Mosquito Net Protest 
ದೇಶ

Mosquito Net Protest: ಸೊಳ್ಳೆ ಪರದೆ ಧರಿಸಿ ಅಸೆಂಬ್ಲಿಗೆ ಬಂದ ಶಾಸಕ; ವಿಧಾನಸಭೆ ಆವರಣದಲ್ಲಿ MLA ರಂಪಾಟ..!

ಹೈದರಾಬಾದ್: ರಾಜಕೀಯದಲ್ಲಿ ಪ್ರತಿಭಟನೆಗಳು ಸಾಮಾನ್ಯ, ಆದರೆ ತೆಲಂಗಾಣ ವಿಧಾನಸಭೆಯ ಆವರಣದಲ್ಲಿ ಗುರುವಾರ ನಡೆದ ಪ್ರತಿಭಟನೆ(Mosquito Net Protest) ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಬಿಆರ್‌ಎಸ್ ಪಕ್ಷದ ಎಲ್‌ಬಿ ನಗರ ಶಾಸಕ ಡಿ. ಸುಧೀರ್ ರೆಡ್ಡಿ ಅವರು ಇಡೀ ಮೈತುಂಬಾ 'ಸೊಳ್ಳೆ ಪರದೆ'ಯನ್ನೇ ಡ್ರೆಸ್ ಮಾಡಿಕೊಂಡು ಬಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ!

ಏನಿದು 'ಸೊಳ್ಳೆ ಪರದೆ' ಫೈಟ್?

ಗ್ರೇಟರ್ ಹೈದರಾಬಾದ್ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನ ಸಾಮಾನ್ಯರು ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಕ ಕಾಯಿಲೆಗಳಿಂದ ನರಳುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಶಾಸಕ ಸುಧೀರ್ ರೆಡ್ಡಿ ಈ ವಿಶಿಷ್ಟ ದಾರಿಯನ್ನು ಆರಿಸಿಕೊಂಡಿದ್ದರು. ಸೊಳ್ಳೆ ಪರದೆಯಿಂದ ತಯಾರಿಸಿದ ಉಡುಪನ್ನು ಧರಿಸಿ ಅಸೆಂಬ್ಲಿ ಆವರಣಕ್ಕೆ ಬಂದ ಅವರನ್ನು ಕಂಡು ಎಲ್ಲರೂ ಒಂದು ಕ್ಷಣ ಅಚ್ಚರಿಗೊಂಡರು.

ಮಾರ್ಷಲ್‌ಗಳ ಜೊತೆ ಜಟಾಪಟಿ!

ಕೇವಲ ಉಡುಪು ಮಾತ್ರವಲ್ಲದೆ, ಪ್ರತಿಭಟನೆಯ ತೀವ್ರತೆ ಹೆಚ್ಚಿಸಲು ಸುಧೀರ್ ರೆಡ್ಡಿ ಅವರು ತಮ್ಮೊಂದಿಗೆ 'ಫಾಗಿಂಗ್ ಮೆಷಿನ್' (ಹೊಗೆ ಹಾಕುವ ಯಂತ್ರ) ಮತ್ತು ಸೊಳ್ಳೆ ಪರದೆಗಳನ್ನು ಅಸೆಂಬ್ಲಿ ಮೀಡಿಯಾ ಹಾಲ್‌ಗೆ ತರಲು ಯತ್ನಿಸಿದರು. ಆದರೆ, ಅನುಮತಿ ಇಲ್ಲದ ಕಾರಣ ಅಸೆಂಬ್ಲಿ ಮಾರ್ಷಲ್‌ಗಳು ಉಪಕರಣಗಳನ್ನು ವಶಪಡಿಸಿಕೊಂಡರು. ಇದರಿಂದ ಕೆಂಡಾಮಂಡಲವಾದ ಶಾಸಕರು, ಮಾರ್ಷಲ್‌ಗಳ ತಡೆಯ ನಡುವೆಯೂ ಅದೇ ಉಡುಪಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ

"ಹೈದರಾಬಾದ್ ನಗರದಲ್ಲಿ ಸೊಳ್ಳೆಗಳ ಹಾವಳಿ ಮಿತಿ ಮೀರಿದೆ. ಹಿಂದಿನ ಬಿಆರ್‌ಎಸ್ ಸರ್ಕಾರ ಜಾರಿಗೆ ತಂದಿದ್ದ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಈಗಿನ ಸರ್ಕಾರ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಪ್ರತಿ ವಾರ್ಡ್‌ಗೆ ಕನಿಷ್ಠ 10 ಫಾಗಿಂಗ್ ಮೆಷಿನ್ ನೀಡಿ, ಬೃಹತ್ ಮಟ್ಟದಲ್ಲಿ ಸೊಳ್ಳೆ ನಿರ್ಮೂಲನಾ ಕಾರ್ಯ ಕೈಗೊಳ್ಳಬೇಕು" ಎಂದು ಸುಧೀರ್ ರೆಡ್ಡಿ ಒತ್ತಾಯಿಸಿದರು. ಸೊಳ್ಳೆಗಳ ಕಾಟದಿಂದಾಗಿ ಹೈದರಾಬಾದ್‌ನ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು,(ಏಜೆನ್ಸೀಸ್​).