Amarinder Singh | ಕ್ಯಾಪ್ಟನ್ ವಾಪಸಾದರೆ ಕಾಂಗ್ರೆಸ್ಗೇನು ಲಾಭ..?
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) 2021 ರಲ್ಲಿ ಕಾಂಗ್ರೆಸ್ ಹೈಕಮಾಂಡ್‌ನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷವನ್ನು ತೊರೆದಿದ್ದರು. ತದನಂತರ ಅವರು ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರಾದರೂ, 2022 ರ ಪಂಜಾಬ್ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದ ಕಾರಣ ತಮ್ಮ ಪಕ್ಷವನ್ನು ಭಾರತೀಯ ಜನತಾ ಪಕ್ಷದೊಂದಿಗೆ ವಿಲೀನಗೊಳಿಸಿದರು.
ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ, ಈ ಹಿರಿಯ ನಾಯಕ ಮತ್ತೆ ಕಾಂಗ್ರೆಸ್ ಮನೆ ಬಾಗಿಲಿಗೆ ಮರಳಲಿದ್ದಾರೆ ಎಂಬ ಊಹಾಪೋಹಗಳು ಮತ್ತೊಮ್ಮೆ ಸದ್ದು ಮಾಡುತ್ತಿವೆ.
ಬಿಜೆಪಿಯಲ್ಲಿನ ರಾಹುಲ್ ಫೇವರಿಟ್ ಲೀಡರ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮರಿಂದರ್ ಸಿಂಗ್ ಅವರನ್ನು ಬಿಜೆಪಿಯಲ್ಲಿರುವ ತಮ್ಮ ನೆಚ್ಚಿನ ರಾಜಕಾರಣಿ ಎಂದು ಕರೆದ ನಂತರ ಈ ಊಹಾಪೋಹಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ, ತಾವು ಪ್ರಸ್ತುತ ಬಿಜೆಪಿಗೇ ಬದ್ಧರಾಗಿದ್ದರೂ, ರಾಹುಲ್ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರೊಂದಿಗಿನ ತಮ್ಮ ಸಂಬಂಧ ಎಂದಿಗೂ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಅಮರಿಂದರ್ ಸಿಂಗ್ ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದಂತವರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ 2021 ರಲ್ಲಿ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಅಮರಿಂದರ್ ಸಿಂಗ್ ಮರುಸೇರ್ಪಡೆ ಕಾಂಗ್ರೆಸ್‌ಗೆ ಲಾಭ ತರುತ್ತಾ..?
ರಾಹುಲ್ ಗಾಂಧಿಯವರ ಈ ಸ್ನೇಹಪರ ಮಾತುಗಳು ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್‌ಗೆ ಮರಳುವ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಆದರೆ, ಈಗಾಗಲೇ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಘಟಕದ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಳಲುತ್ತಿರುವ ಕಾಂಗ್ರೆಸ್‌ಗೆ, ಕ್ಯಾಪ್ಟನ್ ಆಗಮನ ನಿಜಕ್ಕೂ ಲಾಭ ತರಲಿದೆಯೇ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.
ಒಂದು ವೇಳೆ ಅಮರಿಂದರ್ ಸಿಂಗ್ ವಾಪಸ್ ಬಂದರೂ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬ ಸ್ಪಷ್ಟತೆಯಿಲ್ಲ. ಇದು ಪಕ್ಷದೊಳಗಿನ ಬಣಕಾಳಗವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮುಂದಿನ ಪಂಜಾಬ್ ಚುನಾವಣೆಗೆ ಮುನ್ನ ಸಿಂಗ್ ಅವರ ಸುದೀರ್ಘ ರಾಜಕೀಯ ಅನುಭವ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂಬುದು ಕಾಂಗ್ರೆಸ್‌ನ ಅನೇಕ ನಾಯಕರ ಲೆಕ್ಕಾಚಾರವಾಗಿದೆ.
ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್‌ಗೆ ಮರಳಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಣಾ ಗುರ್ಜಿತ್ ಸಿಂಗ್, ನಾನು ಏನನ್ನೂ ಬಯಸುವುದಿಲ್ಲ. ಅವರು ಪಕ್ಷದಲ್ಲೇ ಉಳಿದಿದ್ದರೆ, ಎಲ್ಲರೂ ವಿವಿಧ ವಿಷಯಗಳಲ್ಲಿ ಸಲಹೆ ಪಡೆಯುವಂತಹ ತಂದೆಯ ಸಮಾನವಾದ ಸ್ಥಾನದಲ್ಲಿ ಇರುತ್ತಿದ್ದರು ಎಂದು ಹೇಳಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ಜೊತೆಗೆ ಮುಂದಿನ ವರ್ಷದ ಆರಂಭದಲ್ಲೇ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ. ಕಳೆದ 2022 ರ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು(ಏಜೆನ್ಸೀಸ್).