ಡಿಜಿಟಲ್​ ಅರೆಸ್ಟ್ 
ದೇಶ

ಡಿಜಿಟಲ್​ ಅರೆಸ್ಟ್​ ಹಾವಳಿಗೆ ಬ್ರೇಕ್​!

| ಸತೀಶ್ ವೆಂಕಟಸುಬ್ಬು

ನವದೆಹಲಿ: ಭಾರತದಲ್ಲಿ ಸ್ಮಾರ್ಟ್​ಫೋನ್ ಬಳಕೆದಾರರ ಸಂಖ್ಯೆ 100 ಕೋಟಿಗೂ ಅಧಿಕವಾಗಿದ್ದು ವಾಟ್ಸ್​ಆಪ್, ಟೆಲಿಗ್ರಾಮ್ ಮತ್ತು ಸಿಗ್ನಲ್​ನಂತಹ ಆಪ್​ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸೈಬರ್ ಅಪರಾಧಗಳೂ ಹೊಸ ರೂಪ ಪಡೆದುಕೊಂಡಿವೆ. ವಿಶೇಷವಾಗಿ ಡಿಜಿಟಲ್ ಅರೆಸ್ಟ್, ಆನ್​ಲೈನ್ ವಂಚನೆಗಳು ಮತ್ತು ನಕಲಿ ಗುರುತಿನ ಮೂಲಕ ನಡೆಯುವ ಅಪರಾಧಗಳು ಹೆಚ್ಚಾಗಿವೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ, ಸಂಸತ್ತಿನಲ್ಲಿ, ವಿವಿಧ ರಾಜ್ಯಗಳ ಹೈಕೋರ್ಟ್​ಗಳಲ್ಲಿ ಮತ್ತು ಶಾಸಕಾಂಗ ಸಭೆಗಳಲ್ಲಿ ಅನೇಕ ಬಾರಿ ಚರ್ಚೆಗಳಾಗಿವೆ. 

ಈ ಹಿನ್ನೆಲೆಯಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ಹೊಸದಾಗಿ ಜಾರಿಗೆ ತಂದಿರುವ ‘ಟೆಲಿಕಮ್ಯುನಿಕೇಷನ್ಸ್ (ಟೆಲಿಕಾಂ ಸೈಬರ್ ಸೆಕ್ಯುರಿಟಿ) ರೂಲ್ಸ್ 2024’ ಅಡಿಯಲ್ಲಿ ಅನೇಕ ಕಠಿಣ ನಿಯಮಗಳನ್ನು ನ. 28ರಂದು ಪ್ರಕಟಿಸಲಾಗಿದೆ. ಪ್ರಸ್ತುತ ವ್ಯವಸ್ಥೆಯ ಲೋಪದೋಷಗಳೇನು, ಸಿಮ್ ಬೈಂಡಿಂಗ್ ಎಂದರೇನು, ಹೊಸ ನಿಯಮಗಳಲ್ಲಿ ಏನಿದೆ, ಇದು ನಮ್ಮ ದಿನನಿತ್ಯದ ಮೊಬೈಲ್ ಫೋನ್ ಬಳಕೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಇಲ್ಲಿ ಸರಳವಾಗಿ ಪ್ರಸ್ತುತಪಡಿಸಲಾಗಿದೆ.

