Modi Popularity | ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ಫೋಟೋಗೆ ವಿದೇಶಿ ಪ್ರತಿನಿಧಿಗಳ ದುಂಬಾಲು 
ದೇಶ

ಕ್ಯಾನ್ ವಿ ಹ್ಯಾವ್ ಎ ಪಿಕ್ಚರ್ ಪ್ಲೀಸ್...? ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಜೊತೆ ಫೋಟೋಗೆ ವಿದೇಶಿ ಪ್ರತಿನಿಧಿಗಳ ದುಂಬಾಲು: ವಿಡಿಯೋ ವೈರಲ್​! | Modi Popularity

Modi Popularity: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ವಿದೇಶಿ ಪ್ರತಿನಿಧಿಗಳು ಗ್ರೂಪ್ ಫೋಟೋಗಾಗಿ ಅವರ ಸುತ್ತಲೂ ಜಮಾಯಿಸಿದಾಗ ಅತ್ಯಂತ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದರು. ಭಾರತ ಸರ್ಕಾರವು ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿದೇಶಿ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ತಮ್ಮೊಂದಿಗೆ ಫೋಟೋಗೆ ಪೋಸ್ ನೀಡುವಂತೆ ಕೋರುತ್ತಿರುವುದು ಕಂಡುಬಂದಿದೆ.
ಈ ವೇಳೆ ಒಬ್ಬ ಪ್ರತಿನಿಧಿ ನಾವು ಒಂದು ಫೋಟೋ ತೆಗೆದುಕೊಳ್ಳಬಹುದೇ..? ಎಂದು ಕೇಳಿದಾಗ, ಪ್ರಧಾನಿ ಮೋದಿ ಅವರು ಖಂಡಿತ ಎಂದು ಉತ್ತರಿಸಿದರು ಮತ್ತು ಅದೇ ಸಮಯದಲ್ಲಿ ಇತರರು ಪ್ಲೀಸ್​ ಪ್ರಧಾನಿ ಮೋದಿ ಅವರೇ ಎಂದು ವಿನಂತಿಸುತ್ತಿರುವುದನ್ನು ನಾವು ಕಾಣಬಹುದು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಝೆಶ್ಕಿಯನ್ ಅವರು, ಪ್ರಧಾನಿ ಮೋದಿ ಅವರ ಸುತ್ತಲೂ ಜಮಾಯಿಸುತ್ತಿದ್ದ ಪ್ರತಿನಿಧಿಗಳಿಗೆ ದಾರಿ ಮಾಡಿಕೊಡುತ್ತಿರುವುದು ಕಂಡುಬಂದಿದೆ. ಎಲ್ಲರೂ ಗ್ರೂಪ್ ಫೋಟೋಗೆ ಪೋಸ್ ನೀಡಲು ಸಿದ್ಧವಾಗುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಸ್ವಲ್ಪ ಸಮಯ ಕಾಯುವಂತೆ ಕೇಳಿಕೊಂಡರು. ನಂತರ ಪ್ರಧಾನಿಯವರು ಗುಂಪಿನಲ್ಲಿದ್ದ ಮಹಿಳೆಯರತ್ತ ನೋಡಿ, ನೀವು ಅದೃಷ್ಟವಂತರು, ಅನೇಕ ಮಹಿಳೆಯರಿದ್ದಾರೆ ಎಂದು ತಮಾಷೆಯಾಗಿ ಹೇಳಿದಾಗ ಈ ಸಂವಾದವು ಹಗುರವಾದ ತಿರುವು ಪಡೆಯಿತು.
ಅದಕ್ಕೆ ಅವರು ನಗುತ್ತಾ, ನಾವೆಲ್ಲರೂ ತುಂಬಾ ಅದೃಷ್ಟವಂತರು ಎಂದು ಉತ್ತರಿಸಿದರು. ಈ ಸಣ್ಣ ಸಂವಾದ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಅವರು ಧನ್ಯವಾದಗಳು ಎಂದು ಹೇಳಿದರು.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು, ಉದ್ಯಮ ಪ್ರತಿನಿಧಿಗಳು ಮತ್ತು ನಿಯೋಗಗಳನ್ನು ಒಟ್ಟುಗೂಡಿಸಿದ ಈ ಫೋರಂನ ಕಾರ್ಯಕ್ರಮಗಳ ನಡುವೆ ಈ ಕ್ಷಣವು ಒಂದು ಹಗುರವಾದ ವಾತಾವರಣವನ್ನು ಒದಗಿಸಿತು. ಶುಕ್ರವಾರ ಪ್ರಧಾನಿ ಮೋದಿ ಅವರು ಬ್ರಿಕ್ಸ್ ಬಿಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದರು ಹಾಗೂ ಪುಟಿನ್ ಮತ್ತು ಪೆಝೆಶ್ಕಿಯನ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಪ್ರಧಾನಿ ಮೋದಿ ಮಾತು

