ಮದುವೆ ಮಂಟಪದಿಂದ ಪರೀಕ್ಷೆ ಬರೆಯಲು ಬಂದ ವಧು 
ದೇಶ

ಹಸೆಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ವಧು: ಬಿಹಾರದ ವಧುವಿನ ವಿಡಿಯೋ ವೈರಲ್; ನೆಟ್ಟಿಗರು ಹೇಳಿದ್ದೇನು ಗೊತ್ತೇ? Viral Video

ಪ್ರಮುಖ ಮುಖ್ಯಾಂಶಗಳು

  • ಮದುವೆ ಮಂಟಪದಿಂದ ಪರೀಕ್ಷೆ ಬರೆಯಲು ಬಂದ ವಧು
  • ಪರೀಕ್ಷಾ ಕೇಂದ್ರಕ್ಕೆ ಬಂದು ನಿಂತ ಅಲಂಕೃತ ಕಾರು
  • ಇದು ಬಾಲ್ಯವಿವಾಹ ಇರಬಹುದು ಎದ ನೆಟ್ಟಿಗರು
ಶೇರಘಾಟಿ (ಬಿಹಾರ): ಮದುವೆ ಅಂದಮೇಲೆ ಸಂಭ್ರಮ, ಸಡಗರ, ನೆಂಟರಿಷ್ಟರ ಗದ್ದಲ ಇರುವುದು ಸಹಜ. ಆದರೆ ಬಿಹಾರದ ಶೇರಘಾಟಿಯಲ್ಲಿ ನಡೆದ ಈ ಘಟನೆ ಮಾತ್ರ ಸಾಮಾಜಿಕ ಮಾದ್ಯಮದಲ್ಲಿ ಸಖತ್​ ವೈರಲ್​ (Viral Video) ಆಗುತ್ತಿದೆ. ಹಸೆಮಣೆಯಿಂದ ಕೆಳಗಿಳಿದ ವಧುವೊಬ್ಬಳು, ಮದುವೆಯ ಸೀರೆಯಲ್ಲಿಯೇ ನೇರವಾಗಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ.

