ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​  
ದೇಶ

ಕೇಂದ್ರ ಬಜೆಟ್-2026: ನಿರ್ಮಲಾ ಸೀತಾರಾಮನ್​ ಆಯವ್ಯಯದ ಮೇಲಿದೆ ಇಷ್ಟೊಂದು ನಿರೀಕ್ಷೆಗಳು...Union budget 2026

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 1ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ ಮಂಡಿಸಲಿದ್ದಾರೆ
  • ಎಂದಿನಂತೆ ಈ ಬಾರಿಯೂ ಕೇಂದ್ರ ಬಜೆಟ್​ ಮೇಲೆ ಜನರಲ್ಲಿ ಭಾರೀ ನಿರೀಕ್ಷೆ ಇದೆ
  • ಕಸ್ಟಮ್ಸ್​ ಸುಂಕ ಪದ್ಧತಿಯ ಪರಿಷ್ಕರಣೆ, ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣ ಬಯಸುತ್ತಿದ್ದಾರೆ
  • ಆರ್ಥಿಕತೆಯನ್ನು ಉತ್ತೇಜಿಸಲು ಅನೇಕ ಸುಧಾರಣ ಕ್ರಮಗಳನ್ನು ವಿತ್ತ ಸಚಿವೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ
ನವದೆಹಲಿ: ಇದೇ ಫೆಬ್ರವರಿ 1ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಅವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್-2026 ( Union budget 2026 ) ಮಂಡನೆ ಮಾಡಲಿದ್ದಾರೆ. ಹೀಗಾಗಿ, ಎಂದಿನಂತೆ ಈ ಬಾರಿಯೂ ಜನರಲ್ಲಿ ಭಾರೀ ನಿರೀಕ್ಷೆ ಇದೆ. ಅದರಲ್ಲೂ, ಕಸ್ಟಮ್ಸ್​ ಸುಂಕ ಪದ್ಧತಿಯ ಪರಿಷ್ಕರಣೆ, ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಸರಳೀಕರಣ ಮತ್ತು ಸದ್ಯ ಜಾಗತಿಕ ರಾಜಕೀಯದಲ್ಲಿ ಉಂಟಾಗಿರುವ ಅನಿಶ್ಚಿತತೆ ನಡುವೆ ಆರ್ಥಿಕತೆಯನ್ನು ಉತ್ತೇಜಿಸಲು ಅನೇಕ ಸುಧಾರಣ ಕ್ರಮಗಳನ್ನು ವಿತ್ತ ಸಚಿವೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಜನಸಾಮಾನ್ಯರಲ್ಲಿದೆ.
ನಿಮಗೆಲ್ಲರಿಗೂ ಗೊತ್ತಿದೆ ಕಳೆದ ಬಾರಿ ಬಜೆಟ್​ ಮಂಡನೆ ಮಾಡಿದಾಗ ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂ.ವರೆಗೂ ಹೆಚ್ಚಳ ಮಾಡಿ, ಜನರಿಗೆ ಬಿಗ್​ ರಿಲೀಫ್​ ನೀಡಿದರು. ಇದಾದ ಬಳಿಕ, ಅಂದರೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಜಿಎಸ್​ಟಿ ದರಗಳನ್ನು ಕಡಿತಗೊಳಿಸಿದರು. 4 ಸ್ಲ್ಯಾಬ್​ ಹೊಂದಿದ್ದ ಜಿಎಸ್​ಟಿ ಪಟ್ಟಿಯನ್ನು ಕೇವಲ 2ಕ್ಕೆ ಸೀಮಿತ ಮಾಡಿ, ಜನರಿಗೆ ಭಾರಿ ರಿಲೀಫ್​ ನೀಡಿದರು. ಆದರೂ, ಜನರಲ್ಲಿ ಕೆಲವೊಂದಿಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಸ್ಟ್ಯಾಂಡರ್ಡ್​ ಡಿಡಕ್ಷನ್​ನಲ್ಲಿ ಕೆಲವೊಂದಿಷ್ಟು ರಿಲೀಫ್​ ದೊರೆಯಬಹುದು ಅನ್ನೋ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ. ಫೆ.1ರಂದು ಮಂಡನೆಯಾಗುವ ಬಜೆಟ್​ ಮೇಲೆ ಎಲ್ಲರ ಗಮನ ಇದೆ.

TDS ಸರಳೀಕರಣ 

ಜನರಿಗೆ ಈ ಬಾರಿಯ ಬಜೆಟ್​ನಲ್ಲಿ ಏನೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ. ಮೊದಲನೇಯದಾಗಿ, ಜನರು ತೆರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಸರಳತೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹೊಸ ಮತ್ತು ಸರಳೀಕೃತ ಆದಾಯ ತೆರಿಗೆ ಕಾಯ್ದೆ-2025 ಮುಂದಿನ ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಈ ಬಜೆಟ್​ನಲ್ಲಿ TDS ಸರಳೀಕರಣ ಮಾಡುವುದರ ಜೊತೆಗೆ, ಇದಕ್ಕೆ ಸಂಬಂಧಿಸಿದ ಟ್ರಾನ್ಸಿಷನ್ ಪ್ರೊವಿಷನ್ಸ್ (ಬದಲಾವಣೆಯ ಸಮಯದ ನಿಯಮಗಳು), ರೂಲ್ಸ್ ಮತ್ತು FAQ (ಪ್ರಶ್ನೋತ್ತರಗಳು) ಗಳನ್ನು ಸ್ಪಷ್ಟವಾಗಿ ಘೋಷಿಸಬೇಕು ಎಂದು ಉದ್ಯಮಗಳು ಆಶಿಸುತ್ತಿವೆ.

