ಲಂಚವೇ ನಿಮ್ಮ ಉಸಿರು: ಸಿಎಂ ಸ್ಟಾಲಿನ್ ಮುಖಕ್ಕೆ ಹೊಡೆದಂತೆ ಸತ್ಯ ನುಡಿದ್ರಾ ವಿಜಯ್? ತಮಿಳುನಾಡಿನಲ್ಲಿ ಶುರುವಾಯ್ತು ಬಿರುಗಾಳಿ!
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ನಟ ವಿಜಯ್(Thalapathy Vijay) ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಧರ್ಮಯುದ್ಧ ಸಾರಿದ್ದಾರೆ.
ಈ ಬಗ್ಗೆ ವೆಲ್ಲೂರಿನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ವಿಜಯ್, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ಹಿಂದೆಂದೂ ಕಾಣದ ರೀತಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಕಲಿ ಮಾಡೆಲ್ ಸರ್ಕಾರ
ಇಂದು ತಮಿಳುನಾಡಿನಲ್ಲಿರುವುದು ಒಂದು ನಕಲಿ ಮಾಡೆಲ್ ಸರ್ಕಾರವಾಗಿದೆ. ಇದೊಂದು ಸ್ಟ್ಯಾಂಡ್ ಅಪ್ ಕಾಮಿಡಿ ಸರ್ಕಾರ ಎಂದು ನಾನು ಕರೆಯುತ್ತೇನೆ ಎಂದು ಲೇವಡಿ ಮಾಡಿದ್ಧಾರೆ. ಅಲ್ಲದೆ, ಸ್ಟಾಲಿನ್ರ ಎಲ್ಲರೂ ನನ್ನ ಸ್ನೇಹಿತರು ಎಂಬ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. ಸ್ಟಾಲಿನ್ ಸರ್ ಎಲ್ಲರೂ ನನ್ನ ಸ್ನೇಹಿತರು ಎನ್ನುತ್ತಾರೆ. ಆದರೆ ಅಸಲಿಯತ್ತೆಂದರೆ, ಲಂಚ, ಭ್ರಷ್ಟಾಚಾರ ಮತ್ತು ರಾಜಕೀಯ ಲಾಭ ಮಾತ್ರ ನಿಮ್ಮ ನಿಜವಾದ ಸ್ನೇಹಿತರು. ಜನರಿಗಾಗಿ ನೀವು ಮಾಡುತ್ತಿರುವುದು ಏನೂ ಇಲ್ಲ ಎಂದು ಗುಡುಗಿದ್ದಾರೆ.
ಸ್ಟಾಲಿನ್ ಆಪರೇಟಿಂಗ್ ಪ್ರೊಸೀಜರ್
ಸೇಲಂ ಱಲಿಯಲ್ಲಿ ಮಾತನಾಡುತ್ತಾ, ಸರ್ಕಾರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ವಿಜಯ್, ಸ್ಟಾಲಿನ್ ಆಪರೇಟಿಂಗ್ ಪ್ರೊಸೀಜರ್ ಎಂದು ಮರುನಾಮಕರಣ ಮಾಡಿದ್ದಾರೆ. ತನ್ನ ಪಕ್ಷದ ಕಾರ್ಯಕ್ರಮಗಳಿಗೆ ಸರ್ಕಾರ ಅನಗತ್ಯ ಅಡೆತಡೆಗಳನ್ನು ಒಡ್ಡುತ್ತಿದೆ ಮತ್ತು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ವಿಜಯ್ ಆರೋಪಿಸಿದ್ದಾರೆ.
ನಮ್ಮ ಮತ ಮಾರಾಟಕ್ಕಿಲ್ಲ
ಚುನಾವಣೆ ವೇಳೆ ಹಣ ಹಂಚುವ ಸಂಸ್ಕೃತಿಯ ಬಗ್ಗೆ ಜನರನ್ನು ಎಚ್ಚರಿಸಿದ ವಿಜಯ್, ಡಿಎಂಕೆ ನೀಡುವ ಹಣವನ್ನು ಸಂತೋಷದಿಂದ ಸ್ವೀಕರಿಸಿ, ಆದರೆ ಮತ ಹಾಕುವಾಗ ಮಾತ್ರ ನಿಮ್ಮ ಹಕ್ಕು ಮಾರಾಟ ಮಾಡಬೇಡಿ. ನನ್ನ ಮತ ನನ್ನ ಹಕ್ಕು, ನಮ್ಮನ್ನು ಯಾರೂ ಕೊಳ್ಳಲು ಸಾಧ್ಯವಿಲ್ಲ ಎಂದು ಮತದಾರರಿಗೆ ಕರೆ ನೀಡಿದರು.
2026ರಲ್ಲಿ ನೇರ ಹಣಾಹಣಿ
ಮುಂಬರುವ ಚುನಾವಣೆಯನ್ನು ಚಮತ್ಕಾರದ ಚುನಾವಣೆ ಎಂದು ಕರೆದ ವಿಜಯ್, ಇದು ವಿಜಯ್ ಮತ್ತು ಸ್ಟಾಲಿನ್ ನಡುವಿನ ನೇರ ಹೋರಾಟ. ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು. ಡಿಎಂಕೆ ಎಂಬ ದುಷ್ಟ ಶಕ್ತಿಯನ್ನು ಸೋಲಿಸಲು ನಾವು ಸಿದ್ಧರಿದ್ದೇವೆ. ನಮ್ಮ ಚಿಹ್ನೆಯಾದ ವಿಸಿಲ್ ಊದುವ ಮೂಲಕ ಕ್ರಾಂತಿ ಮಾಡಲಿದ್ದೇವೆ ಎಂದು ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.
ಬೆನ್ನಿಗೆ ಬಿದ್ದ ವಿವಾದಗಳು
ಕರೂರ್ ಕಾಲ್ತುಳಿತದ ಘಟನೆ ಮತ್ತು ವಿಜಯ್ ಅವರ ತಡವಾದ ಆಗಮನದ ಬಗ್ಗೆ ಡಿಎಂಕೆ ನಾಯಕರು ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದ ವಿಜಯ್, ನೀವು ತಪ್ಪುಗಳನ್ನು ಮಾಡಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ನಿಮ್ಮ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಹೇಳಿಕೆಗಳು ತಮಿಳುನಾಡಿನ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಘರ್ಷಕ್ಕೆ ನಾಂದಿ ಹಾಡಿವೆ,(ಏಜೆನ್ಸೀಸ್).