- ಈಗಾಗಲೇ ಬ್ಯಾನ್ ಆಗಿರುವ ಅನಲಾಗ್ (ನಕಲಿ) ಪನ್ನೀರ್ ಉಣಬಡಿಸಿದ ಹೋಟೆಲ್ಗೆ ಶಾಕ್
- ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟ ಆಡಿದ ಥಾಣೆಯ ಹೋಟೆಲ್ ಲೈಸನ್ಸ್ ರದ್ದು
- ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಹೋಟೆಲ್ಗೆ ಕೋರ್ಟ್ ಛೀಮಾರಿ
ಮುಂಬೈ: ಈಗಾಗಲೇ ಬ್ಯಾನ್ ಆಗಿರುವ ಅನಲಾಗ್ (ನಕಲಿ) ಪನ್ನೀರ್ ಉಣಬಡಿಸಿ, ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟ ಆಡಿದ ಥಾಣೆಯ 'ಉಡುಪಿ ಸ್ವಾದ್' ಹೊಟೇಲ್‌ಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಎನ್ಡಿಟಿವಿ ವರದಿ ಪ್ರಕಾರ, ಹೋಟೆಲ್ನಲ್ಲಿ ನಕಲಿ ಪನ್ನೀರ್ ಬಳಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಬೆನ್ನಲ್ಲೇ ರೇಡ್ ಮಾಡಿದ ಎಫ್‌ಡಿಎ (FDA), ಹೋಟೆಲ್ನ ಲೈಸೆನ್ಸ್ ರದ್ದುಗೊಳಿಸಿತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಹೋಟೆಲ್ಗೆ ಇದೀಗ ಮಧ್ಯಂತರ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ. ಆದೇಶದಲ್ಲಿ, ಇಷ್ಟು ದಿನ ನೀವು ಜನರಿಗೆ ತಿನ್ನಿಸಿ, ನರಳುವಂತೆ ಮಾಡಿದ್ದೀರಾ! ಈಗ ಅದನ್ನು ನೀವೇ ಮೊದಲು ಅನುಭವಿಸಿ. ಇದು ಕಾವ್ಯಾತ್ಮಕ ನ್ಯಾಯ (Poetic Justice) ಎಂದು ಹೇಳಿದೆ.
ಕೋರ್ಟ್ ಕೇಳಿದ ಪ್ರಶ್ನೆಗಳಿವು
ಸುಧಾರಣಾ ನೋಟಿಸ್ ಕೊಡಬೇಕಿತ್ತು ಎಂಬ ಹೊಟೇಲ್ ಮಾಲೀಕರ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಅಸಲಿ ಪನ್ನೀರ್ ಬದಲು ನಕಲಿ ಅಥವಾ ಕೊಳೆತ ಆಹಾರ ನೀಡುವಾಗ ನೋಟಿಸ್ ಬೇಕಿತ್ತೇ? ನಿಮ್ಮ ಹೊಟೇಲ್ ಬೋರ್ಡ್‌ನಲ್ಲಿ ಮೊದಲೇ, 'ಇಲ್ಲಿ ಅಸಲಿ ಆಹಾರ ಸಿಗುವುದಿಲ್ಲ' ಎಂದು ಎಲ್ಲರಿಗೂ ಕಾಣುವಂತೆ ಹಾಕಬೇಕಿತ್ತು. ಗ್ರಾಹಕರು ಕೇಳಿದ್ದನ್ನು ಕೊಡುವುದು ಅವರ ಕರ್ತವ್ಯ. ತಪ್ಪೆಸಗಿದ ಈ ಹೊಟೇಲ್‌ಗೆ ದಂಡ ವಿಧಿಸಬೇಕು ಹಾಗೂ ಬಾಧಿತ ಗ್ರಾಹಕರು ನಷ್ಟ ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ (Consumer Court) ಮೊರೆ ಹೋಗಬೇಕು ಎಂದು ಪೀಠ ಅಭಿಪ್ರಾಯಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಎಫ್‌ಡಿಎಗೆ ಸೂಚಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಕಾಯ್ದಿರಿಸಿದೆ.
ಅಷ್ಟಕ್ಕೂ ಏನಿದು ಅನಲಾಗ್ ಪನ್ನೀರ್?
ಹಾಲಿನ ಕೆನೆಯಿಂದ ಮಾಡುವ ಬದಲಾಗಿ ಸಸ್ಯಜನ್ಯ ಎಣ್ಣೆ, ಪಿಷ್ಟ (starch) ಮತ್ತು ಇತರ ರಾಸಾಯನಿಕಗಳು, ಸುವಾಸನೆ ಬರಲು ಹಾಲಿನ ಪ್ರೋಟೀನ್ ಪೌಡರ್ ಬಳಸಿ ತಯಾರಿಸುವ ಕೃತಕ ಪನ್ನೀರ್ ಇದಾಗಿದೆ. ಅಸಲಿ ಪನ್ನೀರ್‌ಗೆ ಹೋಲಿಸಿದರೆ ಅನಲಾಗ್ ಪನ್ನೀರ್ ತಯಾರಿಕಾ ವೆಚ್ಚ ಶೇ.50ರಿಂದ 60ರಷ್ಟು ಕಡಿಮೆಯಿದೆ. ಹೆಚ್ಚಿನ ಲಾಭದ ಆಸೆಗೆ ಬಿದ್ದ ಕೆಲವು ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ತನ್ನ ಗ್ರಾಹಕರ ಗಮನಕ್ಕೆ ಬಾರದಂತೆ ಅಸಲಿ ಪನ್ನೀರ್ ಬದಲು ಈ ಅನಲಾಗ್ ಪನ್ನೀರ್ ಬಳಸಿ ಅಡುಗೆ ಮಾಡುತ್ತಿವೆ. ಪ್ರಸ್ತುತ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ಇದನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಈಗ ಬ್ಯಾನ್ ಮಾಡಲಾಗಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).