ಸಮುದ್ರ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳಿಗೆ ಎದುರಾಗುತ್ತಿರುವ ಅಡಚಣೆಗಳ ನಡುವೆ, ನೌಕಾಯಾನದ ಸ್ವಾತಂತ್ರ್ಯ ಹಾಗೂ ನಾವಿಕರ ಸುರಕ್ಷತೆಯು ಜಾಗತಿಕ ಅರ್ಥವ್ಯವಸ್ಥೆಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ವ್ಯಾಪಾರಕ್ಕೆ ಸುರಕ್ಷಿತ ಮತ್ತು ಚೇತರಿಕೆಯ ಸಾಮರ್ಥ್ಯವಿರುವ ಪೂರೈಕೆ ಸರಪಳಿಗಳು ಅತ್ಯಗತ್ಯ ಎಂದು ಹೇಳಿದರು. ಜೊತೆಗೆ ನೌಕಾಯಾನದ ಸ್ವಾತಂತ್ರ್ಯ ಮತ್ತು ನಾವಿಕರ ಭದ್ರತೆಗೆ ಭಾರತದ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು.

ನಾವಿಕರ ಸುರಕ್ಷತೆ ಕುರಿತು ಮೋದಿ-ಪುಟಿನ್ ಚರ್ಚೆ!

ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಾಜಕೀಯ, ಆರ್ಥಿಕ, ರಕ್ಷಣೆ, ಇಂಧನ, ಬಾಹ್ಯಾಕಾಶ, ಕೌಶಲ್ಯ ಚಲನಶೀಲತೆ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರದ ಪ್ರಗತಿಯನ್ನು ಪರಾಮರ್ಶಿಸಿದರು. ಉಭಯ ನಾಯಕರು ಪಶ್ಚಿಮ ಏಷ್ಯಾ ಮತ್ತು ಕಪ್ಪು ಸಮುದ್ರ ಪ್ರದೇಶದ ಸಂಘರ್ಷಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಈ ಸಂಘರ್ಷಗಳು ಸಮುದ್ರ ವ್ಯಾಪಾರ ಮತ್ತು ಭಾರತೀಯ ನಾವಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರಿವೆ.
ಬ್ರಿಕ್ಸ್ ಒಕ್ಕೂಟದ ದೇಶಗಳು ಈಗ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 50 ರಷ್ಟು, ಜಾಗತಿಕ ಜಿಡಿಪಿಯ ಶೇಕಡಾ 40 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇಕಡಾ 25 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದು, ಈ ಒಕ್ಕೂಟವು ಜಾಗತಿಕ ಅರ್ಥವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗುತ್ತಿದೆ ಎಂದು ಮೋದಿ ತಿಳಿಸಿದರು.
ಭಾರತ ಆಯೋಜಿಸಿರುವ ಈ ಬಿಸಿನೆಸ್ ಫೋರಂ ಇದುವರೆಗಿನ ಅತಿ ದೊಡ್ಡ ಬ್ರಿಕ್ಸ್ ಬಿಸಿನೆಸ್ ಫೋರಂ ಎಂದು ಬಣ್ಣಿಸಿದ ಮೋದಿ, ಒಕ್ಕೂಟದ ಬೆಳೆಯುತ್ತಿರುವ ಗಾತ್ರ ಮತ್ತು ಆರ್ಥಿಕ ಶಕ್ತಿಯು ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದರು. ಬ್ರಿಕ್ಸ್ ದೇಶಗಳ ನಡುವೆ ಹೆಚ್ಚಿನ ಹೂಡಿಕೆ, ಪ್ರತಿಭೆಗಳ ವಿನಿಮಯ ಮತ್ತು ಬಲವಾದ ವ್ಯಾಪಾರ ಪಾಲುದಾರಿಕೆಗೆ ಕರೆ ನೀಡಿದ ಅವರು, ಒಕ್ಕೂಟದ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನು ಪ್ರಾಯೋಗಿಕ ಜಾಗತಿಕ ಪರಿಹಾರಗಳಾಗಿ ಪರಿವರ್ತಿಸುವಂತೆ ಉದ್ಯಮ ರಂಗಕ್ಕೆ ಮನವಿ ಮಾಡಿದರು(ಏಜೆನ್ಸೀಸ್​).