ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ 
ದೇಶ

ಉದ್ಯಮಿ ಗೌತಮ್ ಅದಾನಿಗೆ ಬಿಗ್ ರಿಲೀಫ್​: ಲಂಚ ಆರೋಪ ಪ್ರಕರಣವನ್ನು ವಜಾಗೊಳಿಸಿದ ಅಮೆರಿಕದ ಫೆಡರಲ್ ನ್ಯಾಯಾಲಯ | Gautam Adani

ನ್ಯೂಯಾರ್ಕ್​: ಸೌರ ವಿದ್ಯುತ್​ ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ(Gautam Adani) ಸೇರಿ ಕಂಪನಿಯ ಹಲವರ ವಿರುದ್ಧ ಹೂಡಲಾಗಿದ್ದ ಬಹುಕೋಟಿ ರೂಪಾಯಿ ವಂಚನೆ ಮತ್ತು ಲಂಚದ ಆರೋಪದ ಪ್ರಕರಣಗಳನ್ನು ಸೋಮವಾರ(ಆ. 10) ಅಮೆರಿಕದ ಫೆಡರಲ್ ನ್ಯಾಯಾಲಯ ವಜಾಗೊಳಿಸಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು ಕೆಲವು ತಿಂಗಳ ಹಿಂದೆ ಗೌತಮ್ ಅದಾನಿ ಇತರ ಆರೋಪಿಗಳ ಮೇಲಿದ್ದ ಕ್ರಿಮಿನಲ್ ಆರೋಪಗಳನ್ನು ಕೈಬಿಡುವುದಾಗಿ ಘೋಷಿಸಿತ್ತು. ಈ ಸಂಬಂಧ ಫೆಡರಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜು. 28ರೆಂದು ಅದರ ವಿಚಾರಣೆ ನಡೆಸಿದ್ದ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ನ್ಯಾಯಾಧೀಶ ನಿಕೋಲಸ್ ಜಿ. ಗರೂಫಿಸ್, ಎಂಟು ಆರೋಪಿಗಳ ವಿರುದ್ಧದ ಆರೋಪಗಳನ್ನು ವಜಾಗೊಳಿಸಲು ವಿವರವಾದ ಕಾರಣಗಳನ್ನು ನೀಡಲು ಇಲಾಖೆಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಸೋಮವಾರ ಮತ್ತೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು, ಆರೋಪಪಟ್ಟಿಗಳನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಂಗ ಇಲಾಖೆಯು ಸಲ್ಲಿಸಿದ್ದ ರೂಲ್ 48(ಎ) ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ನಿಕೋಲಸ್ ಗಾರೌಫಿಸ್, ಸರ್ಕಾರವು ಈ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದೇಕೆ? ಎಂಬುದರ ಕುರಿತು ಪ್ರಾಸಿಕ್ಯೂಟರ್‌ಗಳಿಂದ ಹೆಚ್ಚಿನ ವಿವರಣೆಗಳನ್ನು ಪಡೆದ ಬಳಿಕ ಮೊಕದ್ದಮೆಯನ್ನು ಶಾಶ್ವತವಾಗಿ ವಜಾಗೊಳಿಸಲು ಅನುಮೋದಿಸಿದರು.

ಏನಿದು ಪ್ರಕರಣ?

ನವೆಂಬರ್ 2024ರಲ್ಲಿ ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿಯು ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಭಾರತದಲ್ಲಿ ಸೋಲಾರ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ (ಅಂದಾಜು 2100 ಕೋಟಿ ರೂ.) ಲಂಚ ನೀಡಲು ಅದಾನಿ ಗ್ರೂಪ್ ಸಂಚು ರೂಪಿಸಿತ್ತು ಮತ್ತು ಈ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಂಚಿಸಿದೆ ಎಂದು ಅಮೆರಿಕ ಆರೋಪಿಸಿತ್ತು.
ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ಮೊದಲಿನಿಂದಲೂ ಸಾರಾಸಗಟಾಗಿ ನಿರಾಕರಿಸುತ್ತಲೇ ಬಂದಿತ್ತು. ಆರೋಪಿಗಳು ಯಾರೂ ಅಮೆರಿಕದಲ್ಲಿ ಇರದ ಕಾರಣ ಮತ್ತು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಿಮಿನಲ್ ತನಿಖೆಯು ಸದ್ಯಕ್ಕೆ ಸ್ಥಗಿತಗೊಂಡಿತ್ತು.

ತೀರ್ಪು ಸ್ವಾಗತಿಸಿದ ಗೌತಮ್ ಅದಾನಿ

ಇನ್ನೂ ಅಮೆರಿಕದ ನ್ಯಾಯಾಲಯವೂ ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವ ತೀರ್ಪು ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಗೌತಮ್ ಅದಾನಿ, ತೀರ್ಪನ್ನು ಘನತೆಯಿಂದ ಸ್ವಾಗತಿಸುವುದಾಗಿ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಆಳವಾದ ಗೌರವವನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಈ ಸವಾಲಿನ ಅವಧಿಯುದ್ದಕ್ಕೂ, ಸತ್ಯ, ನ್ಯಾಯಸಮ್ಮತತೆ ಮತ್ತು ಕಾನೂನಿನ ಆಳ್ವಿಕೆಯ ಮೇಲಿನ ನಮ್ಮ ನಂಬಿಕೆ ಅಚಲವಾಗಿತ್ತು. ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಮತ್ತು ನ್ಯಾಯವನ್ನು ಒದಗಿಸುವ ಭಾರತದ ಸಾಮರ್ಥ್ಯದ ಮೇಲೆ ಎಂದಿಗೂ ನಂಬಿಕೆ ಕಳೆದುಕೊಳ್ಳದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).