ಕಪಿಲ್ ಶರ್ಮ ಕೆಫೆ ಕೇಸ್​ 
ದೇಶ

"ಕಪಿಲ್​ ಶರ್ಮ ಕೊಲ್ಲುವುದೇ ಅವರ..." ಕೆನಡಾ ಕ್ಯಾಪ್ಸ್​ ಕೆಫೆ ಗುಂಡಿನ ದಾಳಿ ಕೇಸ್​! ಹೊರಬಿತ್ತು ಭಯಾನಕ ಸಂಗತಿ

ಪ್ರಮುಖ ಮುಖ್ಯಾಂಶಗಳು

  • ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್​ ಕೆಫೆಯ ಮೇಲೆ ಗುಂಡಿನ ದಾಳಿ
  • ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಿತ್ತು
  • ಬೇಡಿಕೆಯಿಟ್ಟ ಹಣ ಕೊಡದಿದ್ರೆ ಕೊಲ್ಲುವುದು ಉದ್ದೇಶವಾಗಿತ್ತು
Kapil Sharma Cafe: ಈ ವರ್ಷದ ಆಗಸ್ಟ್​ನಲ್ಲಿ ಕೆನಡಾದಲ್ಲಿರುವ ಬಾಲಿವುಡ್​ನ ಹಾಸ್ಯನಟ ಕಪಿಲ್ ಶರ್ಮಾ ಒಡೆತನದ ಕ್ಯಾಪ್ಸ್​ ಕೆಫೆಯ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಕೆಫೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಈ ದಾಳಿ ಸಂಭವಿಸಿದ್ದು ಕಪಿಲ್​ರನ್ನು ಭಾರೀ ಆತಂಕಕ್ಕೆ ದೂಡಿತು. ಒಂದಲ್ಲ, ಎರಡು ಬಾರಿ ಗುಂಡು ಹಾರಿಸಲಾಗಿದ್ದು, ಘಟನೆಯ ದೃಶ್ಯಗಳು ಸ್ಥಳೀಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಸಂಗತಿಯೊಂದು ಇದೀಗ ಹೊರಬಿದ್ದಿದೆ.
ಈ ಮೊದಲು ಹರ್ಜಿತ್ ಸಿಂಗ್ ಲಡ್ಡಿ ನೇತೃತ್ವದಲ್ಲಿ ಗುಂಡಿನ ದಾಳಿ ನಡೆದಿತ್ತು. ಆದರೆ, ನಂತರದ ದಾಳಿಯಲ್ಲಿ ಗುರ್‌ಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಹೆಸರಿನ ಎರಡು ಗ್ಯಾಂಗ್‌ಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ದೃಶ್ಯಗಳು ಹರಿದಾಡಿದ ಬೆನ್ನಲ್ಲೇ ಹೈಅಲರ್ಟ್​ ಆದ ದೆಹಲಿ ಖಾಕಿ ಪಡೆ, ಶುಕ್ರವಾರ (ನ.28) ಲುಧಿಯಾನ ಮೂಲದ ಗ್ಯಾಂಗ್​ಸ್ಟರ್​ ಬಂಧು ಮಾನ್​ ಸಿಂಗ್​ ಸೆಖೋನ್​ನನ್ನು​ ಬಂಧಿಸಿದೆ.
ಐಎಸ್‌ಐ ಹ್ಯಾರಿ ಚಾಥಾ ಮತ್ತು ಗುಂಡಿನ ದಾಳಿ ಹಿಂದಿರುವ ಮಾಸ್ಟರ್‌ಮೈಂಡ್ ಗೋಲ್ಡಿ ಧಿಲ್ಲೋನ್‌ರ ಬಲಗೈ ಬಂಟ ಸೆಖೋನ್, ತನ್ನ ಸುಳಿವು ಸಿಗದಂತೆ ರಹಸ್ಯ ಕಾಯ್ದುಕೊಳ್ಳಲು ಕೆನಡಾದಿಂದ ಪರಾರಿಯಾಗಿ ಭಾರತದಲ್ಲಿ ತಲೆಮರಿಸಿಕೊಂಡಿದ್ದ. ಇಬ್ಬರು ಶೂಟರ್‌ಗಳ ಜತೆಗೆ ಈತ ಕಾರಿನಲ್ಲಿ ಶಾಟ್‌ಗನ್ ಸವಾರಿ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆಯಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳ ಮೋಸ್ಟ್​ ವಾಂಟೆಡ್​ ಗ್ಯಾಂಗ್​ಸ್ಟರ್​ ಬಂಧು ಮಾನ್ ಸಿಂಗ್ ಸೆಖೋನ್​ನನ್ನು ದೆಹಲಿ ಅಪರಾಧ ವಿಭಾಗ ಬಂಧಿಸಿ, ವಿಚಾರಣೆ ನಡೆಸಿತು. ತನಿಖೆಯ ಸಮಯದಲ್ಲಿ, ತಾವು ಬೇಡಿಕೆಯಿಟ್ಟ ಹಣವನ್ನು ಕಪಿಲ್​ ಕೊಡದಿದ್ದರೆ ಆತನನ್ನು ಕೊಲ್ಲುವುದು ಗೋಲ್ಡಿ ಡಿಲ್ಲೋನ್​ ಗ್ಯಾಂಗ್​ನ ಸಂಚಾಗಿತ್ತು ಎಂದು ಸೆಖೋನ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ,(ಏಜೆನ್ಸೀಸ್).