Brazilian Model (ಬ್ರೆಜಿಲ್‌ನ ಮಾಡೆಲ್)
ದೆಹಲಿ: ಬುಧವಾರ ( ನ 5) ಪತ್ರಿಕಾಗೋಷ್ಠಿಯಲ್ಲಿ ಬ್ರೆಜಿಲ್‌ನ 'ಮಾಡೆಲ್' ಒಬ್ಬಳ ಫೋಟೋ ಪ್ರದರ್ಶಿಸಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದು ಹರಿಯಾಣದ ಮತದಾರರ ಪಟ್ಟಿಯಲ್ಲಿ 22 ಬಾರಿ ಕಾಣಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು.
ಆ ಫೋಟೋದಲ್ಲಿರುವ ಲಾರಿಸ್ಸಾ ಎನ್ನಲಾದ ಮಹಿಳೆ ಸಧ್ಯ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, ಆ ಚಿತ್ರವು ತನ್ನ ಆರಂಭಿಕ ಮಾಡೆಲಿಂಗ್ ದಿನಗಳ ಹಳೆಯ ಸ್ಟಾಕ್ ಫೋಟೋ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತದ ರಾಜಕಾರಣಕ್ಕು, ನನಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ನನ್ನ ಆ ಚಿತ್ರವನ್ನು ಬೇರೆ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ ಮತ್ತು ನನ್ನ ಒಪ್ಪಿಗೆ ಇಲ್ಲದೆ ಬಳಸಲಾಗಿದೆ. ನಾನು ಭಾರತಕ್ಕೆ ಹೋಗಿಲ್ಲ ಎಂದು ವೀಡಿಯೊದಲ್ಲಿ ಸ್ಪಷ್ಟಪಡಿಸಿದರು. ನಾನು ಬ್ರೆಜಿಲಿಯನ್ ಡಿಜಿಟಲ್ ಇನ್‌ಫ್ಲುಯೆನ್ಸರ್ ಮತ್ತು ಕೇಶ ವಿನ್ಯಾಸಕಿ ಎಂದು ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.
ತಾನು ಈಗ ಮಾಡೆಲ್ ಅಲ್ಲ ಎಂದಿರುವ ಲಾರಿಸ್ಸಾ, ರಾಹುಲ್ ಗಾಂಧಿ ಆಕೆಯ ಫೋಟೋವನ್ನು ಬಳಸಿದ ಬಳಿಕ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ, ಅದರಲ್ಲೂ ವಿಶೇಷವಾಗಿ ಭಾರತ ಮೂಲದ ಬಳಕೆದಾರರ ಪ್ರತಿಕ್ರಿಯೆಗಳೇ ತುಂಬಿ ತುಳುಕುತ್ತಿವೆ ಎಂದಿದ್ದಾರೆ.
ಲಾರಿಸ್ಸಾ, ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿರುವವರಿಗೆ ಧನ್ಯವಾಧಗಳನ್ನು ತಿಳಿಸುವುದರೊಂದಿಗೆ ನಾನು ಭಾರತಕ್ಕೆ ಬಂದಿಲ್ಲ, ನನ್ನ ಫೋಟೋವನ್ನು ಮಾತ್ರ ಬಳಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.