Abhishek Banerjee | 1990ರ ರಕ್ತಸಿಕ್ತ ರಾಜಕಾರಣದ ಇತಿಹಾಸ ನೆನಪಿಸಿದ ಸೋನಾರ್‌ಪುರ ಘಟನೆ!
Abhishek Banerjee: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ರಾಜಕೀಯ ಹಿಂಸಾಚಾರ ಮತ್ತು ವೈಯಕ್ತಿಕ ದಾಳಿಗಳನ್ನು ರಾಜಕೀಯ ಬಂಡವಾಳವಾಗಿ ಪರಿವರ್ತಿಸುವುದು ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಹಳೆಯ ತಂತ್ರಗಾರಿಕೆ. 1990ರ ಆಗಸ್ಟ್ 16 ರಂದು ಕೋಲ್ಕತಾದ ಬೀದಿಯಲ್ಲಿ ಕಾಂಗ್ರೆಸ್ ಯುವ ನಾಯಕಿಯಾಗಿದ್ದ ದೀದಿ ಮೇಲೆ ಭೀಕರ ಹಲ್ಲೆ ನಡೆದಿತ್ತು. ಅಂದು ಸಾವು-ಬದುಕಿನ ನಡುವೆ ಹೋರಾಡಿದ್ದ ಮಮತಾ, ತಲೆಗೆ ಬೀಳಲಿದ್ದ ಮಾರಣಾಂತಿಕ ಪೆಟ್ಟನ್ನು ಕೈಯೊಡ್ಡಿ ತಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಆ ಒಂದು ಘಟನೆ ಮಮತಾರನ್ನು ಬಂಗಾಳದ ಅದ್ವಿತೀಯ ಸ್ಟ್ರೀಟ್ ಫೈಟರ್ ಆಗಿ ರೂಪಿಸಿ, ಜನಸಾಮಾನ್ಯರ ಮನದಲ್ಲಿ ದೀದಿ ಎಂಬ ಹೆಸರನ್ನು ಶಾಶ್ವತವಾಗಿ ಕೆತ್ತಿತು. ಅದಾದ ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವೆಯೂ ಆದ ಅವರು, 1998ರಲ್ಲಿ ಟಿಎಂಸಿ ಪಕ್ಷ ಕಟ್ಟಿ ಬಂಗಾಳದ ಗದ್ದುಗೆ ಏರಿದ್ದು ಈಗ ಇತಿಹಾಸ. ಆದರೆ, ಇಂದಿನ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನಿಂದಾಗಿ ಟಿಎಂಸಿ ಪಕ್ಷ ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಮಮತಾ ಸೋದರ ಅಳಿಯ ಹಾಗೂ ಪಕ್ಷದ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತ ನೀಡಿದೆ.
ಎಲ್ಲಾ ಮೊದಲಿನಂತಿಲ್ಲ....
ಸೋನಾರ್‌ಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು, ಮೊಟ್ಟೆಗಳಿಂದ ದಾಳಿ ನಡೆಸಿ, ಮುಖಕ್ಕೆ ಹೊಡೆಯಲಾದ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಅಂದು ಮೂರು ವರ್ಷದ ಮಗುವಾಗಿದ್ದಾಗ ತನ್ನ ಸೋದರ ಅತ್ತೆ ಅನುಭವಿಸಿದ ಘೋರ ಪರಿಸ್ಥಿತಿಯಿಂದ ಅಳಿಯನನ್ನು ಇಂದು ಕೇವಲ ಒಂದು ಹೆಲ್ಮೆಟ್ ರಕ್ಷಿಸಿದೆ ಎನ್ನಬಹುದು. ಆದರೆ, 1990ರಲ್ಲಿ ಮಮತಾ ಬ್ಯಾನರ್ಜಿ ಅಂದಿನ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಹೋರಾಡುವ ಬಂಡಾಯ ನಾಯಕಿಯಾಗಿದ್ದರು. ಆದರೆ ಇಂದು, 15 ವರ್ಷಗಳ ಕಾಲ ಸತತವಾಗಿ ಅಧಿಕಾರ ನಡೆಸಿದ ನಂತರ ದೀದಿ ಆಡಳಿತ ವಿರೋಧಿ ಅಲೆಯ ನಡುವೆ ನಿಂತಿದ್ದಾರೆ.
