ಲಖನೌ: ವಾಯು ಮಾಲಿನ್ಯ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬುಧವಾರ(ನ. 11) ದೀಪಾವಳಿ ಆಚರಣೆಯಲ್ಲಿ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತು ಹಬ್ಬದ ಸಮಯದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾದರೂ, ಅದು ಅಂತಿಮವಾಗಿ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಧಂತೇರಸ್ ಮತ್ತು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಶ್ಲಾಘಿಸಿದ್ದು, ಇಂತಹ ದೃಶ್ಯಗಳನ್ನು ನೋಡುವುದು ಸಂತೋಷದಾಯಕ ಎಂದು ಹೇಳಿದ್ದಾರೆ. ಆದರೆ, ಭ್ರಷ್ಟ ಕೃತ್ಯಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸುವವರನ್ನು ಯಾರೂ ಪ್ರಶ್ನಿಸುವುದಿಲ್ಲ. ಅದೇ ಜನರು ಒಂದು ದಿನ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ತಕ್ಷಣವೇ ಮಾಲಿನ್ಯದ ವಿಷಯ ಮುನ್ನೆಲೆಗೆ ಬರುತ್ತದೆ ಎಂದು ಕಿಡಿಕಾರಿದ್ದಾರೆ.
ತಮ್ಮ ಭ್ರಷ್ಟ ಕೃತ್ಯಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಸಾರ್ವಜನಿಕರು ಒಂದೇ ಒಂದು ದಿನ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರೆ, ಆಗ ಮಾಲಿನ್ಯದ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಮಾಲಿನ್ಯದ ಬಗ್ಗೆ ಚಿಂತಿಸದಂತೆ ಕರೆ ನೀಡಿದ ಅವರು, ಒಂದು ವೇಳೆ ಮಾಲಿನ್ಯ ಉಂಟಾದರೂ ಅದು ಕಾಲಕ್ರಮೇಣ ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ದೀಪಾವಳಿಯನ್ನು ಆಚರಿಸಲು ಜನರು ಪಟಾಕಿಗಳನ್ನು ಸಿಡಿಸುವುದರ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, ಜನರು ಅತ್ಯಂತ ಉತ್ಸಾಹದಿಂದ ದೀಪಾವಳಿಯನ್ನು ಆಚರಿಸಿ, ಸಾಕಷ್ಟು ಪಟಾಕಿಗಳನ್ನು ಸಿಡಿಸುವ ಮೂಲಕ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಪಟಾಕಿಗಳ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು ನಾವು ಮೊದಲೇ ಹೇಳಿದ್ದೆವು ಎಂದಿದ್ದಾರೆ (ಏಜೆನ್ಸೀಸ್).