ಬುಮ್ರಾ ಶಾಕಿಂಗ್ ನಿರ್ಧಾರ! ಇನ್ಮುಂದೆ ಟಿ20ಯಲ್ಲಿ ಕಾಣಿಸಲ್ಲ ಜಸ್ಪ್ರೀತ್? ಬಿಸಿಸಿಐ ನೀಡಿದ ಆ ರಹಸ್ಯ ಕಾರಣವೇನು..?
ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತಕ್ಕೆ ಕಿರೀಟ ತೊಡಿಸಿದ ಜಸ್ಪ್ರೀತ್ ಬುಮ್ರಾ(Jasprit Bumrah), ಈಗ ತಮ್ಮ ವೃತ್ತಿಜೀವನದ ಗೇರ್ ಬದಲಿಸಲು ಸಿದ್ಧರಾಗಿದ್ದಾರೆ. 2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ, ಇನ್ಮುಂದೆ ಟಿ20 ಪಂದ್ಯಗಳಿಗಿಂತ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿವೆ.
2027ರ ವಿಶ್ವಕಪ್ ಮೇಲೆ ಗುರಿ: ಟಿ20ಯಿಂದ ದೂರ..?
ಪಿಟಿಐ ವರದಿಯ ಪ್ರಕಾರ, ಮುಂದಿನ 18 ತಿಂಗಳುಗಳ ಕಾಲ ಬುಮ್ರಾ ಅವರ ಕೆಲಸದ ಒತ್ತಡವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಲು ಬಿಸಿಸಿಐ ಮುಂದಾಗಿದೆ. ಬುಮ್ರಾ ಅವರ ಬೆನ್ನಿನ ಗಾಯದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ದೀರ್ಘಕಾಲದವರೆಗೆ ಫಿಟ್ ಆಗಿರಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ.
ಟೆಸ್ಟ್ ಕ್ರಿಕೆಟ್ ಅಕ್ಕಪಕ್ಕಕ್ಕೆ ಇರಲಿ, ಆದರೆ ಮುಂಬರುವ ಏಕದಿನ ವಿಶ್ವಕಪ್ ಚಕ್ರದಲ್ಲಿ ಅವರು ಒಡಿಐ ಪಂದ್ಯಗಳ ಮೇಲೆ ಹೆಚ್ಚು ಗಮನಹರಿಸಲಿದ್ದಾರೆ. ಸುಮಾರು 30 ರಿಂದ 35 ಪಂದ್ಯಗಳನ್ನು ಅವರು ಆಡಬೇಕಾಗಬಹುದು, ಈ ವಿಷಯದಲ್ಲಿ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದರೆ, ಮುಂಬರುವ ದಿನಗಳಲ್ಲಿ ಬುಮ್ರಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಲಿದೆ.
35 ಪಂದ್ಯಗಳ 'ಗೋಲ್ಡನ್' ಪ್ಲಾನ್!
ಬುಮ್ರಾ ಅವರು ಈಗಾಗಲೇ 2022ರ ಟಿ20 ವಿಶ್ವಕಪ್ ಮತ್ತು ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿಯನ್ನು ಗಾಯದ ಕಾರಣದಿಂದ ಕಳೆದುಕೊಂಡಿದ್ದರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಪಿಲ್ ದೇವ್, ಜಾವಗಲ್ ಶ್ರೀನಾಥ್ ಮತ್ತು ಜಹೀರ್ ಖಾನ್ ಅವರಂತಹ ದಿಗ್ಗಜ ವೇಗಿಗಳಿದ್ದರೂ, ಬುಮ್ರಾ ಅವರಂತಹ 'ಜೀನಿಯಸ್' ಬೌಲರ್ ಅಪರೂಪವಾಗಿದ್ದು. ಆದ್ದರಿಂದಲೇ ಐಪಿಎಲ್ 2026 ಮುಗಿದ ನಂತರ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.
ಸದ್ಯಕ್ಕೆ ಅವರ ಮುಂದಿನ ಗುರಿಗಳು ಎರಡು
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್
2027ರ ಏಕದಿನ ವಿಶ್ವಕಪ್ (ದಕ್ಷಿಣ ಆಫ್ರಿಕಾ)
ಇದರ ಜೊತೆಗೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗುತ್ತಿರುವುದರಿಂದ, ಅಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಕನಸನ್ನು ಬುಮ್ರಾ ಹೊಂದಿದ್ದಾರೆ. ಆದರೆ ಅದು ದೀರ್ಘಾವಧಿಯ ಯೋಜನೆಯಾಗಿದೆ.
ಗಂಭೀರ್-ಲಕ್ಷ್ಮಣ್-ಗಿಲ್ ಸಾರಥ್ಯದಲ್ಲಿ ಹೊಸ ರೋಡ್ ಮ್ಯಾಪ್
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ನಾಯಕ ಶುಭಮನ್ ಗಿಲ್ ಈಗಾಗಲೇ ಮುಂದಿನ ಒಂದೂವರೆ ವರ್ಷದ ನೀಲನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಐಪಿಎಲ್ 19ನೇ ಸೀಸನ್ ಮುಗಿಯುತ್ತಿದ್ದಂತೆಯೇ ಈ ಯೋಜನೆ ಜಾರಿಗೆ ಬರಲಿದೆ.
ಭಾರತವು ಮುಂದಿನ ದಿನಗಳಲ್ಲಿ 15 ಏಕದಿನ ಮತ್ತು ಹಲವು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಬುಮ್ರಾ ಈ ಪಂದ್ಯಗಳಲ್ಲಿ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ಟಿ20 ಕ್ಯಾಲೆಂಡರ್ ತುಂಬಿದ್ದರೂ, ಬುಮ್ರಾ ಅವರನ್ನು ಕೇವಲ ಆಯ್ದ ಪಂದ್ಯಗಳಿಗೆ ಮಾತ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಜಸ್ಪ್ರೀತ್ ಬುಮ್ರಾ ಕೇವಲ ಒಬ್ಬ ಬೌಲರ್ ಅಲ್ಲ, ಅವರು ಭಾರತೀಯ ಕ್ರಿಕೆಟ್‌ನ ರಾಷ್ಟ್ರೀಯ ಆಸ್ತಿ. ಅವರನ್ನು ಸಂರಕ್ಷಿಸಿ, ದೊಡ್ಡ ಟೂರ್ನಿಗಳಲ್ಲಿ ಅವರ ಸೇವೆಯನ್ನು ಪಡೆಯುವುದು ಬಿಸಿಸಿಐನ ಜಾಣತನದ ನಡೆಯಾಗಿದೆ. ಟಿ20 ಅಭಿಮಾನಿಗಳಿಗೆ ಇದು ಸ್ವಲ್ಪ ಬೇಸರ ತಂದರೂ, ವಿಶ್ವಕಪ್ ಗೆಲ್ಲಲು ಇದು ಅನಿವಾರ್ಯವಾಗಿದೆ,(ಏಜೆನ್ಸೀಸ್).