ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್(BRICS) ಶೃಂಗಸಭೆಯಲ್ಲಿ 2025ರ ಏಪ್ರಿಲ್ 22ರಂದು ಜರುಗಿದ ಪೆಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಗೆ ಕರೆ ನೀಡಿದೆ ಎಂದು ವರದಿಯಾಗಿದೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ನವದೆಹಲಿ ಘೋಷಣೆಗಳಲ್ಲಿ, ನಿರ್ಧಿಷ್ಟವಾಗಿ ಪೆಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ ಯಾವುದೇ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ಅಪರಾಧ ಮತ್ತು ಅಸಮರ್ಥನೀಯ ಎಂದು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಲಾಗಿದೆ.
ಭಯೋತ್ಪಾದನೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ನಾಗರಿಕತೆ ಅಥವಾ ಜನಾಂಗೀಯ ಗುಂಪಿನೊಂದಿಗೆ ಲಿಂಕ್ ಮಾಡಬಾರದು. ಅದರಲ್ಲಿ ಭಾಗಿಯಾದವರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದೆ.
ಮುಂದುವರೆದು, ಭಯೋತ್ಪಾದನೆಯನ್ನು ಎದುರಿಸುವಲ್ಲಿನ ದ್ವಿಮುಖ ನೀತಿಯನ್ನು ತಿರಸ್ಕರಿಸಿರುವ ಬ್ರಿಕ್ಸ್, ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೇಶಗಳು ಪ್ರಾಥಮಿಕ ಜವಾಬ್ದಾರಿಯನ್ನು ಹೊಂದಿವೆ. ಅದರ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಯೋತ್ಪಾದನೆಯನ್ನು ಎದುರಿಸುವಲ್ಲಿ ದ್ವಿಮುಖ ಮಾನದಂಡಗಳನ್ನು ತಿರಸ್ಕರಿಸಲು ನಾವು ಒತ್ತಾಯಿಸುತ್ತೇವೆ ಎಂದು ಹೇಳಲಾಗಿದೆ (ಏಜೆನ್ಸೀಸ್).