Sonia Gandhi Memoir > ಕಷ್ಟದ ದಿನಗಳನ್ನು ನೆನೆದು ಭಾವುಕರಾದ ರಾಹುಲ್-ಪ್ರಿಯಾಂಕಾ!
1991 ರಲ್ಲಿ ತಂದೆ ರಾಜೀವ್ ಗಾಂಧಿ ಅವರ ಅಗಲಿಕೆಯ ನಂತರ, ತಾಯಿ ಸೋನಿಯಾ ಗಾಂಧಿ ಅವರು ಪ್ರತಿಯೊಂದು ಕಷ್ಟವನ್ನೂ ಅತ್ಯಂತ ಧೈರ್ಯ ಮತ್ತು ಗೌರವದಿಂದ ಎದುರಿಸಿದ್ದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಮರಿಸಿದ್ದಾರೆ.
ರಾಜೀವ್ ಗಾಂಧಿ ಅವರ 82ನೇ ಜನ್ಮದಿನಾಚರಣೆಯಂದು ಗೌರವ ಸಲ್ಲಿಸಿದ ರಾಹುಲ್ ಗಾಂಧಿ, ನವೆಂಬರ್ 10 ರಂದು ಬಿಡುಗಡೆಯಾಗಲಿರುವ ಸೋನಿಯಾ ಗಾಂಧಿ ಅವರ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ಆತ್ಮಕಥೆಯನ್ನು ಅವರನ್ನು ಪ್ರೀತಿಸುವ ಲಕ್ಷಾಂತರ ಜನರು ಶೀಘ್ರದಲ್ಲೇ ಓದಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ತಮ್ಮ 79 ವರ್ಷದ ತಾಯಿಯನ್ನು ಮಾಮಾ ಎಂದು ಸಂಬೋಧಿಸಿದ್ದಾರೆ ಹಾಗೂ 35 ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ತಮ್ಮ ತಂದೆ-ತಾಯಿಯನ್ನು ಒಟ್ಟಿಗೆ ಕೊನೆಯ ಬಾರಿಗೆ ನೋಡಿದ್ದನ್ನು ನೆನಪಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್ ಹೀಗಿದೆ!
ತಂದೆ ತೀರಿಕೊಂಡ ದಿನದಿಂದ, ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವನ್ನೂ ನೀವು ಅಸಾಧಾರಣ ಧೈರ್ಯ ಮತ್ತು ಗೌರವದಿಂದ ಎದುರಿಸಿದ್ದನ್ನು ನಾನು ನೋಡಿದ್ದೇನೆ. ತಂದೆಯ ಅಗಲಿಕೆಯ ನಂತರ ನಿಮ್ಮ ಜೀವನ ಎಷ್ಟು ಕಷ್ಟಕರವಾಗಿತ್ತು ಮತ್ತು ನೀವು ಎಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೀರಿ ಎಂಬುದು ನಿಜವಾಗಿಯೂ ನನಗೂ ಮತ್ತು ಪ್ರಿಯಾಂಕಾಗೆ ಮಾತ್ರ ಗೊತ್ತು.
ತಮ್ಮ ತಾಯಿಯಂತೆ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿಡಲು ಇಷ್ಟಪಡುವ ವ್ಯಕ್ತಿಯೊಬ್ಬರು ತಮ್ಮ ಜೀವನದ ಕಥೆಯನ್ನು ಪ್ರಪಂಚಕ್ಕೆ ತಿಳಿಸುವುದು ಎಷ್ಟು ಕಷ್ಟ ಎಂಬುದು ತಮಗೆ ತಿಳಿದಿದೆ ಎಂದಿರುವ ರಾಹುಲ್, ಸೋನಿಯಾ ಗಾಂಧಿ ಅವರ ಜೀವನದ ಕಥೆಯನ್ನು ಅವರನ್ನು ಪ್ರೀತಿಸುವ ಲಕ್ಷಾಂತರ ಜನರು ಕೊನೆಗೂ ಓದುತ್ತಾರೆ ಎಂಬುದು ತುಂಬಾ ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದಿದ್ದಾರೆ. ಇಂದು ತಂದೆಯವರ ಜನ್ಮದಿನದಂದು, ಅವರು ಮೇಲಿಂದ ಮುಗುಳ್ನಗುತ್ತಾ ತಮ್ಮ ಸುಂದರ ಸೋನಿಯಾರನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂಬುದನ್ನು ನಾನು ಭಾವಿಸಬಲ್ಲೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.
1984 ರಿಂದ 1989 ರವರೆಗೆ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು 1994 ಆಗಸ್ಟ್ 20 ರಂದು ಜನಿಸಿದರು. ರಾಹುಲ್ ಗಾಂಧಿಗೆ 20 ವರ್ಷ ವಯಸ್ಸಿದ್ದಾಗ, ಅಂದರೆ 1991ರಲ್ಲಿ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಇ ಆತ್ಮಹುತಿ ಬಾಂಬ್ ದಾಳಿಯ ಮೂಲಕ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು.
ಸೋನಿಯಾ ಗಾಂಧಿ ಬಗ್ಗೆ ಪ್ರಿಯಾಂಕಾ ಮಾತು!