ವಂಚಕರು, ವಿಶೇಷವಾಗಿ ವಿದೇಶಗಳಲ್ಲಿರುವ ವಂಚಕರು, ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಅಕ್ರಮವಾಗಿ ಪಡೆಯುತ್ತಾರೆ. ಆ ಸಂಖ್ಯೆಗಳಿಗೆ ಬರುವ ಒಟಿಪಿ ಬಳಸಿ ವಾಟ್ಸ್​ಆಪ್ ಖಾತೆ ತೆರೆಯುತ್ತಾರೆ. ನಂತರ ಆ ಸಿಮ್ ಕಾರ್ಡ್ ಎಸೆದುಬಿಡುತ್ತಾರೆ ಅಥವಾ ಸ್ವಿಚ್ ಆಫ್ ಮಾಡುತ್ತಾರೆ. ಆದರೆ ವಾಟ್ಸ್​ಆಪ್ ಖಾತೆ ಮಾತ್ರ ಸಕ್ರಿಯವಾಗಿರುತ್ತದೆ. ಇದನ್ನು ಬಳಸಿ ಅವರು ಭಾರತೀಯರಿಗೆ ಕರೆ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ. ಫೋನ್​ನಲ್ಲಿ ಸಿಮ್ ಕಾರ್ಡೆ ಇಲ್ಲದ ಕಾರಣ, ಲೊಕೇಶನ್ ಟ್ರಾ್ಯಕ್ ಮಾಡುವುದು ಅಥವಾ ಅಪರಾಧಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ಅಸಾಧ್ಯವಾಗುತ್ತದೆ. 

ಇನ್ನು ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧಗಳಲ್ಲಿ ವಂಚಕರು ವಾಟ್ಸ್​ಆಪ್ ಅಥವಾ ಸ್ಕೈಪ್ ಮೂಲಕ ವಿಡಿಯೋ ಕರೆ ಮಾಡುತ್ತಾರೆ. ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್​ನಲ್ಲಿ ಡ್ರಗ್ಸ್ ಇದೆ ಅಥವಾ ಅಕ್ರಮ ಹಣ ವರ್ಗಾವಣೆಗೆ ನಿಮ್ಮ ಆಧಾರ್ ಕಾರ್ಡ್ ಬಳಕೆಯಾಗಿದೆ ಎಂದು ಸುಳ್ಳು ಹೇಳಿ ಬೆದರಿಸಿ ನಿಮ್ಮನ್ನು ಆನ್​ಲೈನ್​ನಲ್ಲೇ ಬಂಧನದಲ್ಲಿ ಇಡುತ್ತಾರೆ. ಜೈಲಿಗೆ ಹೋಗುವುದನ್ನು ತಪ್ಪಿಸಲು ಹಣ ಕೊಡುವಂತೆ ಒತ್ತಾಯಿಸಿ ಲಕ್ಷಾಂತರ ರೂಪಾಯಿ ದೋಚುತ್ತಾರೆ.

ಸಿಮ್ ಬೈಂಡಿಂಗ್ ಎಂದರೇನು?

ನೀವು ಫೋನ್ ಪೇ, ಗೂಗಲ್ ಪೇ ಅಥವಾ ಭೀಮ್ಂತಹ ಯುಪಿಐ ಆಪ್​ಗಳನ್ನು ಬಳಸುತ್ತಿದ್ದೀರಾ? ಆ ಆಪ್​ಗಳು ಕೆಲಸ ಮಾಡಬೇಕಾದರೆ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಅದೇ ಮೊಬೈಲ್​ನಲ್ಲಿ ಇರಲೇಬೇಕು. ಒಮ್ಮೆ ನೀವು ಸಿಮ್ ತೆಗೆದರೆ, ಯುಪಿಐ ಆಪ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದನ್ನು ‘ಸಿಮ್ ಬೈಂಡಿಂಗ್’ ಎನ್ನುತ್ತಾರೆ. ಈ ತಂತ್ರಜ್ಞಾನವು ಕೇವಲ ಸಾಫ್ಟ್​ವೇರ್ ಆಧಾರಿತ ಪರಿಶೀಲನೆಯಲ್ಲ, ಇದು ಹಾರ್ಡ್​ವೇರ್ ಆಧಾರಿತ ಭದ್ರತಾ ಕ್ರಮ. ಉದಾಹರಣೆಗೆ, ಪ್ರತಿ ಸಿಮ್ ಕಾರ್ಡ್ ಅನನ್ಯವಾದ ಕ್ರಿಪ್ಟೋಗ್ರಾಫಿಕ್ ಕೀಗಳನ್ನು ಹೊಂದಿರುತ್ತದೆ. 

