ಸಿಎಂ ಇಳಿಯುವಷ್ಟರಲ್ಲಿ ಹೆಲಿಪ್ಯಾಡ್​ಗೆ ನುಗ್ಗಿದ ಗೂಳಿ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಪೊಲೀಸರು​! Bull  
ದೇಶ

ಸಿಎಂ ಇಳಿಯುವಷ್ಟರಲ್ಲಿ ಹೆಲಿಪ್ಯಾಡ್​ಗೆ ನುಗ್ಗಿದ ಗೂಳಿ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಪೊಲೀಸರು​! Bull

ಪ್ರಮುಖ ಮುಖ್ಯಾಂಶಗಳು

  • ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿದ್ದ ಹೆಲಿಕಾಪ್ಟರ್​ ಲ್ಯಾಂಡ್​ ಆಗಲು ಸಕಲ ಸಿದ್ಧತೆ ನಡೆದಿತ್ತು
  • ಹೆಲಿಪ್ಯಾಡ್​ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು ಮತ್ತು ಪೊಲೀಸ್​ ಸಿಬ್ಬಂದಿ ಹೆಲಿಪ್ಯಾಡ್​ ಸುತ್ತುವರೆದಿದ್ದರು
  • ಇನ್ನೇನು ಸಿಎಂ ಇದ್ದ ಹೆಲಿಕಾಪ್ಟರ್​ ಲ್ಯಾಂಡ್​ ಆಗಬೇಕಿತ್ತು, ಅಷ್ಟರಲ್ಲಿ ಎಂಟ್ರಿ ಕೊಟ್ಟ ಗೂಳಿ
ಪಟನಾ: ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿದ್ದ ಹೆಲಿಕಾಪ್ಟರ್​ ಲ್ಯಾಂಡ್​ ಆಗಲು ಸಕಲ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್​ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪೊಲೀಸ್​ ಸಿಬ್ಬಂದಿ ಹೆಲಿಪ್ಯಾಡ್​ ಅನ್ನು ಸುತ್ತುವರೆದಿದ್ದರು. ಇನ್ನೇನು ಸಿಎಂ ಇದ್ದ ಹೆಲಿಕಾಪ್ಟರ್​ ಲ್ಯಾಂಡ್​ ಆಗಬೇಕಿತ್ತು, ಅಷ್ಟರಲ್ಲಿ ಎಂಟ್ರಿ ಕೊಟ್ಟ ಗೂಳಿಯೊಂದು ( Bull ) ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣವನ್ನೇ ಸೃಷ್ಟಿ ಮಾಡಿಬಿಟ್ಟಿತು. 
ಅಂದಹಾಗೆ, ಈ ವಿಚಿತ್ರ ಭದ್ರತಾ ಲೋಪ ಸಂಭವಿಸಿದ್ದು ಬಿಹಾರದ ಬೆಗುಸರೈನಲ್ಲಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ವೈರಲ್​ ಆಗಿದೆ. ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರ ಆಗಮನಕ್ಕಾಗಿ ಬಿಹಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಐಎಡಿಎ)ದ ಕ್ಯಾಂಪಸ್‌ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ಅನ್ನು ಸ್ಥಾಪಿಸಲಾಗಿದ್ದ ಬರೌನಿ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನಿತೀಶ್​ ಕುಮಾರ್ ಅವರು ಪೂರ್ವ ನಿಗದಿ ಕಾರ್ಯಕ್ರಮಕ್ಕೆ ಬೆಗುಸರೈಗೆ ಇಂದು ಆಗಮಿಸಿದರು. ಅವರು ಹೆಲಿಕ್ಯಾಪ್ಟರ್​ನಲ್ಲಿ ಆಗಮಿಸಿದ್ದರಿಂದ ಮೊದಲೇ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಕಾಪ್ಟರ್​ ಲ್ಯಾಂಡಿಂಗ್​ಗಾಗಿ ಹೆಲಿಪ್ಯಾಡ್​ ನಿರ್ಮಾಣ ಮಾಡಿದ್ದ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೆಲಿಪ್ಯಾಡ್​ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು ಮತ್ತು ಆ ಪ್ರದೇಶದಾದ್ಯಂತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇನ್ನೇನು ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್​ ಲ್ಯಾಂಡ್​ ಆಗಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಒಂದು ಗೂಳಿ ಹೇಗೋ ಬ್ಯಾರಿಕೇಡ್‌ಗಳನ್ನು ದಾಟಿ ಹೆಲಿಪ್ಯಾಡ್ ವಲಯದೊಳಗೆ ನುಗ್ಗಿತು. ಭದ್ರತಾ ಶಿಷ್ಟಾಚಾರದ ಅಡಿಯಲ್ಲಿ ಸಂಪೂರ್ಣವಾಗಿ ಮುಚ್ಚಬೇಕಾದ ಸ್ಥಳದಲ್ಲಿ ಗೂಳಿ ಎಂಟ್ರಿ ಕೊಟ್ಟಿದ್ದು ಭದ್ರತಾ ಲೋಪಕ್ಕೆ ಕಾರಣವಾಗಿದೆ. 
ಹೆಲಿಪ್ಯಾಡ್​ ಒಳಗೆ ಗೂಳಿ ನುಗ್ಗುತ್ತಿದ್ದಂತೆ ಅಲ್ಲಿದ್ದ ಪೊಲೀಸ್​ ಸಿಬ್ಬಂದಿ ಭಯ ಭೀತರಾಗಿ ಎದ್ನೋಬಿದ್ನೋ ಎಂಬಂತೆ ಓಡಿದರು. ಆ ಸಮಯದಲ್ಲಿ ಗೂಳಿ ಓರ್ವ ಪೊಲೀಸ್​ ಸಿಬ್ಬಂದಿಯಿಂದ ಅಟ್ಟಿಸಿಕೊಂಡು ಓಡಿತು. ಅಂತಿಮವಾಗಿ ಪೊಲೀಸ್​ ಸಿಬ್ಬಂದಿ ಗೂಳಿಯಿಂದ ಬಚಾವ್​ ಆದರು. ಕೊನೆಗೆ ಗೂಳಿ ಆ ಪ್ರದೇಶದಿಂದ ದೂರ ಸರಿಯುತ್ತಿದ್ದಂತೆ ತಣ್ಣಗಾಯಿತು. ಗೂಳಿಯ ಓಡಾಟದಿಂದ ಕೆಲ ಕಾಲ ಆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.
ಲ್ಯಾಂಡಿಂಗ್​ ಸುಗಮ 
ಗೂಳಿ ಕೆಲಕಾಲ ಆತಂಕದ ವಾತಾವರಣವನ್ನು ಉಂಟು ಮಾಡಿದರು ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬರುವ ಮೊದಲೇ ಅಧಿಕಾರಿಗಳು ಹೆಲಿಪ್ಯಾಡ್ ರೆಡಿ ಮಾಡಿದರು ಮತ್ತು ಲ್ಯಾಂಡಿಂಗ್ ಸುಗಮವಾಗಿ ನಡೆಯುವಂತೆ ನೋಡಿಕೊಂಡರು, (ಏಜೆನ್ಸೀಸ್​).