ತನ್ನ ಪ್ರಿಯಕರನನ್ನು ಮತ್ತೊಬ್ಬ ಮಹಿಳೆಯೊಂದಿಗೆ ಹಿಡಿದ ನಂತರ, ಆತನ ಕಾರಿನ ಬಾನೆಟ್ ಮೇಲೆ ಕುಳಿತ ಪ್ರೇಯಸಿಯ ವೈರಲ್ ವಿಡಿಯೋ.
ಲಖನೌ: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ಆದ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಿಲ್ಲೊಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ಉತ್ತರ ಪ್ರದೇಶದ ಲಖನೌ ಹೈವೇನಲ್ಲಿ ನಡೆದಿರುವ ಘಟನೆಯೊಂದು ನೆಟ್ಟಿಗರನ್ನು ನಿಜಕ್ಕೂ ದಂಗು ಬಡಿಸಿದೆ.
ತನ್ನ ಬಾಯ್‌ಫ್ರೆಂಡ್ ಮತ್ತೊಬ್ಬಾಕೆಯ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಪ್ರೇಯಸಿ (Girlfriend on Car Bonnet) ನಡೆಸಿದ ಹೈಡ್ರಾಮಾದ ವಿಡಿಯೋ ಸೆರೆಯಾಗಿದ್ದು, ಈಗ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸೋಷಿಯಲ್ ಮೀಡಿಯಾನಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ವಿಡಿಯೋ ಲಖನೌನ ಹೆಸರಾಂತ ಜನೇಶ್ವರ್ ಮಿಶ್ರಾ ಪಾರ್ಕ್ ಬಳಿ ಸೆರೆಯಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಯುವತಿಯೊಬ್ಬರು ತನ್ನ ಪ್ರಿಯಕರ ಮತ್ತೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಸುತ್ತಾಡುವುದನ್ನು ಕಣ್ಣಾರೆ ಕಂಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಆಕೆಗೆ ಕೋಪ ನೆತ್ತಿಗೇರಿದೆ. ಇಬ್ಬರ ನಡುವೆ ರಸ್ತೆ ಮಧ್ಯದಲ್ಲೇ ವಾಗ್ವಾದ ಶುರುವಾಗಿದೆ.
ಆವೇಶದಲ್ಲಿದ್ದ ಆಕೆ, ಪ್ರಿಯಕರ ಕಾರು ತೆಗೆದುಕೊಂಡು ಹೋಗದಂತೆ ತಡೆಯಲು ಯತ್ನಿಸಿದ್ದಾಳೆ. ಆದರೆ ಚಾಲಕ ಮಾತ್ರ ಕಾರು ನಿಲ್ಲಿಸಲು ನಿರಾಕರಿಸಿದ್ದು, ಗಾಡಿ ಮೂವ್ ಆಗಲು ಶುರುವಾಗುತ್ತಿದ್ದಂತೆ ಆ ಯುವತಿ ದಿಢೀರ್ ಎಂದು ಕಾರಿನ ಬಾನೆಟ್ ಮೇಲೆ ಹತ್ತಿ ಮಲಗಿಕೊಂಡಿದ್ದಾಳೆ.
ನಾನು ಸಾಯೋದಿಲ್ಲ, ಕಾರು ನಿಲ್ಲಿಸು!
ಕಾರಿನ ಬಾನೆಟ್ ಮೇಲೆ ಮಲಗಿದ್ದ ಯುವತಿ ಚಾಲಕನ ವಿರುದ್ಧ ಕೂಗಾಡಲು ಆರಂಭಿಸಿದ್ದಾಳೆ. ಕೈಯಿಂದ ಕಾರಿನ ಮುಂಭಾಗವನ್ನು ಜೋರಾಗಿ ಬಡಿಯುತ್ತಾ, ನಾನು ಸಾಯುವುದಿಲ್ಲ. ನೀನು ಏನು ಬೇಕಾದರೂ ಮಾಡು, ಮೊದಲು ಕಾರು ನಿಲ್ಲಿಸು ಎಂದು ಅರಚಿಕೊಂಡಿದ್ದಾಳೆ.
ಯುವತಿ ಬಾನೆಟ್ ಮೇಲಿದ್ದರೂ ಚಾಲಕ ಮಾತ್ರ ಕಾರನ್ನು ನಿಲ್ಲಿಸದೆ, ಆರಂಭದಲ್ಲಿ ಸ್ವಲ್ಪ ನಿಧಾನವಾಗಿ ಚಲಾಯಿಸಿದ್ದಾನೆ. ಆದರೆ, ರಸ್ತೆಯಲ್ಲಿ ಜನ ಸೇರುತ್ತಿರುವುದನ್ನು ಕಂಡ ಆತ ಕಾರಿನ ವೇಗವನ್ನು ವಿಪರೀತ ಹೆಚ್ಚಿಸಿದ್ದಾನೆ. ಕಾರು ಸ್ಪೀಡ್ ಆಗುತ್ತಿದ್ದಂತೆ ಬಾನೆಟ್ ಮೇಲೆ ಬ್ಯಾಲೆನ್ಸ್ ಮಾಡಲಾಗದೆ ಆ ಯುವತಿ ಅಂತಿಮವಾಗಿ ರಸ್ತೆಯ ಮೇಲೆಯೇ ಉರುಳಿ ಬಿದ್ದಿದ್ದಾಳೆ. ಇಷ್ಟೆಲ್ಲಾ ರಾದ್ಧಾಂತ ಮಾಡಿದ ಆ ಚಾಲಕ ಅಲ್ಲಿಂದ ಕಾರು ಸಮೇತ ಪರಾರಿಯಾಗಿದ್ದಾನೆ.
ಪೊಲೀಸರ ಎಂಟ್ರಿ ಮತ್ತು ಕಾರಿನ ನಂಬರ್ ಪತ್ತೆ
ರಸ್ತೆ ಮಧ್ಯೆ ನಡೆದ ಈ ದೃಶ್ಯವನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಸಂತ್ರಸ್ತ ಯುವತಿ ಪರವಾಗಿ ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಪೊಲೀಸರು ಚಾಲಕನನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ, (ಏಜೆನ್ಸೀಸ್).