ಜನಮಾನಸದ ಮಾಸ್ ಲೀಡರ್ ಬಿಎಸ್​ವೈ 
ದೇಶ

ಜನಮಾನಸದ ಮಾಸ್ ಲೀಡರ್ ಬಿಎಸ್​ವೈ

(ಲೇಖಕರು ಕೆಎಲ್​ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರು)
ನನ್ನ ಆತ್ಮೀಯ ಒಡನಾಡಿ, ರೈತ ಹಿತೈಷಿ, ನಾಡಿನ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ವೀರಶೈವ ಲಿಂಗಾಯತ ಸಮುದಾಯದ ಕಣ್ಮಣಿ ಬಿ.ಎಸ್. ಯಡಿಯೂರಪ್ಪ ರಾಜಕೀಯವಾಗಿ 50 ವರ್ಷ ಪೂರೈಸಿದ ನಿಮಿತ್ತ ಅಭಿನಂದನಾ ಸಮಾರಂಭ ಆಯೋಜಿಸುತ್ತಿರುವುದು ಹೆಮ್ಮೆ ತಂದಿದೆ. ಅಣ್ಣ ಬಸವಣ್ಣ ಹೇಳುವಂತೆ, ಯಡಿಯೂರಪ್ಪ ಅಕ್ಷರಶಃ ಸಮುದಾಯದಿಂದ ಲೇಸೆನಿಸಿ ಕೊಂಡು ಬದುಕಿದವರು.

ನನ್ನ ಸುದೀರ್ಘ ರಾಜಕೀಯ ಜೀವನ ದಲ್ಲಿ ಯಡಿಯೂರಪ್ಪ ಅವರನ್ನು ಅತೀ ಹತ್ತಿರ ದಿಂದ ಕಂಡು, ಪಕ್ಷದ ನೆಲೆಯಲ್ಲಿ ಅವರೊಂದಿಗೆ ಸಂಘಟನಾತ್ಮಕವಾಗಿ ದುಡಿದ ಅನುಭವದಿಂದ ನಾನು ಈ ನುಡಿಗಳನ್ನು ಹೇಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿದ್ದ ನನ್ನನ್ನು ಭಾರತೀಯ ಜನತಾ ಪಕ್ಷಕ್ಕೆ ಕರೆತಂದವರೇ ಬಿಎಸ್​ವೈ. ಅವರದು ಅಖಂಡ ವ್ಯಕ್ತಿತ್ವ, ಅವರೊಬ್ಬ ದಿಟ್ಟ ಹೋರಾಟಗಾರ. ನೇರ ಹಾಗೂ ನಿಷ್ಠುರವಾದಿ. ಬಸವ ಸಿದ್ಧಾಂತವನ್ನು ಮೈಗೂಡಿಸಿಕೊಂಡ ದೃಢ ನಿಲುವಿನ ನಾಯಕ ಯಡಿಯೂರಪ್ಪ. ರಾಜಕಾರಣದಲ್ಲಿ ಯಾವುದಕ್ಕೂ ಎದೆಗುಂದದೆ ಎಲ್ಲವನ್ನೂ ದಿಟವಾಗಿ ಎದುರಿಸಿದ ಛಾತಿ ಅವರದು. ನನ್ನ ದೃಷ್ಟಿಯಲ್ಲಿ ಅವರು ಒಬ್ಬ ರಾಜಕಾರಣಿ ಮಾತ್ರವಲ್ಲ, ಬದಲಾಗಿ ಜನಮನಗಳನ್ನು ಅರಿತು ಕಾರ್ಯನಿರ್ವಹಿಸಿದ ದೃಢಸಂಕಲ್ಪದ ಧೀಮಂತ ಜನನಾಯಕ. ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆಗುರುತನ್ನು ಮೂಡಿಸಿದ ಮಾಸ್ ಲೀಡರ್ ಯಡಿಯೂರಪ್ಪ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸ್ಥಾಪನೆ ಸುಲಭದ ಮಾತಾಗಿರಲಿಲ್ಲ. ಪಕ್ಷವನ್ನು ರಾಜ್ಯದಲ್ಲಿ ತಳಮಟ್ಟದಲ್ಲಿ ಗಟ್ಟಿಯಾಗಿ ಕಟ್ಟುವ ಕೆಲಸವನ್ನು ಬಿಎಸ್​ವೈ ಮಾಡಿದರು. ಹಳ್ಳಿ, ನಗರಗಳಲ್ಲಿ ಹಗಲು-ರಾತ್ರಿ ಎನ್ನದೆ ಪಕ್ಷದ ಕಾರ್ಯಕರ್ತರನ್ನು ಕಟ್ಟಿಕೊಂಡು ತಿರುಗಾಡಿ, ಪಕ್ಷ ಬೆಳೆಸಿದರು. ಅಗಣಿತ ತೊಂದರೆಗಳನ್ನು ಎದುರಿಸಿದರು. ತಮ್ಮ ಸೈದ್ಧಾಂತಿಕ ಸಿದ್ಧಾಂತಗಳಿಗೆ ಬದ್ಧರಾಗಿ ಉಳಿಸಿದರು. ರಾಜ್ಯದಲ್ಲಿ ಕಮಲ ಅರಳಿಸಿಯೇ ತೀರಿದರು. ಬಹುವರ್ಷಗಳ ಶ್ರಮದ ಫಲ ರಾಜ್ಯದಲ್ಲಿ ಸಾಕಾರ ಗೊಂಡಿತು. ಲೋಕಸಭಾ ಚುನಾ ವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಸೀಟುಗಳು ರಾಜ್ಯದಿಂದ ಆಯ್ಕೆ ಯಾಗುವಂತೆ ನೋಡಿಕೊಂಡರು.
ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಬೆಳಗಾವಿಯ ನಮ್ಮ ಕೆಎಲ್​ಇ ಜೆಎನ್​ಎಂಸಿ ಅಂಗಳದಲ್ಲಿ 2006ರಲ್ಲಿ ಹಾಗೂ 2009ರಲ್ಲಿ ವಿಧಾನಸೌಧ ಅಧಿವೇಶನ ನಡೆದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಗಟ್ಟಿತನವನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಕಾರ್ಯವೈಖರಿ ಅಗಾಧವಾಗಿತ್ತು. ರೈತರ ಸಮಸ್ಯೆಗಳ ಕುರಿತು ಅವರ ಸ್ಪಂದನೆ, ಗ್ರಾಮೀಣಾಭಿವೃದ್ಧಿ ಮೇಲಿನ ಒಲವು ಮತ್ತು ಮೂಲಸೌಕರ್ಯ ವೃದ್ಧಿಗೆ ನೀಡಿದ ಆದ್ಯತೆ ಅವರ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ತಿಳಿಸುತ್ತವೆ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದ ಅವರು, ಪ್ರತ್ಯೇಕವಾಗಿ ರೈತರ ಬಜೆಟ್ ಮಂಡಿಸಿದ ಮೊದಲ ನಾಯಕರು. ರೈತರ ಬೆಳೆ ಸಾಲಮನ್ನಾ, ನೀರಾವರಿ ಯೋಜನೆ ಕಾರ್ಯಗತಗೊಳಿಸಿದ್ದು, ಶೀಘ್ರವಾಗಿ ರಸಗೊಬ್ಬರ ವಿತರಿಸುವ ಕ್ರಮ, ಆಧುನಿಕ ಕೃಷಿ ಪರಿಕರಗಳು ಹಾಗೂ ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆ ಹೀಗೆ ಹಲವು ಉಪಕ್ರಮ ಕೈಗೊಂಡ ರೈತರ ಹೃದಯ ಸಾಮ್ರಾಜ್ಯದ ಪೂಜಕರಾದರು.
