Child Death Case (ಚಿತ್ರ X) 
ದೇಶ

ಕಣ್ಣೂರಿನಲ್ಲಿ ಘೋರ ದುರಂತ: ಅನಸ್ತೇಶಿಯಾ ಕೊಟ್ಟ ಬೆನ್ನಲ್ಲೇ ಪ್ರಾಣಬಿಟ್ಟ 18 ತಿಂಗಳ ಮಗು! Child Death Case

ತಿರುವನಂತಪುರಂ: ಕೇರಳದ ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅರಿವಳಿಕೆ (Anaesthesia) ನೀಡಿದ ನಂತರ 18 ತಿಂಗಳ ಗಂಡು ಮಗುವೊಂದು ಪ್ರಜ್ಞೆ ತಪ್ಪಿ ಮೃತಪಟ್ಟಿರುವ ಘಟನೆ ನಡೆದಿದೆ. ಆದಾಗ್ಯೂ, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪಾಲಕರು ಗಂಭೀರ ಆರೋಪ ಮಾಡಿದ್ದು, ಸಂಬಂಧ ಪಟ್ಟ (Child Death Case) ಅಧಿಕಾರಿಗಳು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ಕಣ್ಣೂರಿನ ಎರಾಮಮ್-ಕುತ್ತೂರು ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರ ದೇವಾಂಶ್ ಶೌರ್ಯ ಸಾವನ್ನಪ್ಪಿದ ದುರ್ದೈವಿ. ಜುಲೈ 5 ರಂದು ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಿದ್ದು ತುಟಿಗೆ ಗಾಯವಾಗಿತ್ತು. ತಕ್ಷಣವೇ ಮಗುವನ್ನು ಮಠಮಂಗಲಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಅಲ್ಲಿಯ ವೈದ್ಯರು ಮಗುವಿನ ಗಾಯಕ್ಕೆ ಅರಿವಳಿಕೆ ನೀಡಿ ಹೊಲಿಗೆ ಹಾಕಿದ್ದರು. ಆದರೆ, ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ತಪ್ಪಿತ್ತು. ಇದರಿಂದ ಆಘಾತಗೊಂಡ ಪಾಲಕರು ಮಗುವನ್ನು ಕಣ್ಣೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.
ಆದಾಗ್ಯೂ, ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ವೈದ್ಯೆ ಅಂಜಲಿ ಪೊದುವಾಲ್ ಅವರ ಮೇಲೆ ಕುಟುಂಬ ಆರೋಪ ಹೊರಿಸಿದ್ದು, ಅವರ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ನಿರ್ವಹಿಸುತ್ತದೆ ಮತ್ತು ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಆರೋಪ ತಳ್ಳಿಹಾಕಿದ ವೈದ್ಯರ ತಂಡ

ಕೋಯಿಕ್ಕೋಡ್, ಕಣ್ಣೂರು, ತೋಡುಪುಳ, ಪಯ್ಯನೂರು ಮತ್ತು ವಡಕರದಲ್ಲಿ ಶಾಖೆಗಳನ್ನು ಹೊಂದಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆ, ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿತು.
ಆದಾಗ್ಯೂ, ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತ ಹೃದಯಘಾತ ಸಂಭವಿಸಿದ್ದು, ತಕ್ಷಣವೇ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಯಿತು ಮತ್ತು ನಂತರ ಕಣ್ಣೂರು ಆಸ್ಪತ್ರೆಗೆ ಸುಧಾರಿತ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಮಗುವಿನ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ಸೂಕ್ತ ಪ್ರಮಾಣದ ಅರಿವಳಿಕೆಯನ್ನು ನೀಡಲಾಗಿತ್ತು. ಯಾವುದೇ ಹಂತದಲ್ಲೂ ಡೋಸೇಜ್ ವ್ಯತ್ಯಾಸವಾಗಿಲ್ಲ ಎಂದು ಅದು ಸಮರ್ಥಿಸಿಕೊಂಡಿದೆ. ಆದಾಗ್ಯೂ, ಸೂಕ್ತ ಡೋಸೇಜ್ ಮತ್ತು ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡಿದ ಹೊರತಾಗಿಯೂ, ಕೆಲವು ಸಂದರ್ಭಗಳಲ್ಲಿ ಅರಿವಳಿಕೆ ನೀಡಿದ ನಂತರ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸಿ ಅನಿರೀಕ್ಷಿತ ತೊಡಕುಗಳು ಉಂಟಾಗಬಹುದು ಮಗುವಿನ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್​).