Mumbai Auto Driver Honesty
- ₹156 ಬಾಡಿಗೆ ಬದಲಾಗಿ ಚಾಲಕನ ಖಾತೆಗೆ ತಪ್ಪಾಗಿ ₹15,682 ವರ್ಗಾಯಿಸಿದ್ದ ಪ್ರಯಾಣಿಕ.
- ಕಷ್ಟದ ಸನ್ನಿವೇಶದಲ್ಲೂ ಆಸೆಗೆ ಬೀಳದೆ ಪೂರ್ಣ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡಿದ ಚಾಲಕ ಅಲ್ತಾಫ್.
- ಪ್ರಯಾಣಿಕನ ಮೂಡ್ ಹಾಳಾಗಬಾರದು ಎಂದು ಅಸಲಿ ಬಾಡಿಗೆ ಹಣವನ್ನು ಪಡೆಯಲು ನಿರಾಕರಿಸಿದ ಶ್ರೇಷ್ಠ ಗುಣ.
ಮುಂಬೈ: ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಮಧ್ಯೆ ಯಾರನ್ನು, ಯಾವುದನ್ನು ನಂಬೋಕೆ ಸಾಧ್ಯವಾಗೋದಿಲ್ಲ. ಸಾಲವನ್ನು ವಾಪಸ್ ಕೊಡದೆ ಪರಾರಿಯಾಗುವವರು ಇದ್ದಾರೆ. ಇಂತಹ ಸಮಯದಲ್ಲಿ ಟೆನ್ಶನ್ನಲ್ಲಿ ಸಾವಿರಕ್ಕೂ ಹೆಚ್ಚು ಹಣ ಪಾವತಿ ಮಾಡಿದರೆ, ಅದನ್ನು ವಾಪಸ್ ಕೊಡುವವರು ಇದ್ದಾರಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ, ಮುಂಬೈನಲ್ಲಿ ಪ್ರಾಮಾಣಿಕ ಆಟೋ ಚಾಲಕನೊಬ್ಬ ಮಾನವೀಯತೆ ಇನ್ನೂ ಬದುಕಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಹೌದು, ಪ್ರಯಾಣಿಕರೊಬ್ಬರು ತಿಳಿಯದಂತೆ 156ರೂ. ಬದಲಿಗೆ 15,682 ಹಾಕಿದ್ದ ಹಣವನ್ನು ಮರಳಿ ನೀಡಿ, ಮಾನವೀಯತೆ ಮೆರೆದಿದ್ದಾನೆ. ನೆಟ್ಟಿಗರು ಎಂಥಾ ಕರುಣಾ ಮನುಷ್ಯ, ನಿಜಕ್ಕೂ ಗ್ರೇಟ್ ಎಂದು ಕೊಂಡಾಡಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ಲಿಂಕ್ಡ್‌ಇನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಮೂಲಕ ಈ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದ್ದು, ಪ್ರಸ್ತುತ ಅಂತರ್ಜಾಲದಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ಉದ್ಯಮಿಯೊಬ್ಬರು ಮುಂಜಾನೆ ತರಾತುರಿಯಲ್ಲಿ ಅಂತರರಾಷ್ಟ್ರೀಯ ಗ್ರಾಹಕರನ್ನು ಭೇಟಿಯಾಗಲು ಆಟೋ ರಿಕ್ಷಾದಲ್ಲಿ ತೆರಳಿದ್ದರು. ಆಟೋ ಪ್ರಯಾಣಕ್ಕೆ ಕೇವಲ 156ರೂ. ಆಗಿತ್ತು. ಆದರೆ, , ಗಡಿಬಿಡಿಯಲ್ಲಿ ಸ್ಕ್ರೀನ್ ಕಡೆಗೆ ಗಮನ ಹರಿಸದ ಅವರು 15,682 ಹಣವನ್ನು ನಮೂದಿಸಿ ಪಾವತಿ ಮಾಡಿಬಿಟ್ಟಿದ್ದಾರೆ.
ಸಭೆ ಮುಗಿದ ಬಳಿಕ ತಮಗೆ ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಬೇಸರದಿಂದ ಹೊರಬಂದ ಉದ್ಯಮಿಗೆ, ತಾವು ಆಟೋ ಚಾಲಕನಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ವರ್ಗಾಯಿಸಿರುವ ವಿಷಯವೇ ತಿಳಿದಿರಲಿಲ್ಲ. ಆದರೆ ಅವರು ರಸ್ತೆಗೆ ಬಂದಾಗ, ತಾವು ಇಳಿದಿದ್ದ ಜಾಗದಲ್ಲೇ ಆಟೋ ಚಾಲಕ ಅಲ್ತಾಫ್ ಕಾಯುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾದರು.
ತನ್ನದಲ್ಲದ ಹಣ ವಾಪಸ್ ಕೊಟ್ಟ ಕರುಣಾಮಯಿ
ಆಟೋ ಚಾಲಕ ಅಲ್ತಾಫ್ ಉದ್ಯಮಿಯನ್ನು ಸಮೀಪಿಸಿ, ನೀವು ನನಗೆ ತಪ್ಪು ಮೊತ್ತವನ್ನು ಪಾವತಿಸಿದ್ದೀರಿ ಎಂದು ತಿಳಿಸಿ, ತಮಗೆ ಬಂದಿದ್ದ ಪೂರ್ಣ 15,682 ಹಣವನ್ನು ಮರಳಿ ಅವರ ಖಾತೆಗೆ ವರ್ಗಾಯಿಸಿದರು. ಹೆಚ್ಚುವರಿ ಹಣ ಮಾತ್ರವಲ್ಲದೆ ಇಡೀ ಮೊತ್ತವನ್ನೇ ವಾಪಸ್ ಕಳುಹಿಸಿದ್ದರು.
ಇದರಿಂದ ಪ್ರಭಾವಿತರಾದ ಉದ್ಯಮಿ, "ನೀವು ನನಗಾಗಿ ಕಾಯುತ್ತಾ ನಿಮ್ಮ ಸಮಯ ಹಾಗೂ ಕೆಲಸ ಮಿಸ್ ಮಾಡಿಕೊಂಡಿದ್ದೀರಿ, ಕನಿಷ್ಠ ನಿಮ್ಮ ಬಾಡಿಗೆ ಹಣ 156 ಅನ್ನಾದರೂ ಇಟ್ಟುಕೊಳ್ಳಿ ಎಂದೆ. ಆದರೆ ಚಾಲಕ ಅಲ್ತಾಫ್, "ಇದು ನಮ್ಮಿಬ್ಬರಿಗೂ ದಿನದ ಆರಂಭ ಸರ್, ನಿಮ್ಮ ದಿನ ಹಾಳಾಗುವುದು ನನಗೆ ಇಷ್ಟವಿಲ್ಲ" ಎಂದು ಹೇಳಿ ಬಾಡಿಗೆ ಹಣವನ್ನು ಪಡೆಯಲೂ ನಿರಾಕರಿಸಿದರು.
ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ಆಟೋ ಚಾಲಕನ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ತನ್ನ ಅಂತಃಸಾಕ್ಷಿಗೆ ಗೌರವ ನೀಡಿ ಹಣ ಹಿಂದಿರುಗಿಸಿದ ಚಾಲಕನ ನಡೆ ನಿಜಕ್ಕೂ ಶ್ರೇಷ್ಠ" ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).