ಕುಡಿದು ಪ್ರಜ್ಞೆ ತಪ್ಪಿದ್ದ ಯುವತಿಯನ್ನು ಮನೆ ತಲುಪಿಸಿದ ಕ್ಯಾಬ್ ಚಾಲಕ
- ಕುಡಿದು ಪ್ರಜ್ಞೆ ತಪ್ಪಿದ್ದ ಯುವತಿಯನ್ನು ಮನೆ ತಲುಪಿಸಿದ ಕ್ಯಾಬ್ ಚಾಲಕ
- ಯುವತಿಯ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ ಡ್ರೈವರ್
- ಕ್ಯಾಬ್ ಚಾಲಕ ಮಾನವೀಯತೆಗೆ ನೆಟ್ಟಿಗರಿಂದ ಶ್ಲಾಘನೆ
Cab driver humanity: ನೀನು ಚಿಂತಿಸಬೇಡ... ನಿನ್ನನ್ನು ಸುರಕ್ಷಿತವಾಗಿ ಮನೆಗೆ ಜವಾಬ್ದಾರಿ ನನ್ನದು... ಎಂದು ಆ ಕ್ಯಾಬ್ ಚಾಲಕ ಹೇಳಿದ ಈ ಮಾತು, ಸಂಕಷ್ಟದಲ್ಲಿದ್ದ ಯುವತಿಗೆ ಧೈರ್ಯ ನೀಡಿದ್ದಷ್ಟೇ ಅಲ್ಲ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ಯುವತಿ ಹಾಗೂ ಆಕೆಯ ಸ್ನೇಹಿತ ಕ್ಯಾಬ್ ಮಾಡಿದ್ದರು. ಪ್ರಯಾಣದ ಮಧ್ಯದಲ್ಲಿ ಯುವತಿಯ ಸ್ನೇಹಿತ ಕಾರಿನಿಂದ ಇಳಿದು ಹೋದ ಬಳಿಕ, ಯುವತಿ ಒಬ್ಬಳೇ ಕ್ಯಾಬ್‌ನಲ್ಲಿ ಉಳಿದಿದ್ದಳು. ಆಕೆ ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ಸರಿಯಾಗಿ ಮಾತನಾಡಲೂ ಆಗದ ಪರಿಸ್ಥಿತಿಯಲ್ಲಿದ್ದಳು ಎನ್ನಲಾಗಿದೆ.
ಯುವತಿಗೆ ಧೈರ್ಯ ತುಂಬಿದ ಡ್ರೈವರ್
ಈ ವೇಳೆ ಚಾಲಕ ಕ್ಯಾಬ್ ಚಾಲಕ ಮುನ್ನಾ ಅಜೀಜ್ ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಕೆಗೆ ಧೈರ್ಯ ತುಂಬಿದ್ದಾರೆ. ತಾನು ಸುರಕ್ಷಿತವಾಗಿ ಮನೆ ಸೇರುವವರೆಗೂ ಚಾಲಕ ತನ್ನ ಜೊತೆಗಿರುತ್ತಾರೆ ಎಂಬ ಭರವಸೆ ನೀಡಿದ್ದಾರೆ. ಯುವತಿಯ ಸುರಕ್ಷತೆ ಕುರಿತು ಯಾವುದೇ ಅನುಮಾನ ಉಂಟಾಗಬಾರದು ಎಂಬ ಕಾರಣಕ್ಕೆ ಮುನ್ನಾ ಕಾರಿನ ಡ್ಯಾಶ್‌ಕ್ಯಾಮ್ ಆನ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ಯುವತಿಯ ತಾಯಿಗೆ ಕರೆ ಮಾಡಿದ ಚಾಲಕ
ಅಲ್ಲಿಗೇ ಸುಮ್ಮನಾಗದ ಚಾಲಕ ಯುವತಿಯ ತಾಯಿಗೆ ಕರೆ ಮಾಡಿ, ಮಗಳು ತಮ್ಮ ಕ್ಯಾಬ್‌ನಲ್ಲಿದ್ದು ಸುರಕ್ಷಿತವಾಗಿ ಮನೆಗೆ ಕರೆತರುತ್ತಿರುವುದಾಗಿ ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ಗೆ ತಲುಪಿಸಿದ ಬಳಿಕವೂ, ಯುವತಿ ಮನೆಯೊಳಗೆ ಸೇರುವವರೆಗೂ ಕಾದು ನಿಂತು ನಂತರವೇ ಅಲ್ಲಿಂದ ತೆರಳಿದ್ದಾರೆ.
ಟಿಇಟಿ ಪಾಸಾದರೂ ಕ್ಯಾಬ್ ಡ್ರೈವಿಂಗ್
ಮುನ್ನಾ ಅವರ ಹಿನ್ನೆಲೆಯೂ ಗಮನ ಸೆಳೆದಿದೆ. TET ಪಾಸಾಗಿದ್ದರೂ ಉದ್ಯೋಗ ಸಿಗದ ಕಾರಣ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ ಏನೇ ಇರಲಿ, ಸಂಕಷ್ಟದಲ್ಲಿದ್ದ ಯುವತಿಯ ಸುರಕ್ಷವಾಗಿ ಮನೆ ತಲುಪಿಸಿದ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಾವು ಮಾಡುವುವ ಕೆಲಸಕ್ಕಿಂತ ಮಾನವೀಯತೆಗೆ ದೊಡ್ಡದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾರಿದೆ.