ನಾಲ್ಕು ಮರಿಗಳಿಗೆ ಜನ್ಮ ಕೊಟ್ಟ ಬೋಟ್ಸ್ವಾನ ಮೂಲದ ಎರಡೂವರೆ ವರ್ಷದ KOMG 3 ಚಿರತೆ.
ಭಾರತದ ನೆಲದಲ್ಲಿ ನಾಲ್ಕು ಆರೋಗ್ಯಕರ ಮರಿಗಳಿಗೆ ಜನ್ಮ.
ಭಾರತದಲ್ಲಿ ಬೋಟ್ವಾನ ಮೂಲದ ಚಿರತೆಗಳ ಸಂಖ್ಯೆ 62ಕ್ಕೆ ಏರಿಕೆ.
Cheetah brought from Botswana: ಪ್ರಾಜೆಕ್ಟ್ ಚೀತಾ ಅಡಿ ಬೋಟ್ಸ್ವಾನದಿಂದ ತರಲಾಗಿದ್ದ ಎರಡೂವರೆ ವರ್ಷದ KOMG 3 ಎಂಬ ಹೆಣ್ಣು ಚಿರತೆ ಭಾರತದ ನೆಲದಲ್ಲಿ ನಾಲ್ಕು ಆರೋಗ್ಯಕರ ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಮರಿ ಹಾಕಿದ ಮೊದಲ ಬೋಟ್ಸ್ವಾನ ಮೂಲದ ಚಿರತೆ ಇದಾಗಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಶುಕ್ರವಾರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬೋಟ್ಸ್ವಾನ ಮೂಲದ ಚಿರತೆ ನಾಲ್ಕು ಮರಿಗಳಿಗೆ ಜನ್ಮ ಕೊಟ್ಟಿರುವುದು 'ಪ್ರಾಜೆಕ್ಟ್ ಚೀತಾ' ಯೋಜನೆಯ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.
ಬೋಟ್ಸ್ವಾನ ಮೂಲದ ಎರಡೂವರೆ ವರ್ಷದ ಹೆಣ್ಣು ಚಿರತೆ KOMG 3 , ಭಾರತದ ಕಾಡಿನಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಇದೇ ಮೊದಲು. ಇದು ಪ್ರಾಜೆಕ್ಟ್ ಚೀತಾದ ಐತಿಹಾಸಿಕ ಕ್ಷಣ ಹಾಗೂ ಸಮರ್ಥ ಚಿರತೆ ಸಂತತಿಯನ್ನು ಪುನಃಸ್ಥಾಪಿಸುವ ಭಾರತದ ಪಯಣದಲ್ಲಿ ಹೆಮ್ಮೆಯ ಮೈಲಿಗಲ್ಲು ಎಂದು ಸಚಿವ ಭೂಪೇಂದರ್ ಯಾದವ್ ಬರೆದುಕೊಂಡಿದ್ದಾರೆ.
ಇಂತಹ ಬೆಳವಣಿಗೆಯು ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ. ಪರಿಸರದಲ್ಲಿ, ಪ್ರಾಣಿ ಪಕ್ಷಿಗಳ ಸಂಕುಲದಲ್ಲಿ ಇರಬೇಕಾದ ಬದ್ಧತೆಯನ್ನು ಅನಾವರಣಗೊಳಿಸುತ್ತದೆ. ಪ್ರಾಣಿಗಳ ಸಂರಕ್ಷಣೆಯು ತಾಳ್ಮೆ, ದೃಢತೆ ಹಾಗೂ ಸಾಮೂಹಿಕ ಪ್ರಯತ್ನದ ಪಯಣ
'ಈ ಮೈಲಿಗಲ್ಲಿನ ಸಾಧನೆಯ ಹಿಂದೆ ವ್ಯವಸ್ಥಾಪಕರು, ಪಶುವೈದ್ಯರು, ಮುಂಚೂಣಿ ಅರಣ್ಯ ಸಿಬ್ಬಂದಿ ಹಾಗೂ ಪ್ರಾಜೆಕ್ಟ್ ಚೀತಾದ ಯಶಸ್ಸಿಗಾಗಿ ದಣಿವರಿಯದೆ ಶ್ರಮಿಸುತ್ತಿರುವ ಪ್ರತಿಯೊಬ್ಬರ ಅಸಂಖ್ಯಾತ ಗಂಟೆಗಳ ಸಮರ್ಪಣೆ, ಬದ್ಧತೆ ಮತ್ತು ಕಠಿಣ ಪರಿಶ್ರಮವಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಈ ನಾಲ್ಕು ಮರಿಗಳ ಆಗಮನದೊಂದಿಗೆ ಬೋಟ್ಸ್ವಾನ ಮೂಲದ ಚಿರತೆಗಳ ಸಂಖ್ಯೆ 62ಕ್ಕೆ ಏರಿದೆ. ಅದರಲ್ಲಿ ಭಾರತದಲ್ಲೇ ಜನಿಸಿದ ಸಂಖ್ಯೆ 43 ಎನ್ನಲಾಗಿದೆ. KOMG 3 ಚಿರತೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕಾಡಿನಲ್ಲಿ ವಾಸವಾಗಿತ್ತು. ಇಲ್ಲಿನ ನೈಸರ್ಗಿಕ ಪರಿಸ್ಥಿಯಲ್ಲಿ ಮರಿಗೆ ಜನ್ಮ ಕೊಟ್ಟಿದೆ. 2022ರ ಪ್ರಾಜೆಕ್ಟ್ ಚೀತಾ ಪ್ರಾರಂಭವಾದಾಗಿನಿಂದ ಭಾರತದ ಕಾಡಿನಲ್ಲಿ ಬೋಟ್ಸ್ವಾನ ಮೂಲದ ಚಿರತೆ ಜನ್ಮ ಕೊಟ್ಟಿರುವುದು ಇದು ಎರಡನೇ ಬಾರಿಯಾಗಿದೆ.