ರಾಜೀವ್ ಗಾಂಧಿ ಅವರ ಜನ್ಮದಿನದಂದು ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಸೋನಿಯಾ ಗಾಂಧಿ ಅವರಿಗೆ ಶುಭಕೋರಿದ್ದಾರೆ. ತಮ್ಮ ಜೀವನದ ಕಥೆಯನ್ನು ಇಷ್ಟೊಂದು ಸತ್ಯ ಮತ್ತು ಹೃದಯಸ್ಪರ್ಶಿಯಾಗಿ ಬರೆದಿರುವುದನ್ನು ನೋಡಿ ತಂದೆಯವರಿಗೆ ಖಂಡಿತ ಹೆಮ್ಮೆಯಾಗುತ್ತಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ತಮ್ಮ ತಂದೆ-ತಾಯಿಯ ಸಂಬಂಧವನ್ನು ಈ ಕಾಲದ ಅತ್ಯಂತ ಶ್ರೇಷ್ಠ ಪ್ರೇಮಕಥೆಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಆ ಪ್ರೀತಿಯನ್ನು ಕಣ್ಣಾರೆ ನೋಡಲು ಅವಕಾಶ ಸಿಕ್ಕಿದ್ದಕ್ಕೆ ತಾವು ಧನ್ಯರು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಕಥೆಯು ಓದುಗರಿಗೆ ಅವರನ್ನು ಕೇವಲ ರಾಜಕೀಯ ಅಥವಾ ಸಾರ್ವಜನಿಕ ನಾಯಕಿಯಾಗಿ ಮಾತ್ರವಲ್ಲದೆ, ಒಬ್ಬ ಧೈರ್ಯಶಾಲಿ, ನಂಬಿಕಸ್ಥ ಮತ್ತು ಕರುಣಾಮಯಿ ಮಹಿಳೆಯಾಗಿ ಪರಿಚಯಿಸುತ್ತದೆ. ಅಷ್ಟೇ ಅಲ್ಲ, ಅಗತ್ಯಬಿದ್ದಾಗ ಅವರು ತುಂಬಾ ಖಡಕ್ ಆಗಿರುತ್ತಾರೆ ಮತ್ತು ಇಷ್ಟವಾದಾಗ ತಮಾಷೆ ಮಾಡುವ ವ್ಯಕ್ತಿ ಎಂಬುದು ಈ ಪುಸ್ತಕದಿಂದ ತಿಳಿದುಬರುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಲವ್ ಯು ಮಾ, ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಬರೆಯುವ ಮೂಲಕ ತಮ್ಮ ಪೋಸ್ಟ್ ಅನ್ನು ಮುಗಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (Belonging: A Journey of Love) ನವೆಂಬರ್ 10 ರಂದು ಬಿಡುಗಡೆಯಾಗಲಿದೆ ಎಂದು ಆಲ್ಫ್ರೆಡ್ ಎ ನಾಫ್ ಪ್ರಕಾಶನ ಸಂಸ್ಥೆ ಮಂಗಳವಾರ ತಿಳಿಸಿದೆ. ಆದರೆ, ಭಾರತದಲ್ಲಿ ಈ ಪುಸ್ತಕ ಎಂದು ಬಿಡುಗಡೆಯಾಗಲಿದೆ ಎಂಬುದನ್ನು ಪೆಂಗ್ವಿನ್ ರೇಂಡಮ್ ಹೌಸ್ ಇಂಡಿಯಾ ಇನ್ನು ಸ್ಪಷ್ಟಪಡಿಸಿಲ್ಲ.
ಈ ಪುಸ್ತಕದಲ್ಲಿ ಅವರು ಎರಡನೇ ಮಹಾಯುದ್ಧದ ನಂತರದ ಇಟಲಿಯಿಂದ ಹಿಡಿದು, ರಾಜೀವ್ ಗಾಂಧಿ ಅವರನ್ನು ಮದುವೆಯಾಗಿ ಭಾರತದ ಪ್ರಭಾವಿ ರಾಜಕೀಯ ಕುಟುಂಬವನ್ನು ಸೇರುವವರೆಗಿನ ತಮ್ಮ ಜೀವನದ ಪಯಣವನ್ನು ಹಂಚಿಕೊಂಡಿದ್ದಾರೆ. ರಾಜೀವ್ ಗಾಂಧಿ ಹತ್ಯೆಯ ನಂತರ ತಮ್ಮನ್ನು ರಾಜಕೀಯಕ್ಕೆ ತಂದ ವೈಯಕ್ತಿಕ ದುಃಖಗಳು ಹಾಗೂ 2004 ರಲ್ಲಿ ಪ್ರಧಾನಿ ಹುದ್ದೆಯನ್ನು ಬೇಡವೆಂದು ತಿರಸ್ಕರಿಸಿದ ನಿರ್ಧಾರದ ಬಗ್ಗೆಯೂ ಇದರಲ್ಲಿ ಬರೆದಿದ್ದಾರೆ.
ಅಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಅನುಭವ, ತಾವು ಹಿಂದಿ ಭಾಷೆ ಕಲಿತು ಭಾರತದ ಜೀವನ ಶೈಲಿಗೆ ಹೊಂದಿಕೊಂಡದ್ದು ಮತ್ತು ಸಂಜಯ್ ಗಾಂಧಿ ಸಾವು ಸೇರಿದಂತೆ ಕುಟುಂಬದಲ್ಲಾದ ದುರಂತಗಳ ಕುರಿತೂ ಸೋನಿಯಾ ಗಾಂಧಿ ಬೆಳಕು ಚೆಲ್ಲಿದ್ದಾರೆ. ಈ ಆತ್ಮಕಥೆಯನ್ನು ಬರೆಯುವುದು ತಮಗೆ ತುಂಬಾ ಕಷ್ಟಕರವಾಗಿತ್ತು ಎಂದಿರುವ ಸೋನಿಯಾ ಗಾಂಧಿ, ಇದು ತಮ್ಮ ಮನಸ್ಸಿನಾಳದಲ್ಲಿದ್ದ ಅನುಭವಗಳನ್ನು ತೆರೆದಿಡುವ ಮತ್ತು ಹಂಚಿಕೊಳ್ಳುವ ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ(ಏಜೆನ್ಸೀಸ್).