ಫ್ರಾಂಕ್ಫರ್ಟ್ನಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ.
ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ.
ಸುರಕ್ಷತಾ ತಪಾಸಣೆಗಾಗಿ ಐಸೋಲೇಷನ್ ಬೇಗೆ ಸ್ಥಳಾಂತರ
ಆಕಸ್ಮಿಕವಾಗಿ ಸ್ಕ್ವಾಕ್ -7500 ಎಚ್ಚರಿಕೆ ರವಾನಿಸುವ ಗುಂಡಿ ಒತ್ತಿದ ಪೈಲಟ್
ಫ್ರಾಂಕ್ಫರ್ಟ್ನಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಕೇಳಿಬಂದ ಹಿನ್ನೆಲೆ, ಭದ್ರತಾ ಕ್ರಮವಾಗಿ ಬುಧವಾರ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ.
ಬೋಯಿಂಗ್ 787-9 ವಿಮಾನದಿಂದ ನಿರ್ವಹಿಸಲ್ಪಡುತ್ತಿದ್ದ AI2030 ವಿಮಾನವು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಭದ್ರತಾ ತಪಾಸಣೆಗಾಗಿ ಅದನ್ನು ಐಸೋಲೇಶನ್ ಬೇ ಕೊಲ್ಲಿಗೆ ಸ್ಥಳಾಂತರಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ತುರ್ತು ಲ್ಯಾಂಡಿಂಗ್ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮಾಳವೀಯ ನಗರದ ಸಹಾಯಕ ಪೊಲೀಸ್ ಆಯುಕ್ತ ಶಿವ್ ದಯಾಳ್ ತಿಳಿಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಐಸೋಲೇಶನ್ ಬೇನಲ್ಲಿ ವಿಮಾನದ ತಪಾಸಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ವಿಮಾನವು ಮುಂಬೈ ಫ್ಲೈಟ್ ಇನ್ಫರ್ಮೇಷನ್ ರೀಜನ್ ವ್ಯಾಪ್ತಿಯಲ್ಲಿರುವಾಗ ಪೈಲಟ್ 'ಸ್ವಾಕ್ ಕೋಡ್ 7500' ಒತ್ತಿದರು. ಇದು ವಿಮಾನ ಅಪಹರಣ ಅಥವಾ ಕಾನೂನುಬಹಿರ ಹಸ್ತಕ್ಷೇಪವನ್ನು ಗುರುತಿಸಲ್ಪಟ್ಟ ಟ್ರಾನ್ಸ್ಪಾಂಡರ್ ಕೋಡ್ ಆಗಿದೆ. ಇದರ ಬೆನ್ನಲ್ಲೇ ಭದ್ರತಾ ದೃಷ್ಟಿ ಮೇರೆಗೆ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಯಿತು. ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ನಿಖರ ಸಂಖ್ಯೆ ತಕ್ಷಣಕ್ಕೆ ಲಭ್ಯವಾಗಿಲ್ಲ.
ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ, ಭದ್ರತಾ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಪ್ರಯಾಣಿಕರು ಹಾಗೂ ಪೈಲಟ್ಗಳನ್ನು ಹಂತ ಹಂತವಾಗಿ ಕೆಳಗಳಿಸಲಾಯಿತು. ಪ್ರಯಾಣಿಕರು ಮತ್ತು ಅವರ ಬ್ಯಾಗೇಜ್ಗಳನ್ನು ಕಟ್ಟುನಿಟ್ಟಾದ ಭದ್ರತಾ ತಪಾಸಣೆಗೆ ಒಳಪಡಿಸಲಾಗಿದೆ. ಬಾಂಬ್ ಬೆದರಿಕೆ ಕೇಳಿ ಬಂದಿರುವ ಹಿನ್ನೆಲೆ, ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ)ಯನ್ನು ಸಹ ಸನ್ನದ್ಧವಾಗಿ ಇರಿಸಲಾಗಿತ್ತು ಎನ್ನಲಾಗಿದೆ.
ಪೈಲಟ್ ಆಕಸ್ಮಿಕವಾಗಿ ಸ್ಕ್ವಾಕ್ -7500 ಎಚ್ಚರಿಕೆಯನ್ನು ರವಾನಿಸುವ ಗುಂಡಿಯನ್ನು ಒತ್ತಿದ ಕಾರಣ ಭದ್ರತಾ ಎಚ್ಚರಿಕೆ ಕ್ರಮವಾಗಿ ಜೈಪುರಕ್ಕೆ ತುರ್ತು ಲ್ಯಾಂಡ್ ಮಾಡಲಾಯಿತು. ಆದರೆ ಯಾವುದೇ ಬೆದರಿಕೆ ಕೇಳಿಬಂದಿಲ್ಲ ಎನ್ನಲಾಗಿದೆ.
ಆಗಸ್ಟ್ನಲ್ಲಿಯೂ ಸೌದಿ ಅರೇಬಿಯಾದ ದಮ್ಮಾಮ್ನಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಏಕೆಂದರೆ ವಿಮಾನದ ಶೌಚಾಲಯದಲ್ಲಿ ಬಾಂಬ್ ಎಂದು ಬರೆದಿರುವ ಟಿಶ್ಯೂ ಪೇಪರ್ ಕಂಡುಬಂದಿತ್ತು. ವಿಮಾನದಲ್ಲಿದ್ದ ಎಲ್ಲಾ 32 ಪ್ರಯಾಣಿಕರನ್ನು ಟರ್ಮಿನಲ್ 2 ರಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು, (ಏಜೆನ್ಸೀಸ್).