Bhuvaneshwari Singh 
ದೇಶ

ಶೌರ್ಯ ಪ್ರಶಸ್ತಿ ವಿಜೇತೆ ಈಗ ಲಂಚಕೋರೆ: ಎನ್‌ಕೌಂಟರ್ ಖ್ಯಾತಿಯ ಭುವನೇಶ್ವರಿ ಸಿಂಗ್ ಅರೆಸ್ಟ್!

ಗಾಜಿಯಾಬಾದ್: ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ಗಾಜಿಯಾಬಾದ್‌ನ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಭುವನೇಶ್ವರಿ ಸಿಂಗ್ ಈಗ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ. ಈ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿರುವುದು ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ.
ಸಾಹಿಬಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ 'ಪಿಂಕ್ ಬೂತ್' (Pink Booth) ಉಸ್ತುವಾರಿಯಾಗಿದ್ದ ಭುವನೇಶ್ವರಿ ಸಿಂಗ್, ವರದಕ್ಷಿಣೆ ಕಿರುಕುಳದ ಪ್ರಕರಣವೊಂದರಲ್ಲಿ ಆರೋಪಿಗಳ ಹೆಸರು ಕೈಬಿಡಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ದೂರುದಾರರಾದ ರಾಂಪಾಲ್ ಸೈನಿ ಅವರು ಮೀರತ್‌ನ ಭ್ರಷ್ಟಾಚಾರ ನಿರೋಧಕ ದಳಕ್ಕೆ (Anti-Corruption Squad) ದೂರು ನೀಡಿದ್ದರು.
ಮಂಗಳವಾರ ಸಂಜೆ ಭ್ರಷ್ಟಾಚಾರ ನಿರೋಧಕ ದಳವು, ರಾಂಪಾಲ್ ಅವರಿಂದ ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ಭುವನೇಶ್ವರಿ ಸಿಂಗ್ ಅವರನ್ನು ರೆಡ್-ಹ್ಯಾಂಡ್ ಆಗಿ ಹಿಡಿದಿದೆ. ಅಧಿಕಾರಿಗಳು ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಭುವನೇಶ್ವರಿ ಸಿಂಗ್, ಅಂತಿಮವಾಗಿ ಪೊಲೀಸರ ವಶಕ್ಕೆ ಸಿಲುಕಿದ್ದಾರೆ.

‘ಎನ್‌ಕೌಂಟರ್ ಲೀಡರ್’ ಟು ‘ಲಂಚಕೋರ’

ಕೇವಲ ನಾಲ್ಕು ತಿಂಗಳ ಹಿಂದಷ್ಟೇ (ಸೆಪ್ಟೆಂಬರ್ 2025) ಭುವನೇಶ್ವರಿ ಸಿಂಗ್ ಭಾರಿ ಸುದ್ದಿಯಲ್ಲಿದ್ದರು. ದರೋಡೆಕೋರರೊಂದಿಗಿನ ನಡೆದ ಎನ್‌ಕೌಂಟರ್‌ನಲ್ಲಿ ಧೈರ್ಯ ಪ್ರದರ್ಶಿಸಿ ಒಬ್ಬ ಅಪರಾಧಿಯ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದರು. ಗಾಯಗೊಂಡ ದರೋಡೆಕೋರನನ್ನು ತನ್ನ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸೇರಿಸಿದ ಅವರ ವಿಡಿಯೋ ವೈರಲ್ ಆಗಿತ್ತು. ಅಂದು ಅವರ ಶೌರ್ಯವನ್ನು ಮೆಚ್ಚಿ ಪೊಲೀಸ್ ಕಮಿಷನರ್ ಗೌರವಿಸಿದ್ದರು. ಆದರೆ, ಅಂದು 'ಲೇಡಿ ಸಿಂಘಮ್' ಎನಿಸಿಕೊಂಡವರು ಇಂದು ಕೇವಲ 45 ಸಾವಿರಕ್ಕಾಗಿ ಭ್ರಷ್ಟಾಚಾರದ ಬಲೆಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ವಿಶೇಷವೆಂದರೆ ಭುವನೇಶ್ವರಿ ಸಿಂಗ್ ಲಂಚ ಪ್ರಕರಣದಲ್ಲಿ ಸಿಕ್ಕಿಬೀಳುತ್ತಿರುವುದು ಇದು ಮೊದಲಲ್ಲ. 2022ರಲ್ಲಿಯೂ ಇವರು ಹನಿ-ಟ್ರ್ಯಾಪ್ ಮಾದರಿಯ ಸುಲಿಗೆ ಪ್ರಕರಣದಲ್ಲಿ ಕ್ರೈಂ ಬ್ರಾಂಚ್‌ನಿಂದ ಬಂಧಿಸಲ್ಪಟ್ಟಿದ್ದರು. ಇಷ್ಟಾದರೂ ಪುನಃ ಸೇವೆಯಲ್ಲಿ ಮುಂದುವರಿದು ಈ ರೀತಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಇಲಾಖೆಯ ಮೇಲೆ ಕಪ್ಪುಚುಕ್ಕೆಯಾಗಿದೆ,(ಏಜೆನ್ಸೀಸ್​).