ನೀವು ಆಪ್ ಇನ್​ಸ್ಟಾಲ್ ಮಾಡಿದಾಗ, ಆಪ್ ಈ ಕೀಗಳನ್ನು ಓದಿ ತನ್ನ ಸರ್ವರ್ ಜತೆ ಜೋಡಿಸುತ್ತದೆ. ಅಂದರೆ, ನಿಮ್ಮ ಫೋನ್ ನಂಬರ್ ಕೇವಲ ಒಂದು ಸಂಖ್ಯೆಯಲ್ಲ, ಅದು ನಿಮ್ಮ ಭೌತಿಕ ಸಿಮ್ ಕಾರ್ಡ್​ಗೆ ಬೆಸೆದುಕೊಂಡಿರುವ ಒಂದು ಗುರುತು. ಈ ತಂತ್ರಜ್ಞಾನ ಹೊಸದೇನಲ್ಲ. ನಾವು ಬಳಸುವ ಯುಪಿಐ ಆಪ್​ಗಳಾದ ಗೂಗಲ್ ಪೇ, ಭೀಮ್ ಅಥವಾ ಬ್ಯಾಂಕಿಂಗ್ ಆಪ್​ಗಳು ಈಗಾಗಲೇ ಈ ತಂತ್ರಜ್ಞಾನವನ್ನು ಬಳಸುತ್ತಿವೆ. ನೀವು ಗಮನಿಸಿರಬಹುದು, ನಿಮ್ಮ ಫೋನ್​ನಲ್ಲಿ ಬ್ಯಾಂಕ್​ಗೆ ಲಿಂಕ್ ಆಗಿರುವ ಸಿಮ್ ಇಲ್ಲದಿದ್ದರೆ, ನೀವು ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದೇ ಮಾದರಿಯ ಭದ್ರತೆಯನ್ನು ಈಗ ಈ ನಿಯಮಗಳ ಪ್ರಕಾರ ವಾಟ್ಸ್​ಆಪ್ ಮತ್ತು ಟೆಲಿಗ್ರಾಮ್ಳಿಗೂ ವಿಸ್ತರಿಸಲಾಗುತ್ತಿದೆ.

ಅಪಾಯದಿಂದ ರಕ್ಷಣೆ

ಆರಂಭದಲ್ಲಿ ಸಿಮ್ ಬೈಂಡಿಂಗ್ ಮತ್ತು ಪದೇ ಪದೇ ಲಾಗಿನ್ ಮಾಡುವುದು ಕಿರಿಕಿರಿ ಅನ್ನಿಸಬಹುದು. ಆದರೆ ಇದೇ ನಿಯಮಗಳು ಸಾಮಾನ್ಯ ಜನರನ್ನು ಡಿಜಿಟಲ್ ಅರೆಸ್ಟ್, ಸಿಮ್​ಸ್ವಾಪ್, ಸಿಮ್ ಕ್ಲೋನಿಂಗ್, ವಾಟ್ಸ್​ಆಪ್ ಸೆಕ್ಸ್​ಟಾರ್ಶನ್, ವಾಟ್ಸ್​ಆಪ್/ಟೆಲಿಗ್ರಾಂ ಹೈಜಾಕ್/ಹ್ಯಾಕಿಂಗ್ ಮುಂತಾದ ಸೈಬರ್ ಅಪರಾಧಗಳಿಂದ ಕಾಪಾಡುತ್ತವೆ. ಇದು ಇಡೀ ದೇಶದ ಡಿಜಿಟಲ್ ಸಂವಹನವನ್ನು ಮತ್ತೊಂದು ಮಟ್ಟದ ಸುರಕ್ಷತೆಯ ಕಡೆಗೆ ಒಯ್ಯುವ ದೊಡ್ಡ ಹೆಜ್ಜೆ. ಬ್ಯಾಂಕಿಂಗ್ ಆಪ್​ಗಳಂತೆ ವಾಟ್ಸ್​ಆಪ್ ಕೂಡ ಸುರಕ್ಷಿತವಾಗಲಿ ಎಂಬುದು ಕೇಂದ್ರ ಸರ್ಕಾರದ ಆಶಯ. ಆದರೆ, ಇದರಿಂದ ಸಾಮಾನ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ಅನನುಕೂಲ ಖಂಡಿತ.

