ದೇಶ

ಮೋದಿ ಸ್ವಾಗತಕ್ಕೆ ಎದುರುನೋಡುತ್ತಿದ್ದೇವೆ!...G20 ಶೃಂಗಸಭೆಯ ವೇಳೆಗೆ ವಾಣಿಜ್ಯ ಮಾತುಕತೆ ಪೂರ್ಣಗೊಳಿಸಲು ಕೆನಡಾ ಪ್ರಧಾನಿ ನಿರ್ಧಾರ! | Canada-IndiaTrade

Canada-IndiaTrade: ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳು ಸರಿಯಾದ ಹಾದಿಯಲ್ಲಿದ್ದು, ಡಿಸೆಂಬರ್ ಮಧ್ಯದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ವೇಳೆಗೆ ಇವುಗಳನ್ನು ಪೂರ್ಣಗೊಳಿಸುವ ಗುರಿ ಉಭಯ ದೇಶಗಳಿಗೂ ಇದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮಂಗಳವಾರ ತಿಳಿಸಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾಕ್ಕೆ ಭೇಟಿ ನೀಡುವುದನ್ನು ಭಾರತ ಖಚಿತಪಡಿಸಿದೆಯಾದರೂ, ಭೇಟಿಯ ನಿಖರ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಕಾರ್ನಿ ಹೇಳಿದ್ದಾರೆ.

ಸಂಯುಕ್ತ ರಾಷ್ಟ್ರಗಳ (UN) ಸಾಮಾನ್ಯ ಸಭೆಯ ನಡುವೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ನಿ, ಭಾರತದೊಂದಿಗಿನ ನಮ್ಮ ವಾಣಿಜ್ಯ ಮಾತುಕತೆಗಳಲ್ಲಿ ನಾವು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ ಎಂದು ಹೇಳಿದರು. ಜಿ20 ಶೃಂಗಸಭೆಯ ವೇಳೆಗೆ ಮಾತುಕತೆಗಳನ್ನು ಪೂರ್ಣಗೊಳಿಸಲು ತಾವು ಮತ್ತು ಮೋದಿ ಬದ್ಧರಾಗಿದ್ದೇವೆ ಎಂದು ಕಾರ್ನಿ ಹೇಳಿದರು. ಈ ಶೃಂಗಸಭೆಯು ಡಿಸೆಂಬರ್ 14-15 ರಂದು ಮಿಯಾಮಿಯ ಟ್ರಂಪ್ ನ್ಯಾಷನಲ್ ಡೋರಲ್‌ನಲ್ಲಿ ನಡೆಯಲಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕವನ್ನು ಹೊರತುಪಡಿಸಿ ಇತರ ದೇಶಗಳೊಂದಿಗೆ ಕೆನಡಾದ ವ್ಯಾಪಾರವನ್ನು ಎರಡರಷ್ಟು ಹೆಚ್ಚಿಸಲು ಕಾರ್ನಿ ಮನಸ್ಸು ಮಾಡಿದ್ದು, ಡೊನಾಲ್ಡ್ ಟ್ರಂಪ್ ಮುಂದಾಳತ್ವದಲ್ಲಿ ಅಮೆರಿಕದೊಂದಿಗಿನ ಬಾಂಧವ್ಯ ಹಳಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ, ಆ ದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಲು ಕೆನಡಾ ಭಾರತವನ್ನು ನೆಚ್ಚಿಕೊಂಡಿದೆ.

ಇದನ್ನೂ ಓದಿ:ದೇಶವಿರೋಧಿ ಸಾಹಿತ್ಯದ ವಿರುದ್ಧ ಜಮ್ಮು-ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್!...20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ತಪಾಸಣೆ! | Jammu And Kashmir

