AI Impact Summit | ವಿದೇಶಿ ಪ್ರತಿನಿಧಿಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆಗೆ ಅಖಿಲೇಶ್ ಕಿಡಿ 
ದೇಶ

ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯಿಂದ ರಾಷ್ಟ್ರಕ್ಕೆ ಅವಮಾನ...ಕೈ ಪಾಳಯದ ವಿರುದ್ಧ ಅಖಿಲೇಶ್ ಯಾದವ್ ಗುಡುಗು! | AI Impact Summit

ದೆಹಲಿ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಅರಬೆತ್ತಲೆ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ಹೊರಹಾಕಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​, ಜಾಗತಿಕ ವೇದಿಕೆಯಲ್ಲಿ ಹೇಗೆ ವರ್ತಿಸಬೇಕಿತ್ತು ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಾದವ್​, ಕಾಂಗ್ರೆಸ್​ ಬೆಂಬಲಿಗರ ವರ್ತನೆಯಿಂದ ರಾಷ್ಟ್ರಕ್ಕೆ ಅವಮಾನವಾಗಿದ್ದು, ನಮ್ಮಲ್ಲಿ ಆಂತರಿಕ ಬಿರುಕುಗಳಿರಬಹುದು, ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ, ಆದರೆ ಜಾಗತಿಕ ವೇದಿಕೆಯಲ್ಲಿ ಕೈ ಕಾರ್ಯಕರ್ತರು ನಡೆದುಕೊಂಡ ರೀತಿ ಸರಿಯಲ್ಲ ಎಂದರು.
ವಿದೇಶಿ ಪ್ರತಿನಿಧಿಗಳು ಮತ್ತು ವಿಶ್ವ ಪ್ರತಿನಿಧಿಗಳ ಮುಂದೆ ನಮ್ಮ ದೇಶಕ್ಕೆ ಅವಮಾನ ತರುವ ಕೆಲಸವನ್ನು ಕಾರ್ಯಕರ್ತರು ಮಾಡದಂತೆ ಕೈ ನಾಯಕರು ತಡೆಯಬೇಕಿತ್ತು ಎಂದಿರುವ ಅಖಿಲೇಶ್​, ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಿಲುವಿನಿಂದ ಸಮಾಜವಾದಿ ಪಕ್ಷ ದೂರ ಉಳಿದಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಕಾಂಗ್ರೆಸ್​ ಕಾರ್ಯಕರ್ತರ 'ಕೈ'ಗೆ ಕೋಳ..

ಭಾರತ್ ಮಂಟಪದಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ಯೂತ್​ ಕಾಂಗ್ರೆಸ್ ಕಾರ್ಯಕರ್ತರನ್ನು ಶನಿವಾರ ಬೆಳಿಗ್ಗೆ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಂಧಿತ ವ್ಯಕ್ತಿಗಳನ್ನು ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ

ಫೆಬ್ರವರಿ 20, 2026ರಂದು (ಶುಕ್ರವಾರ) ದೆಹಲಿಯ ಭಾರತ್ ಮಂಟಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ' ನಡೆಯುತ್ತಿತ್ತು. ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು

ಮೈತ್ರಿಕೂಟದ ಮೇಲೆ ಏನು ಪರಿಣಾಮ..?

ಮುಂಬರುವ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಇಂಡಿಯಾ ಒಕ್ಕೂಟಕ್ಕೆ ಈ ಘಟನೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ಮಿತ್ರಪಕ್ಷಗಳ ನಡುವೆಯೇ ಸಮನ್ವಯದ ಕೊರತೆ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಇದು ಬಿಜೆಪಿ ವಿರುದ್ಧದ ಹೋರಾಟದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).