ಜನರ ಮೇಲೇನು ಪರಿಣಾಮ?

ಈ ನಿಯಮಗಳಿಂದ ನಮ್ಮ ದಿನನಿತ್ಯದ ಜೀವನ ದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು.

1. ಮಲ್ಟಿಪಲ್ ಡಿವೈಸ್ ಬಳಕೆ: ಕೆಲವರು ಒಂದೇ ವಾಟ್ಸ್​ಆಪ್ ಖಾತೆಯನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್ ಎರಡರಲ್ಲೂ ಬಳಸುತ್ತಾರೆ. ಟ್ಯಾಬ್ಲೆಟ್​ನಲ್ಲಿ ಸಿಮ್ ಇಲ್ಲದಿದ್ದರೂ ವೈಫೈ ಮೂಲಕ ವಾಟ್ಸ್ ಆಪ್ ಬಳಸುತ್ತಿದ್ದರು. ಇನ್ನು ಮುಂದೆ ಅದು ಕಷ್ಟ.

2. ವಿದೇಶ ಪ್ರಯಾಣ: ನೀವು ವಿದೇಶಕ್ಕೆ ಹೋದಾಗ ಭಾರತದ ಸಿಮ್ ತೆಗೆದು, ಆ ದೇಶದ ಸಿಮ್ ಹಾಕುತ್ತೀರಿ. ಆಗ ನಿಮ್ಮ ಹಳೆಯ ವಾಟ್ಸ್​ಆಪ್ ನಂಬರ್ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಇದು ಪ್ರವಾಸಿಗರಿಗೆ ದೊಡ್ಡ ತಲೆನೋವಾಗಲಿದೆ.

3. ಆಫೀಸ್ ಕೆಲಸ: ಆಫೀಸ್​ನಲ್ಲಿ ಕಂಪ್ಯೂಟರ್​ನಲ್ಲಿ ವಾಟ್ಸ್​ಆಪ್ ವೆಬ್ ಬಳಸುವವರು ದಿನಕ್ಕೆ ಕನಿಷ್ಠ 2-3 ಬಾರಿಯಾದರೂ ಲಾಗಿನ್ ಆಗಬೇಕಾಗುತ್ತದೆ. ಇದು ಕಿರಿಕಿರಿ ಉಂಟುಮಾಡಬಹುದು.

4. ಸಿಮ್ ಕಾರ್ಡ್ ಜಾಗ್ರತೆ: ಇನ್ನು ಮುಂದೆ ಸಿಮ್ ಕಾರ್ಡ್ ಕೇವಲ ಕರೆ ಮಾಡಲು ಇರುವ ಸಾಧನವಲ್ಲ, ಅದು ನಿಮ್ಮ ‘ಡಿಜಿಟಲ್ ಕೀ’ ಇದ್ದಂತೆ. ನಿಮ್ಮ ಸಿಮ್ ಕಾರ್ಡ್/ಫೋನ್ ಕಳೆದುಹೋದರೆ ತಕ್ಷಣವೇ ಬ್ಲಾಕ್ ಮಾಡಿಸಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ವಾಟ್ಸ್​ಆಪ್ ಮತ್ತು ಬ್ಯಾಂಕ್ ಖಾತೆಗಳೆರಡೂ ಅಪಾಯಕ್ಕೆ ಸಿಲುಕಬಹುದು.

