ಸರ್ಕಾರ ಭ್ರಷ್ಟತೆಗೆ ಮಕ್ಕಳ ಭವಿಷ್ಯ ಹಾಳಾಗಿದೆ: ರಾಹುಲ್​ ಗಾಂಧಿ 
ದೇಶ

ನೀಟ್​ ಪರೀಕ್ಷೆ ರದ್ದತಿ: ಸರ್ಕಾರದ ಭ್ರಷ್ಟತೆಗೆ 22 ಲಕ್ಷ ವಿದ್ಯಾರ್ಥಿಗಳ ಕನಸು ನುಚ್ಚುನೂರು; ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್​ ಗಾಂಧಿ! Rahul Gandhi on NEET UG Cancelled

ಪ್ರಮುಖ ಮುಖ್ಯಾಂಶಗಳು

  • ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ನೀಟ್​ ಯುಜಿ ಪರೀಕ್ಷೆ ರದ್ದತಿ
  • ಸರ್ಕಾರ ಭ್ರಷ್ಟತೆಗೆ ಮಕ್ಕಳ ಭವಿಷ್ಯ ಹಾಳಾಗಿದೆ: ರಾಹುಲ್​ ಗಾಂಧಿ
  • ಇದು ಕೇವಲ ಸರ್ಕಾರದ ವೈಪಲ್ಯವಲ್ಲ ಬದಲಿಗೆ ಅಪರಾಧ ಎಂದ ವಿರೋಧ ಪಕ್ಷ ನಾಯಕ
ನವದೆಹಲಿ: ನೀಟ್​ ಯುಜಿ ಪ್ರಶ್ನೆ ಪತ್ರಿಕೆಯಲ್ಲಿ ಸೋರಿಕೆಯಾದ ಕಾರಣ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ (Rahul Gandhi on NEET UG Cancelled) ಬಿಜೆಪಿಯ ಭ್ರಷ್ಟಾಚಾರಕ್ಕೆ 22 ಲಕ್ಷ ಮಕ್ಕಳ ಕನಸು ನುಚ್ಚುನೂರಾಗಿದೆ ಎಂದು ಕಿಡಿ ಕಾರಿದ್ದಾರೆ.

ಮಕ್ಕಳ ಪರಿಶ್ರಮಕ್ಕೆ ಬೆಲೆಯಿಲ್ಲ!

ನೀಟ್​ ಪರೀಕ್ಷೆ ರದ್ಧತಿ ಕುರಿತು ಎಕ್ಸ್​ (ಟ್ವಿಟರ್​) ನಲ್ಲಿ ಪೋಸ್ಟ್​ ಮಾಡಿರುವ ರಾಹುಲ್​ ಗಾಂಧಿ, 2026 ರ ನೀಟ್​ ಪರೀಕ್ಷೆ ರದ್ದಾಗಿದೆ ಬಿಜೆಪಿಯ ಭ್ರಷ್ಟಾಚಾರದಿಂದ ಸುಮಾರು 22 ಲಕ್ಷ ಮಕ್ಕಳ ಪರಿಶ್ರಮ, ತ್ಯಾಗ, ಕನಸು ಎಲ್ಲವೂ ಮುರಿದು ಬಿದ್ದಿವೆ ಎಂದು ಬರೆದುಕೊಂಡಿದ್ದಾರೆ.
ಕೆಲ ಪಾಲಕರು ಸಾಲ ಮಾಡಿ ಮಕ್ಕಳಿಗೆ ಓದಿಸಿದ್ದರು, ಇನ್ನು ಕೆಲವರು ತಮ್ಮ ಒಡವೆಗಳನ್ನು ಅಡವಿಟ್ಟಿದ್ದರು, ಲಕ್ಷಾಂತರ ಮಕ್ಕಳು ನಿದ್ದೆಗೆಟ್ಟು ಓದಿದ್ದರು. ಇದಕ್ಕೆ ಪ್ರತಿಫಲವಾಗಿ ಪೇಪರ್ ಲೀಕ್​, ಸರ್ಕಾರದ ನಿರ್ಲಕ್ಷ್ಯ ಹಾಗೂ ವ್ಯವಸ್ಥಿತ ಭ್ರಷ್ಟಾಚಾರವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಇದು ವೈಫಲ್ಯವಲ್ಲ ಅಪರಾಧ

ಈ ಘಟನೆ ಕೇವಲ ಸರ್ಕಾರದ ವೈಫಲ್ಯವಲ್ಲ ಇದು ಯುವಕರ ಭವಿಷ್ಯದ ಜೊತೆ ನಡೆದಿರುವ ಅಪರಾಧ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ಪ್ರತಿ ಭಾರಿ ಈ ಪೇಪರ್​ ಲೀಕ್​ ಮಾಡಿದವರು ಆರಾಮಾಗಿ ತಪ್ಪಿಸಿಕೊಳ್ಳುತ್ತಾರೆ. ನಿಯತ್ತಾಗಿ ಪರೀಕ್ಷೆ ಬರೆದ ಮಕ್ಕಳು ಇಲ್ಲಿ ಸಮಸ್ಯೆ ಎದುರಿಸ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ನೀಟ್​ ಪರೀಕ್ಷೆ ರದ್ದು

ರಾಜಸ್ಥಾನದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಮೇ3 ರಂದು ನಡೆಸಲಾದ ಯುಜಿ ನೀಟ್​ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದೀಗ ರದ್ದುಗೊಳಿಸಿದೆ.
ರಾಜಸ್ಥಾನದ ಸೀಕರ್​ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದರಿಂದ ಆಘಾತ ಎದುರಾದರೂಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್​ಟಿಎ ಈ ನಿರ್ಧಾರವನ್ನು ಕೈಗೊಂಡಿದ್ದು, ಸೋರಿಕೆಯ ಪ್ರಕರಣವನ್ನು ಗಮನಿಸಿದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ, (ಏಜನ್ಸೀಸ್​).