ತಾಕತ್ತಿದ್ದರೆ ಅಮೆರಿಕ ಜೊತೆಗಿನ ಡೀಲ್ ರದ್ದು ಮಾಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ನೇರ ಸವಾಲು..! 
ದೇಶ

ತಾಕತ್ತಿದ್ದರೆ ಅಮೆರಿಕ ಜೊತೆಗಿನ ಡೀಲ್ ರದ್ದು ಮಾಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ನೇರ ಸವಾಲು..! Rahul Gandhi

ನವದೆಹಲಿ: ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯಿಲ್ಲದೆ ಪ್ರಧಾನಿ ಮೋದಿಯವರು ಏಕಪಕ್ಷೀಯವಾಗಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಪುಟಕ್ಕೂ ತಿಳಿಸದೆ ರಹಸ್ಯ ಒಪ್ಪಂದ..?

ಈ ಬಗ್ಗೆ ಭೋಪಾಲ್‌ನಲ್ಲಿ ನಡೆದ ಕಿಸಾನ್ ಮಹಾ ಚೌಪಾಲ್​ನಲ್ಲಿ ಮಾತನಾಡಿದ ರಾಹುಲ್​, ಭಾರತದ ರೈತರು ಮತ್ತು ಯುವಕರ ಹಿತಾಸಕ್ತಿಯನ್ನು ಮೋದಿಯವರು ಅಮೆರಿಕಕ್ಕೆ ಅಡವಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ನರೇಂದ್ರ ಮೋದಿಯವರು ಸಂಪುಟ ಸಚಿವರನ್ನು ಕನಿಷ್ಠ ಮಟ್ಟಕ್ಕೆ ಕೇಳದೆ ಅಮೆರಿಕದೊಂದಿಗಿನ ವ್ಯವಹಾರವನ್ನು ಅಂತಿಮಗೊಳಿಸಿದ್ದಾರೆ. ಇದು ಸಂಪೂರ್ಣವಾಗಿ ಗುಪ್ತವಾಗಿ ನಡೆದ ಒಪ್ಪಂದವಾಗಿದ್ದು, ಇದರಿಂದ ಭಾರತೀಯ ರೈತರಿಗೆ ಭಾರಿ ನಷ್ಟವಾಗಲಿದೆ ಎಂದು ಗುಡುಗಿದ್ದಾರೆ.
ಈ ಒಪ್ಪಂದವು ಕೇವಲ ವ್ಯಾಪಾರವಲ್ಲ, ಇದು ರೈತರ ಹೃದಯಕ್ಕೆ ನಾಟಿದ ವಿಷಪೂರಿತ ಬಾಣ. ವಾಷಿಂಗ್ಟನ್ ತನಗೆ ಬೇಕಾದಂತೆ ಈ ಒಪ್ಪಂದದ ನಿಯಮಗಳನ್ನು ರೂಪಿಸಿದೆ. ನಿಮಗೆ ತಾಕತ್ತಿದ್ದರೆ ಈ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಿ ಎಂದು ವಿಪಕ್ಷ ನಾಯಕ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ದತ್ತಾಂಶ ಮತ್ತು ಕೃಷಿ ವಲಯದ ಮೇಲೆ ಆತಂಕ

ಕೃಷಿ ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಈ ಒಪ್ಪಂದವು ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿತ್ತು. ಭಾರತದ ರೈತರು ಮತ್ತು ಕಾರ್ಮಿಕರು ಈ ಒಪ್ಪಂದದ ವಿರುದ್ಧವಿದ್ದರು. ಆದರೆ, ಪ್ರಧಾನಿಯವರು ಸಂಸತ್ತಿನಿಂದ ಹೊರಬಂದ ಕೂಡಲೇ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಕರೆ ಮಾಡಿ ಒಪ್ಪಂದಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿಯವರು ದೇಶದ ಅಮೂಲ್ಯವಾದ ದತ್ತಾಂಶವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.

ಎಪ್ಸ್ಟೀನ್ ಫೈಲ್ಸ್ ಮತ್ತು ಸಚಿವರ ಹೆಸರುಗಳ ಪ್ರಸ್ತಾಪ

ಇದೇ ವೇಳೆ ರಾಹುಲ್ ಗಾಂಧಿ ಅವರು ವಿವಾದಿತ ಎಪ್ಸ್ಟೀನ್ ಫೈಲ್ಸ್ ವಿಚಾರವನ್ನು ಪ್ರಸ್ತಾಪಿಸಿ ಸಂಚಲನ ಮೂಡಿಸಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಈ ಕಡತಗಳಲ್ಲಿದೆ ಎಂದು ಅವರು ಆರೋಪಿಸಿದರು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಸಂಪುಟದ ಇನ್ನಷ್ಟು ಪ್ರಮುಖ ಸಚಿವರ ಹೆಸರುಗಳು ಈ ವಿವಾದದಲ್ಲಿ ಹೊರಬರಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಮೋದಿಯವರ ಕಣ್ಣಲ್ಲಿ ಭಯ ಕಾಣುತ್ತಿದೆ

ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ನರೇಂದ್ರ ಮೋದಿಯವರು ಭಾಷಣ ಮಾಡುವಾಗ ಅವರ ಕಣ್ಣುಗಳನ್ನು ನೇರವಾಗಿ ನೋಡಿ, ಅವರ ಕಣ್ಣಲ್ಲಿ ಸೋಲಿನ ಭಯ ಎದ್ದುಕಾಣುತ್ತಿದೆ. ನೀವು ಸಿಂಹದಂತೆ ಹೋರಾಡಿ, ಮೋದಿಗೆ ಹೆದರುವ ಅಗತ್ಯವಿಲ್ಲ ಎಂದು ಹುರಿದುಂಬಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಉತ್ತರಿಸಲಾಗದೆ ಪ್ರಧಾನಿ ಸಂಸತ್ತಿನಿಂದ ಓಡಿಹೋಗಿದ್ದಾರೆ ಎಂದು ವಿಪಕ್ಷ ನಾಯಕ ಲೇವಡಿ ಮಾಡಿದ್ದಾರೆ,(ಏಜೆನ್ಸೀಸ್).