ಭ್ರಷ್ಟಾಚಾರದ ಆರೋಪಗಳು, ಓಲೈಕೆ ರಾಜಕಾರಣದ ಅಪವಾದಗಳು ಮತ್ತು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ-ಕೊಲೆ ಪ್ರಕರಣದ ಆಕ್ರೋಶದ ನಡುವೆ ಬಂಗಾಳದ ಮತದಾರರು ಟಿಎಂಸಿ ವಿರುದ್ಧ ಭ್ರಮನಿರಸನಗೊಂಡಿರುವುದು ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ, ಅಂದು ಮಮತಾ ಬ್ಯಾನರ್ಜಿಗೆ ಸಿಕ್ಕ ಅನುಕಂಪ ಮತ್ತು ರಾಜಕೀಯ ಲಾಭ ಇಂದು ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಯಿಂದ ಟಿಎಂಸಿಗೆ ಸಿಗುತ್ತದೆಯೇ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ.
ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ ರಾಹುಲ್ ಗಾಂಧಿ...
ಈ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಮಮತಾ ಬ್ಯಾನರ್ಜಿ ಧಾಟಿ ಎಂದಿನಂತೆ ಆಕ್ರಮಣಕಾರಿಯಾಗಿದೆ. ಗಾಯಗೊಂಡಿರುವ ಅಭಿಷೇಕ್ ಬ್ಯಾನರ್ಜಿ ಅವರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಆಸ್ಪತ್ರೆಗೆ ದಾಖಲಿಸುವ ದೃಶ್ಯಗಳು ಮುನ್ನೆಲೆಗೆ ಬಂದಾಗ, ಬಿಜೆಪಿ ನಾಯಕರು ವೈದ್ಯರ ಮೇಲೆ ಒತ್ತಡ ಹೇರಿ ಅಭಿಷೇಕ್ ಅವರನ್ನು ಡಿಸ್ಚಾರ್ಜ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಮತಾ ಗಂಭೀರ ಆರೋಪ ಮಾಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಈ ಸಂಕಷ್ಟದ ಸಮಯದಲ್ಲಿ ಮಮತಾ ಬ್ಯಾನರ್ಜಿಗೆ ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಂದ ಅನಿರೀಕ್ಷಿತ ಬೆಂಬಲ ಹರಿದುಬಂದಿದೆ.
ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನೇ ನುಂಗಿ ಟಿಎಂಸಿ ಬಲಿಷ್ಠವಾಗಿ ಬೆಳೆದಿದ್ದರಿಂದ, ಮಮತಾ ಇದುವರೆಗೆ ಕಾಂಗ್ರೆಸ್‌ಗೆ ಬಂಗಾಳದಲ್ಲಿ ಜಾಗ ನೀಡಲು ನಿರಾಕರಿಸಿದ್ದರು. ಆದರೆ ಇಂದು ಟಿಎಂಸಿ ತೀವ್ರ ಸಂಕಷ್ಟದಲ್ಲಿರುವಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ದಾಳಿಯನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ವೈಯಕ್ತಿಕವಾಗಿ ದೀದಿಗೆ ಕರೆ ಮಾಡಿ ಅಭಿಷೇಕ್ ಆರೋಗ್ಯ ವಿಚಾರಿಸಿ, ಅಗತ್ಯಬಿದ್ದರೆ ಹೈದರಾಬಾದ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.
