Supreme Court | ಸುಪ್ರೀಂ ಕೋರ್ಟ್ (ಪಿಟಿಐ)
ದೆಹಲಿ: ಅಕ್ರಮ ವಲಸಿಗರು ಆಧಾರ್ ಕಾರ್ಡ್ ಪಡೆಯುತ್ತಿರುವ ಬಗ್ಗೆ ಗುರುವಾರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇಂತಹ ವಿದೇಶಿಯರಿಗೆ ಚುನಾವಣೆಯ ಸಮಯದಲ್ಲಿ ಮತ ಚಲಾಯಿಸಲು ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಹೇಳಿಕೆ ನೀಡಿದ್ದು, ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪುನರುಚ್ಛರಿಸಿದೆ.
ಆಧಾರ್ ಎನ್ನುವುದು ಪ್ರಯೋಜನಗಳನ್ನು ಪಡೆಯಲು ಪರಿಚಯಿಸಲಾಗಿದ್ದು, ನೆರೆಯ ದೇಶಗಳಿಂದ ಬಂದ ವ್ಯಕ್ತಿಗಳು ಇಲ್ಲಿ ರಿಕ್ಷಾ ಚಾಲಕರಾಗಿ, ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಪಡಿತರಕ್ಕಾಗಿ ಆಧಾರ್ ನೀಡಲಾಗಿದೆ ಎಂಬ ಕಾರಣಕ್ಕೆ, ಅವರನ್ನು ಮತದಾರರನ್ನಾಗಿ ಮಾಡಬೇಕೇ? ಎಂದು ಪ್ರಶ್ನಿಸಿದೆ.
ಚುನಾವಣಾ ಆಯೋಗವು ಅಂಚೆ ಕಚೇರಿಯಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದ್ದು. ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಸಂವಿಧಾನದ ಯೋಜನೆಯಡಿಯಲ್ಲಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಮಾತ್ರ ಮೀಸಲಾಗಿರುವ ಶಾಸಕಾಂಗ ಚಟುವಟಿಕೆಯನ್ನು ಆಯೋಗ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಡಿಸೆಂಬರ್ 2 ರಂದು ಪ್ರಕರಣದ ವಿಚಾರಣೆ ನಡೆಸಲಿರುವ ನ್ಯಾಯಾಲಯವು, ಕೇಂದ್ರ ಚುನಾವಣಾ ಆಯೋಗದ ವರದಿಯನ್ನು ಕೋರಿದೆ. ಬಿಹಾರದಲ್ಲಿನ ಎಸ್‌ಐಆರ್ ಯಶಸ್ಸಿನ ಬಳಿಕ, ಈಗ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಗೋವಾ, ಗುಜರಾತ್, ಪುದುಚೇರಿ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ(ಏಜೆನ್ಸೀಸ್).