ಪರೀಕ್ಷಾ ಕೇಂದ್ರದ ಮುಂದೆ ಅಲಂಕೃತ ಕಾರು

ಶೇರಘಾಟಿಯ ಎಸ್‌ಎಂಎಸ್‌ಜಿ (SMSG) ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಬುಧವಾರ (ಫೆ.25) ಒಂದು ವಿಚಿತ್ರ ದೃಶ್ಯ ಕಂಡುಬಂದಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಲುಗಟ್ಟಿ ನಿಂತಿರುವಾಗ, ಹೂವುಗಳಿಂದ ಅಲಂಕರಿಸಲ್ಪಟ್ಟ ಬಿಳಿ ಬಣ್ಣದ ಕಾರೊಂದು ಅಲ್ಲಿ ಬಂದು ನಿಂತಿತು. ಮದುವೆ ದಿಬ್ಬಣದ ಕಾರು ಕಾಲೇಜು ಗೇಟ್ ಮುಂದೆ ನಿಂತಿದ್ದನ್ನು ಕಂಡು ಅಲ್ಲಿದ್ದ ಸಿಆರ್‌ಪಿಎಫ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಕುತೂಹಲದಿಂದ ನೋಡತೊಡಗಿದರು.
ಕಾರಿನ ಮುಂಭಾಗದಲ್ಲಿ ಮದುವೆಯ ದಿರಿಸಿನಲ್ಲಿದ್ದ ವರ ಕುಳಿತಿದ್ದರೆ, ಹಿಂದಿನ ಸೀಟಿನಿಂದ ಕೆಂಪು ಸೀರೆ ತೊಟ್ಟು, ತಲೆಗೆ ಮುಸುಕು ಹಾಕಿಕೊಂಡ ವಧು ಕೈಯಲ್ಲಿ ಅಡ್ಮಿಟ್ ಕಾರ್ಡ್ ಹಿಡಿದು ಕೆಳಗಿಳಿದಳು. ತಕ್ಷಣವೇ ಆಕೆ ಪರೀಕ್ಷಾ ಕೇಂದ್ರದೊಳಗೆ ಹೆಜ್ಜೆ ಹಾಕಿದಳು. ಮದುವೆಯ ನಡುವೆಯೂ ಆಕೆ ಪರೀಕ್ಷೆಗೆ ಹಾಜರಾದ ರೀತಿ ಕಂಡು ಅಲ್ಲಿದ್ದವರು ಒಂದು ಕ್ಷಣ ದಂಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ. ಒಂದು ಕಡೆ ಆಕೆಯ ಓದಿನ ಬಗೆಗಿನ ಕಾಳಜಿಯನ್ನು ಶ್ಲಾಘಿಸುತ್ತಿದ್ದರೆ, ಇನ್ನೊಂದು ಕಡೆ ಗಂಭೀರವಾದ ಪ್ರಶ್ನೆಗಳು ಕೇಳಿಬರುತ್ತಿವೆ.
ವಧು ಪರೀಕ್ಷೆ ಬರೆಯುತ್ತಿರುವುದು 10ನೇ ತರಗತಿಯದ್ದು ಎಂಬ ವಿಷಯ ತಿಳಿಯುತ್ತಿದ್ದಂತೆ, ಇದು ಬಾಲ್ಯವಿವಾಹವಲ್ಲವೇ? ಎಂಬ ಪ್ರಶ್ನೆ ಬಲವಾಗಿ ಕೇಳಿಬರುತ್ತಿದೆ. ಪೋಷಕರು ಮತ್ತು ವರನನ್ನು ಇನ್ನೂ ಯಾಕೆ ಜೈಲಿಗೆ ಹಾಕಿಲ್ಲ?, ಹದಿನೆಂಟು ತುಂಬದ ಹುಡುಗಿಗೆ ಮದುವೆ ಮಾಡುವುದು ಕಾನೂನುಬಾಹಿರ ಅಲ್ಲವೇ? ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿ ಅಂದರೆ ಆಕೆಗೆ ಕನಿಷ್ಠ 15 ಅಥವಾ 16 ವರ್ಷ ವಯಸ್ಸಾಗಿರಬಹುದು, ಈ ವಯಸ್ಸಿನಲ್ಲಿ ಮದುವೆ ಮಾಡಿದ್ದು ಎಷ್ಟು ಸರಿ ಎಂಬುದು ಈಗ ದೊಡ್ಡ ಚರ್ಚೆಯಾಗಿದೆ.

ಶಿಕ್ಷಣದ ಮೇಲಿನ ಬದ್ಧತೆಯೋ ಅಥವಾ ಅನಿವಾರ್ಯತೆಯೋ?

ಕಳೆದ ಏಪ್ರಿಲ್ 2025 ರಲ್ಲೂ ಬಿಹಾರದ ಇಂತಹದ್ದೇ ಘಟನೆಯೊಂದು ವೈರಲ್ ಆಗಿತ್ತು. ಅಲ್ಲಿ ವಧುವೊಬ್ಬಳು ಮದುವೆಯ ಮರುದಿನವೇ ಪರೀಕ್ಷೆ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಆದರೆ ಪ್ರಸ್ತುತ ಘಟನೆಯಲ್ಲಿ ಹುಡುಗಿಯ ವಯಸ್ಸಿನ ಬಗ್ಗೆ ಸಂಶಯ ವ್ಯಕ್ತವಾಗಿರುವುದರಿಂದ, ಇದು ಶ್ಲಾಘೀಸಬೇಕಾದ ವಿಷಯವೋ ಅಥವಾ ಪೋಲೀಸ್ ಕೇಸ್ ದಾಖಲಿಸಬೇಕಾದ ವಿಚಾರವೋ ಎಂಬ ಗೊಂದಲ ಮೂಡಿದೆ.
ಒಟ್ಟಿನಲ್ಲಿ, ಮದುವೆಯ ಮಂಟಪದಿಂದ ಪರೀಕ್ಷಾ ಕೇಂದ್ರದವರೆಗಿನ ಈ ಪಯಣದ ವಿಡಿಯೋ ಈಗ ಸಖತ್ ಸೌಂಡ್ ಮಾಡುತ್ತಿದೆ. ಶಿಕ್ಷಣದ ಹಸಿವು ಮತ್ತು ಕೌಟುಂಬಿಕ ಒತ್ತಡಗಳ ನಡುವಿನ ಈ ಕತೆ ಈಗ ಇಂಟರ್ನೆಟ್ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದಂತು ನಿಜವಾಗಿದೆ,(ಏಜನ್ಸೀಸ್​).