Telangana Politics | ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೇ ಅರಿಶಿನ ನೀರು ಪ್ರೋಕ್ಷಣೆ: ಬಿಆರ್‌ಎಸ್ ಶುದ್ಧೀಕರಣ ಕೃತ್ಯಕ್ಕೆ ಕೈ ನಾಯಕರು ಕಿಡಿ! 
ದೇಶ

ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೇ ಅರಿಶಿನ ನೀರು ಪ್ರೋಕ್ಷಣೆ: ಬಿಆರ್‌ಎಸ್ ಶುದ್ಧೀಕರಣ ಕೃತ್ಯಕ್ಕೆ ಕೈ ನಾಯಕರು ಕಿಡಿ!..ವಿಡಿಯೋ ವೈರಲ್​ | Telangana Politics

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಎರ್ರವೆಲ್ಲಿ ಫಾರ್ಮ್‌ಹೌಸ್ ಬಳಿ ಬಿಆರ್‌ಎಸ್ (BRS) ಕಾರ್ಯಕರ್ತರು ಅರಿಶಿನ ನೀರು ಸಿಂಪಡಿಸಿ ಶುದ್ಧೀಕರಣ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ (Telangana Politics) ಹೊಸ ಜಟಾಪಟಿಗೆ ದಾರಿ ಮಾಡಿಕೊಟ್ಟಿದೆ. ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯಿಂದ ಈ ಪ್ರದೇಶ ಅಪವಿತ್ರಗೊಂಡಿದೆ ಎಂದು ಆರೋಪಿಸಿದ ಬಿಆರ್‌ಎಸ್ ಪಡೆ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದೆ.
ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗಡ್ಡಂ ಪ್ರಸಾದ್ ಕುಮಾರ್ ಅವರ ವಿರುದ್ಧ ಬಿಆರ್‌ಎಸ್ ಎಂಎಲ್‌ಸಿ ಟಿ. ಮಧುಸೂದನ್ (ತಾತಾ ಮಧು) ಅವರು ನಿಂದನೀಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಹಾಗೂ ದಲಿತ ಸಂಘಟನೆಗಳ ನಾಯಕರು ಕೆಸಿಆರ್ ಫಾರ್ಮ್‌ಹೌಸ್ ಬಳಿ ಮಂಗಳವಾರ ತಮಟೆ ಬಾರಿಸುವ ಪ್ರತಿಭಟನೆ ನಡೆಸಿದ್ದರು. ಆದರೆ, ಅವರು ಫಾರ್ಮ್‌ಹೌಸ್ ತಲುಪುವ ಮೊದಲೇ ಪೊಲೀಸರು ಅವರನ್ನು ತಡೆದಿದ್ದರು. ಈ ಪ್ರತಿಭಟನೆ ನಡೆದ ಮರುದಿನ, ಬಿಆರ್‌ಎಸ್ ಮಹಿಳಾ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ನಾಯಕರು ಚಲಿಸಿದ ರಸ್ತೆಯುದ್ದಕ್ಕೂ ಅರಿಶಿನ ನೀರು ಹಾಗೂ ಹಾಲನ್ನು ಸಿಂಪಡಿಸಿ ಶುದ್ಧೀಕರಣ ನಡೆಸಿದರು.
ಮತ್ತೊಂದೆಡೆ, ಸ್ಪೀಕರ್ ವಿರುದ್ಧ ಯಾವುದೇ ರೀತಿಯ ನಿಂದನೀಯ ಹೇಳಿಕೆ ನೀಡಿಲ್ಲ ಎಂದು ಬಿಆರ್‌ಎಸ್ ಎಂಎಲ್‌ಸಿ ಟಿ. ಮಧುಸೂದನ್ ಸ್ಪಷ್ಟನೆ ನೀಡಿದ್ದರೂ ಸಹ, ಈ ಘಟನೆಗೆ ಸಂಬಂಧಿಸಿದಂತೆ ಮಧುಸೂದನ್ ಮತ್ತು ಮತ್ತೊಬ್ಬ ಬಿಆರ್‌ಎಸ್ ಎಂಎಲ್‌ಸಿ ಎನ್. ನವೀನ್ ಕುಮಾರ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದರು. ನಂತರ ಅವರಿಬ್ಬರನ್ನೂ ಸಭಾಪತಿ ವಿರುದ್ಧದ ನಿಂದನೆ ಆರೋಪದ ಮೇರೆಗೆ ಮುಂಗಾರು ಅಧಿವೇಶನದಿಂದ ಅಮಾನತುಗೊಳಿಸಲಾಯಿತು.

ಅಧಿವೇಶನದಿಂದ 22 ಶಾಸಕರು ಅಮಾನತು!...

ಈ ವಿಷಯವು ತೆಲಂಗಾಣ ವಿಧಾನಸಭೆಯಲ್ಲಿಯೂ ತೀವ್ರ ಕಾವು ಪಡೆದುಕೊಂಡಿದ್ದು, ಮಹಿಳಾ ಸದಸ್ಯರ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಕೆಸಿಆರ್ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮಾರಾವ್ನಿಲುವಳಿ ಸೂಚನೆ ಮಂಡಿಸಿದರು. ಬಿಆರ್‌ಎಸ್ ಸದಸ್ಯರು ಸದನದ ಭಾವಿಗೆ ಇಳಿದು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ್ದರಿಂದ, ಕೆಟಿಆರ್ ಸೇರಿದಂತೆ ಬಿಆರ್‌ಎಸ್‌ನ 22 ಶಾಸಕರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದರು.
ಈ ಮಧ್ಯೆ, ಬಿಆರ್‌ಎಸ್ ನಡೆಸಿರುವ ಈ ಶುದ್ಧೀಕರಣ ಕಾರ್ಯವು ದಲಿತ ಸಮುದಾಯಕ್ಕೆ ಮತ್ತು ಸಂವಿಧಾನಕ್ಕೆ ಎಸಗಿದ ಘೋರ ಅಪಮಾನ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).