ಬಿಎಸ್​ವೈ ಜನರ ವಿಶ್ವಾಸ ಸಂಪಾದಿಸುವಲ್ಲಿ ಮತ್ತು ಅದನ್ನು ಕಾಪಾಡಿಕೊಳ್ಳುವಲ್ಲಿ ತೋರಿದ ಬದ್ಧತೆ ಅಗಾಧವಾದುದು ಎಂಬುದನ್ನು ತಿಳಿದುಕೊಂಡಿದ್ದೇನೆ. ಕೆಎಲ್​ಇ ಸಂಸ್ಥೆಗೆ ಹಲವಾರು ಸಲ ಆಗಮಿಸಿದ್ದ ಯಡಿಯೂರಪ್ಪ ಅವರು, ಸಂಸ್ಥೆಯ ಬೆಳವಣಿಗೆಯನ್ನು ಮುಕ್ತವಾಗಿ ಬಣ್ಣಿಸಿದ್ದರು. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಮಾರ್ಗದರ್ಶನ, ಸಹಕಾರ ನಾನೆಂದೂ ಮರೆಯಲಾರೆ.
2005 ಹಾಗೂ 2019ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸುತ್ತಲಿನ ಪ್ರದೇಶದಲ್ಲಿ ಕೃಷ್ಣಾ ನದಿ ನೆರೆ ಬಂದಾಗ ಖುದ್ದಾಗಿ ಭೇಟಿ ನೀಡಿ ರೈತರಿಗೆ ಧೈರ್ಯತುಂಬಿ ಕೈಗೊಂಡ ಉಪಕ್ರಮ, ಮನೆ ಕಳೆದುಕೊಂಡವರಿಗೆ ತಕ್ಷಣ 5 ಲಕ್ಷ ರೂ. ಪರಿಹಾರ ನೀಡಿದ್ದು, ಆಶ್ರಯ ಮನೆಗಳನ್ನು ಕಟ್ಟಿಕೊಡುವಲ್ಲಿ ತೆಗೆದುಕೊಂಡ ಕಾಳಜಿ ಅನನ್ಯವೆಂದುಕೊಂಡಿದ್ದೇನೆ. ಬೆಳಗಾವಿಯಲ್ಲಿ ಕನ್ನಡ ಭವನ ನಿರ್ವಣದಲ್ಲಿ ಯಡಿಯೂರಪ್ಪ ಕೊಡುಗೆ ಬಹುದೊಡ್ಡದು. ಅವರ ಸರ್ಕಾರ ಇದ್ದ ಸಂದರ್ಭದಲ್ಲಿ 3 ಕೋಟಿಗೂ ಹೆಚ್ಚು ಹಣ ಮಂಜೂರು ಮಾಡಿದ ಫಲವಾಗಿ ಕನ್ನಡ ಭವನ ನಿರ್ವಣಗೊಳ್ಳಲು ಸಾಧ್ಯವಾಯಿತು. ಗಡಿಭಾಗದ ಕನ್ನಡಿಗರು ಅವರನ್ನು ಸ್ಮರಿಸಲೇಬೇಕು.
ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ ಇಂದು ನಿರ್ಮಾಣ ಮಾಡಿರುವ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ ನಿವೇಶನವನ್ನು ಕಡಿಮೆ ಬೆಲೆಯಲ್ಲಿ ಮಂಜೂರು ಮಾಡಿಕೊಡುವಲ್ಲಿ ಬಿಎಸ್​ವೈ ವಹಿಸಿದ ಪಾತ್ರ ಬಹುದೊಡ್ಡದು. ಸಮುದಾಯದ ಏಳಿಗೆಗಾಗಿ ಅವರು ಬಹುವಾಗಿ ಶ್ರಮಿಸಿದರು.
ರಾಜ್ಯಕ್ಕೆ ಅವರ ಮಾರ್ಗದರ್ಶನ, ಸಹಕಾರ ಯಾವತ್ತೂ ಬೇಕು. ಭಗವಂತನು ಸಮಾಜ ಸೇವೆ ಮಾಡಲು ಅವರಿಗೆ ಇನ್ನಷ್ಟು ಸದೃಢ ಆರೋಗ್ಯ, ಆಯುಷ್ಯ ಕರುಣಿಸಲೆಂದು ಶುಭ ಹಾರೈಸುತ್ತೇನೆ.