ಪರ-ವಿರೋಧ ಪ್ರತಿಕ್ರಿಯೆ

ಜಿಯೋ, ಏರ್​ಟೆಲ್ ಮತ್ತು ವೋಡಾಫೋನ್ ಪ್ರತಿನಿಧಿಸುವ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇದನ್ನು ಸ್ವಾಗತಿಸಿದೆ. ಆದರೆ ಫೇಸ್​ಬುಕ್, ವಾಟ್ಸ್​ಆಪ್ ಮಾಲೀಕರಾದ ಗೂಗಲ್, ಮೆಟಾದಂತಹ ಕಂಪನಿಗಳನ್ನು ಪ್ರತಿನಿಧಿಸುವ ‘ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ’, ಈ ನಿಯಮಗಳ ವ್ಯಾಪ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸೈಬರ್ ಕಾನೂನು ತಜ್ಞರು ಮತ್ತು ಡಿಜಿಟಲ್ ಹಕ್ಕುಗಳ ಹೋರಾಟಗಾರರು, ಈ ನಿಯಮಗಳು ಸರ್ಕಾರದ ಕಣ್ಗಾವಲನ್ನು ಹೆಚ್ಚಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಇದು ಮುಂದೆ ಕೇವಲ ಮೆಸೇಜಿಂಗ್ ಆಪ್​ಗಳಲ್ಲದೆ, ಇ-ಕಾಮರ್ಸ್, ಫಿನ್​ಟೆಕ್ ಮತ್ತು ಇತರ ಡಿಜಿಟಲ್ ಪ್ಲಾಟ್​ಫಾರ್ಮ್​​ಗಳನ್ನೂ ಒಳಗೊಳ್ಳುವ ಸಾಧ್ಯತೆಯಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಲು ಭಾರಿ ಪ್ರಮಾಣದ ತಾಂತ್ರಿಕ ಬದಲಾವಣೆಗಳು ಮತ್ತು ಹೂಡಿಕೆಯ ಅಗತ್ಯವಿದೆ. ಮುಂದಿನ 3 ತಿಂಗಳಲ್ಲಿ ವಾಟ್ಸ್​ಆಪ್, ಟೆಲಿಗ್ರಾಮ್ ಮುಂತಾದ ಮೆಸೇಜಿಂಗ್ ಆಪ್​ಗಳು ಈ ನಿಯಮಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ನಾಗರಿಕರಾಗಿ, ಈ ಸುರಕ್ಷತಾ ಕ್ರಮಗಳಿಗೆ ಸಹಕರಿಸುವುದು ಮತ್ತು ಜಾಗರೂಕರಾಗಿರುವುದು ನಮ್ಮ ಜವಾಬ್ದಾರಿ.

ಹೊಸ ನಿಯಮಗಳ ಪ್ರಮುಖ ಅಂಶಗಳು

ಕೇಂದ್ರ ದೂರಸಂಪರ್ಕ ಇಲಾಖೆಯು ವಾಟ್ಸ್​ಆಪ್, ಟೆಲಿಗ್ರಾಮ್ಂತಹ ಒಟಿಟಿ ಮೆಸೇಜಿಂಗ್ ಆಪ್​ಗಳಿಗೆ ಒಂದು ಖಡಕ್ ಆದೇಶ ನೀಡಿದೆ. ಇದರ ಪ್ರಕಾರ, ಇನ್ನು ಮುಂದೆ ಈ ಆಪ್​ಗಳು ಕೆಲಸ ಮಾಡಬೇಕಾದರೆ ನಿಮ್ಮ ಫೋನ್​ನಲ್ಲಿ ಸಕ್ರಿಯವಾದ ಸಿಮ್ ಕಾರ್ಡ್ ಇರಲೇಬೇಕು. ಸಿಮ್ ಬೈಂಡಿಂಗ್ ತಂತ್ರಜ್ಞಾನವನ್ನು ಈಗ ವಾಟ್ಸ್​ಆಪ್ ಮತ್ತು ಟೆಲಿಗ್ರಾಮ್​ ಕಡ್ಡಾಯ ಮಾಡಲಾಗಿದೆ. ಇನ್ಮುಂದೆ ನೀವು ಯಾವ ನಂಬರ್​ನಿಂದ ವಾಟ್ಸ್​ಆಪ್ ಓಪನ್ ಮಾಡಿದ್ದೀರೋ, ಆ ಸಿಮ್ ಕಾರ್ಡ್ ಫೋನ್​ನಲ್ಲೇ ಇರಬೇಕು. ಸಿಮ್ ತೆಗೆದರೆ, ವಾಟ್ಸ್​ಆಪ್ ಬಂದ್ ಆಗುತ್ತದೆ. ಈ ಬದಲಾವಣೆಗಳನ್ನು ಜಾರಿಗೆ ತರಲು ಕಂಪನಿಗಳಿಗೆ ಸರ್ಕಾರ 90 ದಿನಗಳ ಗಡುವು ನೀಡಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ ಪ್ರಮುಖ ಬದಲಾವಣೆಗಳು ಇಂತಿವೆ.

