- ಈ ವರ್ಷ ಸಂಭವಿಸಿದ್ದು ಹಲವಾರು ಬಸ್ ಅಪಘಾತಗಳು
- ಬಸ್ ದುರಂತದ ಜತೆಗೆ ಭೀಕರ ಅಗ್ನಿ ಅವಘಡಗಳು
- ದುರಂತಗಳಲ್ಲಿ ನೂರಾರು ಮಂದಿ ಬಲಿ
ಬೆಂಗಳೂರು: 2025ರ ಕೊನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಿರುವಾಗ, ಈ ವರ್ಷದಲ್ಲಿ ಸಂಭವಿಸಿದ ಹಲವು ಭೀಕರ ದುರಂತದಿಂದ ಅಮಾಯಕ ಜೀವಗಳು ಬಲಿಯಾಗಿವೆ. ಇಂತಹ ಅಪಘಾತಗಳು ಅನೇಕ ಕುಟುಂಬಗಳಿಗೆ ಕೊನೆ ಕಾಣದ ದುಃಖವನ್ನು ತಂದೊಡ್ಡಿದ್ದು, ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡು ಕಣ್ಣೀರಿಡುವಂತೆ ಮಾಡಿವೆ. ಅಷ್ಟಕ್ಕೂ, ದುಃಖ ತಂದೊಡ್ಡಿದ ಆ ಘೋರ ಬಸ್ ಅಪಘಾತಗಳು, ಅಗ್ನಿ ದುರಂತಗಳ ವಿವರ ಇಲ್ಲಿದೆ ನೋಡಿ.
ಸುರಂಗ ಕಾಮಗಾರಿ ವೇಳೆ ಕುಸಿತ: 8 ಸಾವು
ಫೆಬ್ರವರಿ 22ರಂದು, ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಯೋಜನೆಯ ಅಡಿಯಲ್ಲಿ ಸುರಂಗ ಕುಸಿಯಿತು. ಈ ಅಪಘಾತದಲ್ಲಿ 8 ಜನರು ಸಾವನ್ನಪ್ಪಿದರು.
ಕರ್ನೂಲ್ ಬಸ್ ದುರಂತ: 19 ಸಾವು
ಅಕ್ಟೋಬರ್ 25ರಂದು ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 19 ಪ್ರಯಾಣಿಕರು ಸುಟ್ಟು ಕರಕಲಾದರು. ಚಿನ್ನಟೇಕೂರು ಬಳಿ ವೇಮುರಿ ಕಾವೇರಿ ಟ್ರಾವೆಲ್ಸ್ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆ ಬಸ್ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು, ಇಡೀ ಬಸ್ ಸಂಪೂರ್ಣವಾಗಿ ಭಸ್ಮವಾಯಿತು.
ಆರ್‌ಟಿಸಿ ಬಸ್ ದುರಂತ: 19 ಸಾವು
ನವೆಂಬರ್ 3ರಂದು ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ಬಸ್ ಅಪಘಾತ ಸಂಭವಿಸಿತು. ಈ ದುರಂತದಲ್ಲಿಯೂ ಒಟ್ಟ 19 ಜನರು ಮೃತಪಟ್ಟರು. ಆರ್‌ಟಿಸಿ ಬಸ್ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಕಾರಣ, ಬಸ್ ನಜ್ಜುಗುಜ್ಜಾಯಿತು. ಈ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಬಲಿಯಾದರು.
ಅಗ್ನಿ ದುರಂತ: 160 ಮಂದಿ ದುರ್ಮರಣ
ನವೆಂಬರ್ 26ರಂದು ಹಾಂಗ್ ಕಾಂಗ್‌ನ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 160 ಜನರು ದುರಂತ ಸಾವನ್ನಪ್ಪಿದರು. ವಾಂಗ್ ಪುಕ್ ಕೋರ್ಟ್ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿಯ ಜ್ವಾಲೆ ವೇಗವಾಗಿ ಹಬ್ಬಿತು. ಬೆಂಕಿಯನ್ನು ನಂದಿಸಲು ಸುಮಾರು 128 ಅಗ್ನಿಶಾಮಕ ವಾಹನಗಳು ಹರಸಾಹಸ ಪಡಬೇಕಾಯಿತು.
ಗೋವಾ ಅಗ್ನಿ ದುರಂತ: 25 ಸಾವು
ಡಿಸೆಂಬರ್ 6ರಂದು, ಉತ್ತರ ಗೋವಾದ ಅರ್ಪೋರಾದಲ್ಲಿರುವ ಬಿರ್ಸ್ ನೈಟ್ ಕ್ಲಬ್‌ನಲ್ಲಿ ಮಧ್ಯರಾತ್ರಿ ಅಗ್ನಿ ಕಾಣಿಸಿಕೊಂಡಿತು. ಈ ಅಪಘಾತದಲ್ಲಿ 25 ಜನರು ಸಜೀವ ದಹನವಾದರು. ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್ ಸಿಬ್ಬಂದಿಯಾಗಿದ್ದು, ಕೆಲವರು ಪ್ರವಾಸಿಗರಿದ್ದರು.
ಬಸ್ ದುರಂತ: 9 ಜನರು ಸಾವು
ಡಿಸೆಂಬರ್ 12 ರಂದು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತು. ಭದ್ರಾಚಲಂನಿಂದ ಅನ್ನಾವರಂಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಕಣಿವೆಗೆ ಉರುಳು ಬಿದ್ದಿತು. ಚಿಂತೂರಿನಿಂದ ಮಾರೆಡುಮಿಲ್‌ಗೆ ಹೋಗುವ ಘಾಟಿ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿದರು. ಆ್ಯಕ್ಸಿಡೆಂಟ್ ಸಂಭವಿಸುವ ಸಮಯದಲ್ಲಿ ಬಸ್ಸಿನಲ್ಲಿ ಒಟ್ಟು 38 ಜನರಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿತು ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).