಕ್ಷಿಸಬೇಕಿದೆ. ಎಲ್ಲಾದರೂ ಪೋಲಿಸ್ ಪಡೆಗಳಿಂದ ಅತಿಯಾದ ದೌರ್ಜನ್ಯ ನಡೆದಿದ್ದರೆ ಅದನ್ನು ತಡೆಯಲೇಬೇಕು. ಇದಕ್ಕೆ ಸೂಕ್ತ ನಿಯಮಾವಳಿ ಇರಬೇಕು. ಇದು ಕೇವಲ ದೆಹಲಿಗೆ ಮಾತ್ರ ಸೀಮಿತವಲ್ಲ. ದೇಶದ ವಿವಿಧೆಡೆ ಆಂದೋಲನಗಳು ನಡೆದಿವೆ. ಕೇವಲ ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಮೂಲ ಸತ್ವವೇ ಆತ್ಮಶಿಸ್ತು ಎಂದು ಅಭಿಪ್ರಾಯಪಟ್ಟರು.
ಯುವಜನತೆ ತಮ್ಮ ಅಸಮಾಧಾನ ಅಥವಾ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಬೇಕು. ಆದರೆ, ಈ ಪ್ರತಿಭಟನೆಗಳ ದುರ್ಬಳಕೆ ಮಾಡಿಕೊಳ್ಳುವ ಸಮಾಜಘಾತಕ ಶಕ್ತಿಗಳನ್ನು ತಡೆಯುವ ನಡುವೆ ಸರಿಯಾದ ಸಮತೋಲನ ಕಾಯ್ದುಕೊಳ್ಳಬೇಕು. ಯುವಕರು ಹೋರಾಟ ನಡೆಸಲು ಬಯಸಿದರೆ, ಅವರಿಗೆ ಸೂಕ್ತ ಜಾಗ ಹಾಗೂ ಅವಕಾಶ ನೀಡುವಂತಹ ಪ್ರೋಟೋಕಾಲ್ ಇರಬೇಕು. ಆದರೆ, ಅದೇ ಸಮಯದಲ್ಲಿ ಸಮಾಜಘಾತಕ ಶಕ್ತಿಗಳು ಅದರಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿತು.
ಖಾಕಿಗೂ ರಕ್ಷಣೆ ಬೇಕು
ಪೀಠದ ಮತ್ತೊಬ್ಬ ಸದಸ್ಯರಾದ ನ್ಯಾಯಮೂರ್ತಿ ಜಯಮಾಲಾ ಬಾಗ್ಚಿ ಅವರು ಮಾತನಾಡಿ, "ಎಲ್ಲರ ರಕ್ಷಣೆಯೂ ನಮಗೆ ಸಮಾನ ಕಾಳಜಿಯ ವಿಷಯ. ಪ್ರತಿಭಟನಾಕಾರರಿಂದ ಪೊಲೀಸರ ಮೇಲೆಯೂ ದಾಳಿಯಾಗಬಾರದು. ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಏಕೆ ಸರಿಯಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು (SOP) ಜಾರಿಯಲ್ಲಿಲ್ಲ ಎಂಬುದನ್ನು ವಿವರಿಸುವಂತೆ ನಾವು ರಾಜ್ಯ ಸರ್ಕಾರಗಳಿಗೆ ಕೇಳಬಹುದು" ಎಂದರು.