ರಾಹುಲ್ ಗಾಂಧಿ ಅಷ್ಟೆ ಅಲ್ಲದೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಕಪಿಲ್ ಸಿಬಲ್ ಅವರಂತಹ ಘಟಾನುಘಟಿ ನಾಯಕರು ಮಮತಾ ಮತ್ತು ಅಭಿಷೇಕ್ ಪರವಾಗಿ ಧ್ವನಿ ಎತ್ತಿದ್ದಾರೆ. ಚುನಾವಣೆ ಮುಗಿದ ತಕ್ಷಣವೇ ಕೋಲ್ಕತಾಕ್ಕೆ ಧಾವಿಸಿದ್ದ ಅಖಿಲೇಶ್ ಯಾದವ್, ದೀದಿ ನೀವು ಸೋತಿಲ್ಲ, ಅತ್ಯುತ್ತಮವಾಗಿ ಹೋರಾಡಿದ್ದೀರಿ ಎಂದು ಧೈರ್ಯ ತುಂಬಿದ್ದರು.
ಇತ್ತೀಚಿನ ವಿಧಾನಸಭಾ ಚುನಾವಣೆಯು ಬಂಗಾಳದಲ್ಲಿ ಕೇವಲ ಟಿಎಂಸಿ ಮತ್ತು ಬಿಜೆಪಿಯ ಹೋರಾಟವಾಗಿರದೆ, ಕೇಂದ್ರದ ವಿರುದ್ಧ ಇಡೀ ವಿರೋಧ ಪಕ್ಷಗಳ ಒಕ್ಕೂಟದ ಭವಿಷ್ಯದ ಹೋರಾಟವಾಗಿತ್ತು. ಚುನಾವಣೆಯಲ್ಲಿ ಜಯಗಳಿಸಿದ್ದರೆ ಮಮತಾ ಬ್ಯಾನರ್ಜಿ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಬಹುದಿತ್ತು, ಆದರೆ ಸೋಲು ಅವರ ಪ್ರಭಾವವನ್ನು ಸ್ವಲ್ಪ ಕುಗ್ಗಿಸಿದೆ.
ಲೋಕಸಭೆಯಲ್ಲಿ ಬಲಿಷ್ಠ ಸಂಖ್ಯಾಬಲ ಹೊಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರ ರಾಜಕಾರಣದಲ್ಲಿ ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಒಟ್ಟಾರೆಯಾಗಿ, ಅಭಿಷೇಕ್ ಬ್ಯಾನರ್ಜಿ ಮೇಲಿನ ಈ ದಾಳಿಯ ಸುತ್ತ ಮೂಡಿರುವ ವಿರೋಧ ಪಕ್ಷಗಳ ಒಗ್ಗಟ್ಟು ಕೇವಲ ತಾತ್ಕಾಲಿಕ ರಾಜಕೀಯ ತಂತ್ರವೇ ಅಥವಾ ಭವಿಷ್ಯದ ಸುದೀರ್ಘ ಮೈತ್ರಿಗೆ ಮುನ್ನುಡಿಯೇ ಎಂಬ ಪ್ರಶ್ನೆ ಎದ್ದಿದೆ. ಈ ಘಟನೆಯಿಂದ ಸಿಗುವ ಸಾರ್ವಜನಿಕ ಅನುಕಂಪ ಟಿಎಂಸಿ ಪಕ್ಷದ ಮರುಜೀವಕ್ಕೆ ಕಾರಣವಾಗುತ್ತದೆಯೇ ಎಂಬುದರ ಮೇಲೆಯೇ ಸದ್ಯ ಪಶ್ಚಿಮ ಬಂಗಾಳ ಹಾಗೂ ದೇಶದ ರಾಜಕೀಯದ ಮುಂದಿನ ರೋಮಾಂಚಕ ಅಧ್ಯಾಯ ನಿರ್ಧಾರವಾಗಲಿದೆ(ಏಜೆನ್ಸೀಸ್).