ದೇಶ

2029ರ ಏಪ್ರಿಲ್​ನಿಂದ ಬಿಎಸ್-7 ನಿಯಮ! ಬ್ರೇಕ್ ಧೂಳು, ಟೈರ್ ಸವೆತಕ್ಕೂ ಅನ್ವಯ

ಇಂಧನ ಬಳಕೆ ಮತ್ತು ಬ್ಯಾಟರಿ ಬಾಳಿಕೆಗೆ ಮಾನದಂಡ ನಿಗದಿಯಾಗಲಿದೆ. ಪ್ರಯೋಗಾಲಯ ಪರೀಕ್ಷೆಯ ಜತೆಗೆ ನೈಜ ರಸ್ತೆ ಸಂಚಾರದಲ್ಲಿಯೂ ಮಾಲಿನ್ಯ ಪರೀಕ್ಷೆ ನಡೆಸಬೇಕು.

ನವದೆಹಲಿ: ಪ್ರಯಾಣಿಕ ಕಾರುಗಳಿಗೆ 2029ರ ಏಪ್ರಿಲ್ 1ರಿಂದ ಭಾರತ್ ಸ್ಟೇಜ್-7 (ಬಿಎಸ್-7) ಮಾಲಿನ್ಯ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದ್ದು, 30 ದಿನಗಳೊಳಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ನಿಯಮಗಳು ಮೂರು ಹಂತಗಳಲ್ಲಿ ಜಾರಿಯಾಗಲಿವೆ. ಮೊದಲ ಹಂತದಲ್ಲಿ ವಾಹನಗಳ ಹೊಗೆ ಹೊರಸೂಸುವಿಕೆ, ಇಂಧನ ಬಳಕೆ ಮತ್ತು ಬ್ಯಾಟರಿ ಬಾಳಿಕೆಗೆ ಮಾನದಂಡ ನಿಗದಿಯಾಗಲಿದೆ. ಪ್ರಯೋಗಾಲಯ ಪರೀಕ್ಷೆಯ ಜತೆಗೆ ನೈಜ ರಸ್ತೆ ಸಂಚಾರದಲ್ಲಿಯೂ ಮಾಲಿನ್ಯ ಪರೀಕ್ಷೆ ನಡೆಸಬೇಕು.

2031ರಿಂದ ಬ್ರೇಕ್​ಗಳಿಂದ ಹೊರಬರುವ ಧೂಳಿನ ಕಣ ಮತ್ತು ಟೈರ್ ಸವೆತದ ಮೇಲೂ ನಿಯಂತ್ರಣ ಜಾರಿಗೆ ಬರಲಿದೆ. ಎಲೆಕ್ಟ್ರಿಕ್ ಕಾರುಗಳ ಬ್ರೇಕ್ ಕಣಗಳ ಮಿತಿ ಪ್ರತಿ ಕಿ.ಮೀ.ಗೆ 3 ಮಿಲಿಗ್ರಾಂ ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ. ಇತರ ವಾಹನಗಳಿಗೆ ಆರಂಭದಲ್ಲಿ 7 ಮಿಲಿಗ್ರಾಂ ಮಿತಿ ಇರಲಿದೆ. 2035ರಿಂದ ಎಲ್ಲ ವಾಹನಗಳಿಗೂ ಪ್ರತಿ ಕಿ.ಮೀ.ಗೆ 3 ಮಿಲಿಗ್ರಾಂ ಮಿತಿ ಅನ್ವಯವಾಗಲಿದೆ.

ಎಲೆಕ್ಟ್ರಿಕ್ ಕಾರು ಮತ್ತು ಪ್ಲಗ್-ಇನ್ ಹೈಬ್ರಿಡ್ ವಾಹನಗಳ ಬ್ಯಾಟರಿ ಐದು ವರ್ಷ ಅಥವಾ ಒಂದು ಲಕ್ಷ ಕಿ.ಮೀ.ವರೆಗೆ ಕನಿಷ್ಠ ಶೇ.75ರಷ್ಟು ಸಾಮರ್ಥ್ಯ ಉಳಿಸಿಕೊಳ್ಳಬೇಕು. ಎಂಟು ವರ್ಷ ಅಥವಾ 1.60 ಲಕ್ಷ ಕಿ.ಮೀ.ವರೆಗೆ ಶೇ.67ರಷ್ಟು ಸಾಮರ್ಥ್ಯ ಉಳಿಯಬೇಕು. ವಾಹನಗಳ ಮಾಲಿನ್ಯ, ಇಂಧನ ಬಳಕೆ ಮತ್ತು ಬ್ಯಾಟರಿ ಆರೋಗ್ಯದ ಮಾಹಿತಿ ನೀಡುವ ಪರಿಸರ ವಾಹನ ಪಾಸ್ಪೋರ್ಟ್ಗೂ ಕರಡು ನಿಯಮದಲ್ಲಿ ಅವಕಾಶವಿದೆ.