ಹೊಸ ಆದಾಯ ತೆರಿಗೆ ವ್ಯವಸ್ಥೆ ಪ್ರೋತ್ಸಾಹ

ಇದಿಷ್ಟೇ ಅಲ್ಲದೆ, ಸ್ಟ್ಯಾಂಡರ್ಡ್ ಡಿಡಕ್ಷನ್ (ಪ್ರಮಾಣಿತ ಕಡಿತ) ಹೆಚ್ಚಳದಂತಹ ಕೆಲವೊಂದಿಷ್ಟು ಪ್ರೋತ್ಸಾಹಗಳನ್ನು ನೀಡುವ ಮೂಲಕ ಜನರನ್ನು ಹಳೆಯ ಆದಾಯ ತೆರಿಗೆ ವ್ಯವಸ್ಥೆಯಿಂದ ಹೊಸ ಆದಾಯ ತೆರಿಗೆ ವ್ಯವಸ್ಥೆ (New Tax Regime)ಗೆ ಬದಲಾಯಿಸಲು ಪ್ರೋತ್ಸಾಹಿಸಬೇಕು ಎಂದು ಈ ಬಜೆಟ್​ನಲ್ಲಿ ನಿರೀಕ್ಷಿಸಲಾಗಿದೆ. ಅದೇ ರೀತಿ, TDS ವರ್ಗಗಳನ್ನು ಸರಳಗೊಳಿಸಿ, ಕಡಿಮೆ ದರಗಳು/ಸ್ಲ್ಯಾಬ್‌ಗಳಿಗೆ ತರುವುದು ಮತ್ತು ಕಸ್ಟಮ್ಸ್ ವ್ಯವಸ್ಥೆಯನ್ನು ದೊಡ್ಡದಾಗಿ ಸುಧಾರಿಸುವ ನಿರೀಕ್ಷೆಯಿದೆ. 

ಅಮ್ನೆಸ್ಟಿ ಸ್ಕೀಮ್​

1.53 ಲಕ್ಷ ಕೋಟಿ ರೂ. ಮೊತ್ತದ ಕಸ್ಟಮ್ಸ್ ವಿವಾದಗಳು (ಲಿಟಿಗೇಷನ್/ಕೋರ್ಟ್ ಕೇಸ್‌ಗಳು) ಇತ್ಯರ್ಥವಾಗಬೇಕಿವೆ. ಇದಕ್ಕೆ ಒಂದು ಒಂದು ಬಾರಿ ಸೆಟಲ್‌ಮೆಂಟ್ ಸ್ಕೀಮ್ (ಅಮ್ನೆಸ್ಟಿ ಸ್ಕೀಮ್​) ಘೋಷಣೆ ಮಾಡುವ ನಿರೀಕ್ಷೆ ಇದೆ. ಇದರಿಂದ 1.53 ಲಕ್ಷ ಕೋಟಿ ರೂ. ವ್ಯಾಪಾರಗಳಿಗೆ ಹಣ ಬಿಡುಗಡೆಯಾಗುತ್ತದೆ ಮತ್ತು ಕೋರ್ಟ್‌ಗಳಲ್ಲಿ ಕೇಸ್‌ಗಳ ಭಾರ ಕಡಿಮೆಯಾಗುತ್ತದೆ. ಅಲ್ಲದೆ, ಉದ್ಯಮಕ್ಕೆ ಲಾಭವಾಗುತ್ತದೆ. 

ರಕ್ಷಣಾ ವೆಚ್ಚಕ್ಕೆ ಹೆಚ್ಚಿನ ಅನುದಾನ 

ಇನ್ನು 2026-27ರ ಆರ್ಥಿಕ ವರ್ಷದಿಂದ ಸಾಲ-ಜಿಡಿಪಿ ಅನುಪಾತವನ್ನು ಕಡಿಮೆ ಮಾಡುವತ್ತ ಗಮನಹರಿಸಿ, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ರಕ್ಷಣಾ ವೆಚ್ಚಕ್ಕೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಇದರೊಂದಿಗೆ VB-G RAM G (ವಿಕಸಿತ ಭಾರತ – ಗ್ರಾಮೀಣ ರೋಜ್ಗಾರ ಮತ್ತು ಆಜೀವಿಕಾ ಮಿಷನ್) ಯೋಜನೆಗೆ 2026ರ ಯೂನಿಯನ್ ಬಜೆಟ್‌ನಲ್ಲಿ ಪ್ರತ್ಯೇಕ ಹಂಚಿಕೆ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

8ನೇ ವೇತನ ಆಯೋಗ

2026, ಜನವರಿ 1ರಿಂದಲೇ 8ನೇ ವೇತನ ಆಯೋಗ ಜಾರಿಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಅಲ್ಲದೆ, 16ನೇ ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುವ ನಿರೀಕ್ಷೆ ಸಹ ಈ ಬಾರಿಯ ಬಜೆಟ್​​ನಲ್ಲಿ ಇಟ್ಟುಕೊಳ್ಳಲಾಗಿದೆ. ಈ ಎಲ್ಲ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಪೂರೈಕೆ ಆಗುತ್ತದೆ ಅನ್ನೋದನ್ನು ತಿಳಿಯಬೇಕಾದರೆ, ಫೆ.1ರವೆಗೆ ಕಾಯಬೇಕಾಗುತ್ತದೆ, (ಏಜೆನ್ಸೀಸ್​).