ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 
ದೇಶ

ಮುಂದಿನ ತಿಂಗಳು ಬ್ರಿಕ್ಸ್ ಶೃಂಗಸಭೆ; 400 ಅಧಿಕಾರಿಗಳೊಂದಿಗೆ ಭಾರತಕ್ಕೆ ಭೇಟಿ ನೀಡಲಿರುವ ಚೀನಾ ಅಧ್ಯಕ್ಷ ಕ್ಸಿ ಜಿಮ್​ಪಿಂಗ್ | Xi Jinping

ನವದೆಹಲಿ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್(Xi Jinping) ಅವರು ಸುಮಾರು 400 ಅಧಿಕಾರಿಗಳ ನಿಯೋಗವನ್ನು ಕರೆತರಲಿದ್ದಾರೆ ಎಂದು ಶೃಂಗಸಭೆಯ ಸಿದ್ಧತೆಗಳ ಬಗ್ಗೆ ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸೆಪ್ಟೆಂಬರ್ 12 ಮತ್ತು 13ರಂದು ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಏಳು ವರ್ಷಗಳ ಬಳಿಕ ಇದು ಅವರ ಮೊದಲ ಭಾರತ ಭೇಟಿಯಾಗಿದೆ. 2019ರಲ್ಲಿ ಕ್ಸಿ ಭಾರತಕ್ಕೆ ಕೊನೆಯ ಬಾರಿ 200 ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.
ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೋಟೆಲ್ ವ್ಯವಸ್ಥೆ ಮತ್ತು ಭದ್ರತಾ ಶಿಷ್ಟಾಚಾರಗಳ ಕುರಿತು ಕೆಲಸ ಮಾಡುತ್ತಿದ್ದಾರೆ. ಆದರೆ ಕ್ಸಿ ಅವರ ಪ್ರಯಾಣ ಯೋಜನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ದ್ವಿಪಕ್ಷೀಯ ಸಭೆಯ ಸಾಧ್ಯತೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎನ್ನಲಾಗಿದೆ.
ಇನ್ನೂ ಬ್ರಿಕ್ಸ್ ಸಹಕಾರಕ್ಕೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಪ್ರಸ್ತುತ ಅಧ್ಯಕ್ಷರಾಗಿರುವ ಭಾರತವು ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಬೆಂಬಲ ನೀಡುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.
ವಿವಾದಿತ ಗಡಿಯಲ್ಲಿ ಹಲವು ವರ್ಷಗಳಿಂದ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಚೀನಾ ಪ್ರಯತ್ನಗಳ ಮಧ್ಯೆ ಈ ನಿರೀಕ್ಷಿತ ಪ್ರವಾಸ ಬಂದಿದೆ. ಇಂದು(ಆ. 25) ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬೀಜಿಂಗ್‌ನಲ್ಲಿ ಚೀನಾದ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಭೇಟಿ ಮಾಡಿ, ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ (ಏಜೆನ್ಸೀಸ್).