1. ಬಳಕೆಗೆ ಸಿಮ್ ಕಡ್ಡಾಯ: ನೀವು ವಾಟ್ಸ್​ಆಪ್ ಖಾತೆ ತೆರೆದ ನಂತರ ಆ ಸಿಮ್ ಕಾರ್ಡನ್ನು ಮೊಬೈಲ್​ನಿಂದ ತೆಗೆಯುವಂತಿಲ್ಲ. ಸಿಮ್ ತೆಗೆದ ತಕ್ಷಣ ಆಪ್ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಹಳೆಯ ಫೋನ್​ನಲ್ಲಿ ಸಿಮ್ ಇಲ್ಲದೆ ವೈಫೈ ಮೂಲಕ ವಾಟ್ಸ್​ಆಪ್ ಬಳಸುವ ಅಭ್ಯಾಸಕ್ಕೆ ಇನ್ನು ಬ್ರೇಕ್ ಬೀಳಲಿದೆ.

2. ಸಿಮ್ ಬದಲಾವಣೆ: ನೀವು ಸಿಮ್ ಬದಲಾಯಿಸಿದರೆ, ವಾಟ್ಸ್​ಆಪ್ ತಾನಾಗಿಯೇ ಲಾಗ್​ಔಟ್ ಆಗಬಹುದು ಮತ್ತು ಹೊಸ ಸಿಮ್​ ಮರುನೋಂದಣಿ ಮಾಡಿಕೊಳ್ಳಲು ಕೇಳಬಹುದು.

3. ಲ್ಯಾಪ್​ಟಾಪ್/ಕಂಪ್ಯೂಟರ್​ನಲ್ಲಿ ಲಾಗೌಟ್: ನೀವು ಕಚೇರಿಯಲ್ಲಿ ವಾಟ್ಸ್​ಆಪ್ ವೆಬ್ ಬಳಸುತ್ತೀರಾ? ಇನ್ನು ಮುಂದೆ ಪ್ರತಿ 6 ಗಂಟೆಗಳಿಗೊಮ್ಮೆ ಅದು ಆಟೋಮ್ಯಾಟಿಕ್ ಆಗಿ ಲಾಗೌಟ್ ಆಗುತ್ತದೆ. ನೀವು ಮತ್ತೆ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿ ಲಾಗಿನ್ ಆಗಬೇಕಾಗುತ್ತದೆ.

4. ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಬಳಕೆ: ಸಾಮಾನ್ಯವಾಗಿ ವಿದೇಶಕ್ಕೆ ಹೋದಾಗ ಜನರು ಭಾರತದ ಸಿಮ್ ತೆಗೆದು, ಆ ದೇಶದ ಲೋಕಲ್ ಸಿಮ್ ಹಾಕುತ್ತಾರೆ. ಆದರೆ ವಾಟ್ಸ್​ಆಪ್ ಹಳೆಯ ಭಾರತದ ನಂಬರ್​ನಲ್ಲೇ ಬಳಸುತ್ತಾರೆ. ಇನ್ನು ಮುಂದೆ ವಿದೇಶದಲ್ಲಿ ವಾಟ್ಸ್​ಆಪ್ ಬಳಸಲು ಭಾರತದ ಸಿಮ್ ಕಾರ್ಡನ್ನು ಫೋನ್​ನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ರೋಮಿಂಗ್ ಸರ್ವಿಸ್ ಅಥವಾ ಡ್ಯುಯಲ್ ಸಿಮ್ ಫೋನ್ ಬಳಸಬೇಕಾಗುತ್ತದೆ.