ಕಳೆದ ವಾರ, ಕಾರ್ನಿ ಅವರು ಯುರೋಪಿಯನ್ ಯೂನಿಯನ್​​ನ ಮೊದಲ ಸಹವರ್ತಿ ಸದಸ್ಯ ರಾಷ್ಟ್ರವಾಗುವ ಸಾಧ್ಯತೆಯನ್ನು ಮುಕ್ತವಾಗಿ ಸ್ವಾಗತಿಸುತ್ತಾ, ಯುರೋಪ್‌ನೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಕೆನಡಾದ ಮಾರುಕಟ್ಟೆಗಳನ್ನು ನಿಯಂತ್ರಿಸಲು ಅಥವಾ ಅದರ ಸಾರ್ವಭೌಮತ್ವವನ್ನು ಹಾಳುಮಾಡಲು ಯಾವುದೇ ದೇಶಕ್ಕೆ ಸಾಧ್ಯವಾಗದಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಕಾರ್ನಿ ಅವರು ಈ ವರ್ಷದ ಆರಂಭದಲ್ಲಿ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದರ ಪ್ರಕಾರ, ಕೆನಡಾದ ಕೆನೋಲಾ ಮೇಲಿನ ತೆರಿಗೆಯನ್ನು ಚೀನಾ ಕಡಿಮೆ ಮಾಡಲಿದ್ದು, ಅದಕ್ಕೆ ಪ್ರತಿಯಾಗಿ ಚೀನಾದ ಕೆಲವು ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ತೆರಿಗೆ ವಿನಾಯಿತಿ ನೀಡಿ ತಮ್ಮ ದೇಶಕ್ಕೆ ಬರಲು ಸಮ್ಮತಿಸಿತ್ತು. ಇನ್ನೊಂದೆಡೆ, ಕೆನಡಾ ಮತ್ತು ಭಾರತ ಮಾರ್ಚ್‌ನಲ್ಲಿ ಅಧಿಕೃತ ವ್ಯಾಪಾರ ಮಾತುಕತೆ ಆರಂಭಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇದನ್ನು ಪೂರ್ಣಗೊಳಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ.

2023 ರಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಕೆನಡಾದ ಸಿಖ್ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ನಂತರ ಉಂಟಾದ ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿನ ನಂತರ, ಈ ಆರ್ಥಿಕ ಬಾಂಧವ್ಯ ಪುನರಾರಂಭಗೊಂಡಿದೆ. ನಿಜ್ಜರ್ ಹತ್ಯೆಗೆ ಭಾರತ ಸರ್ಕಾರದ ಏಜೆಂಟ್‌ಗಳ ನಂಟು ಇರುವ ಬಗ್ಗೆ ನಂಬಲರ್ಹವಾದ ಆರೋಪಗಳಿವೆ ಎಂದು ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದರು.

ಕೆನಡಾದಲ್ಲಿ ನಡೆದ ಕೊಲೆಗಳು ಮತ್ತು ಇತರ ಹಿಂಸಾತ್ಮಕ ಕೃತ್ಯಗಳಿಗೆ ಭಾರತ ಸರ್ಕಾರದ ಏಜೆಂಟ್‌ಗಳು ನಂಟನ್ನು ಹೊಂದಿದ್ದಾರೆನ್ನಲಾದ ಸಾಕ್ಷ್ಯಾಧಾರಗಳು ತನ್ನ ಬಳಿ ಇವೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ತಿಳಿಸಿತ್ತು. ಭಾರತೀಯ ರಾಜತಾಂತ್ರಿಕರು ಕೆನಡಿಯನ್ನರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಸಂಘಟಿತ ಅಪರಾಧ ಗ್ಯಾಂಗ್‌ಗಳಿಗೆ ತಲುಪಿಸಿದ್ದು, ಇದು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಟ್ರುಡೊ ಹೇಳಿದ್ದರು. ಈ ಆರೋಪಗಳ ನಡುವೆ ಕೆನಡಾ ಆರು ಭಾರತೀಯ ರಾಜತಾಂತ್ರಿಕರನ್ನು ಗಡೀಪಾರು ಮಾಡಿತ್ತು. ಭಾರತವು ಈ ಆರೋಪಗಳಲ್ಲಿ ತನಗೆ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿತ್ತು ಮತ್ತು ಕೆನಡಾ ದೇಶವೇ ಸಿಖ್ ಪ್ರತ್ಯೇಕತಾವಾದಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿತ್ತು.

ಎರಡೂ ದೇಶಗಳ ಬಾಂಧವ್ಯ ಸುಧಾರಿಸಲು ಕಾರ್ನಿ ಪ್ರಮುಖ ಹೆಜ್ಜೆ ಇಟ್ಟಿದ್ದು, ಈ ವರ್ಷದ ಆರಂಭದಲ್ಲಿ ಅವರು ಭಾರತಕ್ಕೆ ನೀಡಿರುವ ಭೇಟಿಯು, 2018 ರ ನಂತರ ಕೆನಡಾ ಪ್ರಧಾನಿಯೊಬ್ಬರು ಕೈಗೊಂಡ ಮೊದಲ ಭಾರತ ಪ್ರವಾಸವಾಗಿದೆ(ಏಜೆನ್ಸೀಸ್​).