ರಕ್ಷಣಾ ಕಾರ್ಯಾಚರಣೆ 
ದೇಶ

ಕಾಶ್ಮೀರದಲ್ಲಿ ಹಠಾತ್ ಕೇಬಲ್ ಕಾರು ಸ್ಥಗಿತ; ಕ್ಯಾಬಿನ್​ಗಳಲ್ಲೇ ಸಿಲುಕಿಕೊಂಡ 300ಕ್ಕೂ ಹೆಚ್ಚು ಪ್ರವಾಸಿಗರು: ರಕ್ಷಣಾ ಕಾರ್ಯಾಚರಣೆ | Cable car

ಶ್ರೀನಗರ: ಜಮ್ಮು-ಕಾಶ್ಮೀರದ ಗುಲ್ಮಾರ್ಗ್​ದಲ್ಲಿ ತಾಂತ್ರಿಕ ದೋಷದಿಂದ ಹಠಾತ್ ಕೇಬಲ್ ಕಾರು(Cable car) ಸೇವೆ ಸ್ಥಗಿತಗೊಂಡಿದ್ದು, ಕ್ಯಾಬಿನ್​ಗಳಲ್ಲೇ 300ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು, ಭಾರತೀಯ ಸೇನೆ ಮತ್ತು ಎಸ್‌ಡಿಆರ್‌ಎಫ್ ತಂಡಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ಸ್ಥಳಾಂತರಿಸುತ್ತಿವೆ ಎಂದು ಸೋಮವಾರ(ಮೇ 25) ವರದಿಯಾಗಿದೆ.
ಏಷ್ಯಾದ ಅತಿ ಉದ್ದದ ಮತ್ತು ವಿಶ್ವದ ಅತಿ ಎತ್ತರದ ಕೇಬಲ್ ಕಾರ್ ವ್ಯವಸ್ಥೆಗಳಲ್ಲಿ ಒಂದಾದ ಗುಲ್ಮಾರ್ಗ್​ ಕೇಬಲ್ ಕಾರ್ ಸೇವೆಯ ಹಲವಾರು ಕ್ಯಾಬಿನ್‌ಗಳು ತಾಂತ್ರಿಕ ದೋಷದಿಂದ ಹಠಾತ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು, ಸುಮಾರು 300 ಪ್ರವಾಸಿಗರು ಆಕಾಶದಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ.
ಸುಮಾರು 2,650 ರಿಂದ 3,050 ಮೀಟರ್ ಎತ್ತರದ ನಡುವೆ ಸುಮಾರು 65 ಗೊಂಡೊಲಾ ಕ್ಯಾಬಿನ್‌ಗಳು ಸಿಲುಕಿಕೊಂಡಿವೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಸ್ಥಳೀಯ ನಾಗರಿಕ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಇನ್ನೂ ಕಡಿದಾದ ಮತ್ತು ಕಲ್ಲಿನ ಪರ್ವತ ಇಳಿಜಾರುಗಳಲ್ಲಿ ಸಿಲುಕಿಕೊಂಡಿರುವ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರಯಾಣಿಕರನ್ನು ರಕ್ಷಣೆ ಮಾಡಲು ಎಚ್ಚರಿಕೆಯಿಂದ ಸಹಾಯ ಮಾಡಲು ತುರ್ತು ತಂಡಗಳು ಸಹಾಯ ಮಾಡ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆರಂಭಿಕ ಹಂತದಲ್ಲಿ 16 ಕ್ಯಾಬಿನ್‌ಗಳಿಂದ ಕನಿಷ್ಠ 80 ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ಕ್ಯಾಬಿನ್‌ಗಳನ್ನು ಸ್ಥಳಾಂತರಿಸುವ ಪ್ರಯತ್ನಗಳು ಮುಂದುವರೆದಿವೆ. ತಂಗ್‌ಮಾರ್ಗ್‌ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ, ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ ಸರ್ಕಾರವು ಗುಲ್ಮಾರ್ಗ್ ಗೊಂಡೋಲಾದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಲ್ಲಾ ಕ್ಯಾಬಿನ್‌ಗಳು ಹಾಗೆಯೇ ಉಳಿದಿವೆ. ಮತ್ತು ಸಿಲುಕಿರುವ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತರಬೇತಿ ಪಡೆದ ತಂಡಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಮತ್ತು ಭಯಭೀತರಾಗಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).