5. ವಿದೇಶದಿಂದ ವಂಚನೆಗೆ ಕಡಿವಾಣ: ಸೈಬರ್ ವಂಚಕರು ಭಾರತೀಯ ಸಿಮ್ ಕಾರ್ಡ್​ಗಳನ್ನು ಬಳಸಿ ವಿದೇಶದಲ್ಲಿ ಕುಳಿತುಕೊಂಡು ವಂಚನೆ ಮಾಡುವುದನ್ನು ತಡೆಯಲು, ಸಿಮ್ ಇಲ್ಲದ ಡಿವೈಸ್​ಗಳಲ್ಲಿ ಆಪ್ ನಿಷೇಧಿಸಲಾಗುತ್ತದೆ.

6. ಟೆಲಿಕಾಂ ಕಂಪನಿಗಳ ಕರ್ತವ್ಯಗಳು: ಪ್ರತಿ ಕಂಪನಿಯೂ ಸೈಬರ್ ಭದ್ರತಾ ನೀತಿ ಅಳವಡಿಸಿಕೊಳ್ಳಬೇಕು. ಭದ್ರತಾ ಉಲ್ಲಂಘನೆ ಘಟನೆಗಳನ್ನು 6 ಗಂಟೆಗಳೊಳಗೆ ಕಡ್ಡಾಯವಾಗಿ ವರದಿ ಮಾಡಬೇಕು. 24 ಗಂಟೆಗಳಲ್ಲಿ ಸರ್ಕಾರಕ್ಕೆ ದೀರ್ಘ ವರದಿ ಸಲ್ಲಿಸಬೇಕು. ಭಾರತೀಯ ನಾಗರಿಕರನ್ನು ಮುಖ್ಯ ಭದ್ರತಾ ಅಧಿಕಾರಿಯನ್ನಾಗಿ ನೇಮಿಸಬೇಕು.

7. ಐಎಂಇಐ ನೋಂದಣಿ ಕಡ್ಡಾಯ: ಭಾರತದಲ್ಲಿ ತಯಾರಾಗುವ ಪ್ರತಿಯೊಂದು ಫೋನ್​ನ ಮತ್ತು ಭಾರತ ದೊಳಗೆ ಆಮದಾಗುವ ಫೋನ್​ಗಳಿಗೂ (ಆಮದಿಗೂ ಮುಂಚೆ) ಐಎಂಇಐ ನೋಂದಣಿ ಕಡ್ಡಾಯ. ಡೂಪ್ಲಿಕೇಟ್ ಐಎಂಇಐ, ಕ್ಲೋನ್ ಐಎಂಇಐ ಬಳಸಿ ಸೇವೆ ಪಡೆಯಲು ಪ್ರಯತ್ನಿಸಿದರೆ, ಅದನ್ನು ನೆಟ್​ವರ್ಕ್​ನಲ್ಲಿ ತಕ್ಷಣ ಬ್ಯಾನ್ ಮಾಡಬೇಕು.

8. ದಂಡ ಮತ್ತು ಅನುಸರಣೆ: ಆಪ್ ಆಧಾರಿತ ಸಂವಹನ ಸೇವೆಗಳು 120 ದಿನಗಳ ಒಳಗೆ ಅನುಸರಣಾ ವರದಿಯನ್ನು ದೂರಸಂಪರ್ಕ ಇಲಾಖೆಗೆ ಸಲ್ಲಿಸಬೇಕು. ನಿಯಮಗಳನ್ನು ಪಾಲಿಸದಿದ್ದರೆ, ‘ದೂರಸಂಪರ್ಕ ಕಾಯ್ದೆ 2023’ರಡಿ ಭಾರಿ ದಂಡ ತೆರಬೇಕಾಗುತ್ತದೆ. ಸೇವೆ ನಿಷೇಧಿಸುವ ಕ್ರಮಗಳನ್ನೂ ಕೈಗೊಳ್ಳಬಹುದು.